ಬೆಂಗಳೂರು: ಬಿಗ್‌ಬಾಸ್‌ನ ಆಗಮನದ ನಂತರ ದೇಶದಲ್ಲಿ ಜನರು ಟೆಲಿವಿಷನ್ ನೋಡುವ ರೀತಿಯೇ ಬದಲಾಗಿದೆ. ಬಿಗ್‌ಬಾಸ್ ಕನ್ನಡವೂ ಅಷ್ಟೆ. ಆರಂಭದಿಂದಲೂ ಜನಪ್ರಿಯತೆಯಲ್ಲಿ ಎಲ್ಲ ಶೋಗಳಿಗಿಂತಲೂ ಮುಂದಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಮೊಟ್ಟಮೊದಲ ಬಾರಿಗೆ ಜನಸಾಮಾನ್ಯರಿಗೆ ಪ್ರವೇಶ ಸಿಕ್ಕಿತು. ಈ ವರ್ಷವೂ ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಹದವಾದ ಮಿಶ್ರಣ ನೋಡುಗರಿಗೆ ಮುದ ನೀಡಲು ಸಜ್ಜಾಗಿದೆ.
ಎಲ್ಲ ರಿಯಾಲಿಟಿ ಶೋಗಳ ಬಾಸ್ ಎಂದೇ ಕರೆಯಲ್ಪಡುವ ‘ಬಿಗ್‌ಬಾಸ್’ನ ಆರನೆಯ ಆವೃತ್ತಿ ಅಕ್ಟೋಬರ್ 21ರ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ಚಾನೆಲ್‌ನಲ್ಲಿ ಆರಂಭವಾಗಲಿದೆ. ಸೋಮವಾರದಿಂದ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಬೃಹತ್ ಶೋಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಕುರಿತಂತೆ ಬಿಗ್ ಬಾಸ್ ತಂಡ ಮಾಹಿತಿ ನೀಡಿದ್ದು, ಇದು ಬಹುತೇಕ ಸಾಮಾನ್ಯ ಜನರ ಬಿಗ್‌ಬಾಸ್ ಆಗಿರಲಿದೆ. ಹಾಗೆಂದು ಈ ಬಾರಿ ಸೆಲೆಬ್ರಿಟಿಗಳು ಇರುವುದೇ ಇಲ್ಲ ಎಂದೇನಿಲ್ಲ. ಒಟ್ಟು ಹದಿನೆಂಟು ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಸೆಮಿ ಸೆಲೆಬ್ರಿಟಿಗಳು ಎಂದು ತಿಳಿಸಿದೆ.
ವಯಾಕಾಮ್ 18ನ ರೀಜನಲ್ ಚಾನೆಲ್‌ಗಳ ಹೆಡ್ ರವೀಶ್ ಕುಮಾರ್ ಮಾತನಾಡಿದ್ದು, ನಾವು ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವಾಗ ನಮ್ಮ ವೀಕ್ಷಕರ ಬೇಕು ಬೇಡ ಮತ್ತು ಅವರ ಆಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡಿರುತ್ತೇವೆ. ಕೇವಲ ಮೂರೇ ವರ್ಷಗಳಲ್ಲಿ ಕಲರ್ಸ್ ಸೂಪರ್ ಚಾನೆಲ್ ರೇಟಿಂಗ್‌ನಲ್ಲಾಗಲಿ, ಕಾರ್ಯಕ್ರಮ ವೈವಿಧ್ಯದಲ್ಲಾಗಲಿ ಭಾರೀ ಎತ್ತರಕ್ಕೆ ಏರಿದೆ. ಬಿಗ್‌ಬಾಸ್ ಯಾವ ರೀತಿಯ ಶೋ ಎಂದರೆ ಕಾರ್ಯಕ್ರಮ ನಡೆಯುವ ಅಷ್ಟೂ ದಿನ ಜನರನ್ನು ಟೆಲಿವಿಷನ್ ಸೆಟ್‌ಗೆ ಅಂಟಿ ಕೂರುವಂತೆ ಮಾಡುವಂಥದ್ದು ಎಂದಿದ್ದಾರೆ.
ವಯಾಕಾಮ್ 18 ಸಂಸ್ಥೆಯ ಕನ್ನಡ ಚಾನೆಲ್‌ಗಳು ಕನ್ನಡ ಮಾರುಕಟ್ಟೆಯ ಮುಂಚೂಣಿಯಲ್ಲಿ ಇದ್ದುಕೊಂಡು, ಅತ್ಯುತ್ತಮ ಗುಣಮಟ್ಟದ ರಿಯಾಲಿಟಿ ಶೋಗಳು ಹಾಗೂ ವೈವಿಧ್ಯಮಯ ಧಾರಾವಾಹಿಗಳನ್ನು ಜನರಿಗೆ ನೀಡುತ್ತಿವೆ ಎಂದಿದ್ದಾರೆ.
ಇನ್ನು ಈ ಕುರಿತಂತೆ ಮಾತನಾಡಿದ ವಯಾಕಾಮ್ 18 ಸಂಸ್ಥೆಯ ಕನ್ನಡ ಮಾರುಕಟ್ಟೆಯ ಬ್ಯುಸಿನೆಸ್ ಹೆಡ್ ಹಾಗೂ ಬಿಗ್‌ಬಾಸ್‌ನ ನಿರ್ದೇಶಕರೂ ಆಗಿರುವ ಪರಮೇಶ್ವರ ಗುಂಡ್ಕಲ್, ನಾವು ಈ ಶೋಗೆ ಸ್ಪರ್ಧಿಗಳನ್ನು ಹುಡುಕುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಕ್ಯಾರೆಕ್ಟರ್‌ಗಳನ್ನು ಹುಡುಕುತ್ತಿರುತ್ತೇವೆ. ಆ ಕ್ಯಾರೆಕ್ಟರ್‌ಗಳು ಸೆಲೆಬ್ರಿಟಿಗಳಲ್ಲಿಯೂ ಇರಬಹುದು, ಜನ ಸಾಮಾನ್ಯರಲ್ಲೂ ಇರಬಹುದು. ಈ ಬಾರಿಯ ಹದಿನೆಂಟೂ ಜನರು ಬಹಳ ಇಂಟರೆಸ್ಟಿಂಗ್ ಕ್ಯಾರೆಕ್ಟರ್‌ಗಳಾಗಿರುತ್ತಾರೆ ಎಂದರು.
ಒಮ್ಮೆ ಮನೆಯೊಳಗೆ ಹೋದ ಮೇಲೆ ಅವರು ಸೆಲೆಬ್ರಿಟಿಗಳೋ ಜನ ಸಾಮಾನ್ಯರೋ ಎಂಬ ಪ್ರಶ್ನೆ ಮುಖ್ಯವಾಗುವುದಿಲ್ಲ. ಅವರು ಎಷ್ಟು ಮನರಂಜನೆ ನೀಡುತ್ತಾರೆ ಎನ್ನುವುದಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ ಎಂದಿದ್ದಾರೆ.
ಪ್ರತಿ ವರ್ಷದಂತೆ ಬಿಗ್‌ಬಾಸ್‌ನ ಬಹುದೊಡ್ಡ ಸೆಲೆಬ್ರಿಟಿ ಕಿಚ್ಚ ಸುದೀಪ್ ಎನ್ನುತ್ತಾರೆ ಪರಮ್. ಸುದೀಪ್ ಅವರ ಗತ್ತು, ಗೈರತ್ತು ಈ ಶೋನ ಬಹುದೊಡ್ಡ ಆಕರ್ಷಣೆಗಳಲ್ಲಿ ಒಂದು. ಅದು ಈ ಬಾರಿಯೂ ಮುಂದುವರಿಯಲಿದೆ ಎಂದಿದ್ದಾರೆ.
ಕಿಚ್ಚ ಸುದೀಪ್ ಮಾತನಾಡಿ, ನನ್ನ ಸಿನಿಮಾಗಳ ಹೊರತಾಗಿ ಪ್ರತಿ ವರ್ಷ ನಾನು ಕ್ರಿಕೆಟ್ ಆಡುತ್ತೇನೆ, ಪ್ರಯಾಣ ಮಾಡುತ್ತೇನೆ, ಅಡುಗೆಯನ್ನೂ ಮಾಡುತ್ತೇನೆ. ಹಾಗೆಯೇ ಬಿಗ್‌ಬಾಸ್ ನಡೆಸಿಕೊಡುತ್ತೇನೆ. ಇದು ನನಗೆ ಬಹಳ ಪ್ರಿಯವಾದ ವಿಷಯ. ಹೊಸ ಹೊಸ ಸ್ಪರ್ಧಿಗಳನ್ನು ಭೇಟಿಯಾಗಲು ನಾನು ಕೂಡಾ ತುಂಬಾ ಉತ್ಸುಕನಾಗಿದ್ದೇನೆ ಎನ್ನುತ್ತಾರೆ.
ಹೇಗಿದೆ ಗೊತ್ತಾ ಬಿಗ್ ಬಾಸ್ ಹೊಸ ಮನೆ?
ಬಿಡದಿಯ ಇನ್ನೋವೇಟಿವ್ ಫಿಲ್‌ಮ್ ಸಿಟಿಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಅಗ್ನಿ ಅನಾಹುತದ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಆ ಅವಘಡದಲ್ಲಿ ಬಿಗ್‌ಬಾಸ್ ಮನೆಯೂ ಭಸ್ಮವಾಗಿ ಹೋಗಿತ್ತು. ಹಾಗಾಗಿ ಈ ಬಾರಿ ಸಂಪೂರ್ಣವಾಗಿ ಹೊಸದಾಗಿ ಮನೆಯನ್ನು ನಿರ್ಮಿಸಲಾಗಿದೆ.
ಈ ಬಾರಿಯ ಮನೆ ಇನ್ನಷ್ಟು ವಿಶಾಲವಾಗಿರಲಿದೆ. ಮೇಕಪ್ ಮಾಡಿಕೊಳ್ಳಲೆಂದೇ ಪೌಡರ್ ರೂಮ್ ಸೇರಿದಂತೆ ಹೊಸ ಆಕರ್ಷಣೆಗಳೂ ಮನೆಯಲ್ಲಿವೆ. ಮನೆಯ ಹೊರಗಿನ ಗಾರ್ಡನ್ ಏರಿಯಾದಲ್ಲಿ ಹೊಸದಾಗಿ ವಿಶೇಷವಾದ ಗಿಡವೊಂದನ್ನು ನೆಡಲಾಗಿದೆ. ಭಾರೀ ವೆಚ್ಚದ ಈ ಗಿಡವನ್ನು ಬೇರೆ ನಗರದಿಂದ ಇಲ್ಲಿಗೆ ತರಲಾಗಿದೆ.
ಇನ್ನು, ನಿರ್ಮಾಣದ ಹೊಣೆ ಹೊತ್ತಿರುವ ಎಂಡೆಮಾಲ್ ಶೈನ್ ಸಂಸ್ಥೆಯ ಸಿಇಓ ಅಭಿಷೇಕ್ ರೇಗೆ ಮಾತನಾಡಿದ್ದು, ನಾವು ಎಂಡೆಮಾಲ್ ಸಂಸ್ಥೆಯಲ್ಲಿರುವ ಎಲ್ಲರೂ ಇನ್ನೊಂದು ಸೀಸನ್‌ನ ಕನ್ನಡ ಬಿಗ್‌ಬಾಸ್ ನಡೆಸಿ ಕೊಡಲು ತುಂಬಾ ಸಿದ್ಧತೆ ಮಾಡಿಕೊಂಡಿದ್ದೇವೆ. ಸ್ಪರ್ಧಿಗಳಿಗೆ ಅನಿರೀಕ್ಷಿತ ತಿರುವುಗಳನ್ನು ನೀಡಿ ವೀಕ್ಷಕರಿಗೆ ಗರಿಷ್ಠ ಮಟ್ಟದ ಮನರಂಜನೆ ನೀಡುವುದು ನಮ್ಮೆಲ್ಲರ ಉದ್ದೇಶ ಎನ್ನುತ್ತಾರೆ.
ಕಿಚ್ಚ ಸುದೀಪ್ ಅವರ ಅತ್ಯುತ್ತಮ ನಿರೂಪಣೆ ಮತ್ತು ಸೆಮಿ ಸೆಲೆಬ್ರಿಟಿಗಳು ಹಾಗೂ ಜನಸಾಮಾನ್ಯರ ಅದ್ಭುತ ಮಿಶ್ರಣ ಈ ಬಾರಿ ನೋಡುಗರಿಗೆ ಭಾರೀ ಮಜಾ ನೀಡುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.
ಈ ಬಾರಿಯ ಬಿಗ್‌ಬಾಸ್‌ನಲ್ಲಿ ಭಾಗವಹಿಸಲು ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಇದಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈಗ ಯಾರು ಮನೆಯೊಳಗೆ ಹೋಗುತ್ತಾರೆ ಎಂಬ ಕುತೂಹಲವೂ ಗರಿಗೆದರಿದೆ. ಅಂದರೆ ಕಳೆದ ಐದು ಸೀಸನ್‌ಗಳ ಕಾಲ ಈ ಶೋ ಜನರನ್ನು ರಂಜಿಸಿರುವ ರೀತಿ ಬಿಗ್‌ಬಾಸ್ ಬಗ್ಗೆ ಜನರಲ್ಲಿ ಅಷ್ಟರ ಮಟ್ಟಿನ ಕುತೂಹಲ ಹುಟ್ಟಿಸಿದೆ.
ಒಟ್ಟಿನಲ್ಲಿ ಬಿಗ್‌ಬಾಸ್ ಶುರುವಾಗುತ್ತದೆ ಎಂದರೆ ಬಿಗ್‌ಬಾಸ್ ಪ್ರಿಯರಿಗೆ ಹಬ್ಬದ ವಾತಾವರಣ. ಮುಂದಿನ ನೂರು ದಿನಗಳ ಕಾಲ ಅದರದ್ದೇ ಚರ್ಚೆ, ಅದರದ್ದೇ ಮಾತು.
ಬಿಗ್‌ಬಾಸ್ ಕಲರ್ಸ್ ಸೂಪರ್ ಚಾನೆಲ್‌ನಲ್ಲಿ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಗ್ರ್ಯಾಂಡ್ ಓಪನಿಂಗ್ ಅಕ್ಟೋಬರ್ 21, ಭಾನುವಾರ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಮನೆಯೊಳಗೆ ಯಾರು ಹೋಗುತ್ತಾರೆ, ಅವರು ಯಾವ ರೀತಿ ಇರುತ್ತಾರೆ, ಅವರನ್ನು ಕಳುಹಿಸಿಕೊಡಲು ಯಾರು ಬರುತ್ತಾರೆ, ಸುದೀಪ್ ಏನು ಹೇಳುತ್ತಾರೆ- ಈ ಎಲ್ಲ ಪ್ರಶ್ನೆಗಳಿಗೆ ಅಂದು ಉತ್ತರ ದೊರೆಯಲಿದೆ.
Discussion about this post