ಬೆಂಗಳೂರು: ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾದ ಹಿನ್ನೆಲೆಯಲ್ಲಿ ಇಂದು ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಅರ್ಧದಲ್ಲೆ ಭಾಷಣ ಮೊಟಕುಗೊಳಿಸಿದ ಘಟನೆ ನಡೆದಿದೆ.
ವಿಧಾನಸಭೆಯಲ್ಲಿಂದು ರಾಜ್ಯಪಾಲ ವಾಜುಬಾಯಿ ವಾಲಾ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ನಡೆಸಿ ಗದ್ದಲ ಎಬ್ಬಿಸಿದರು. ಬಿಜೆಪಿ ಸದಸ್ಯರು ರಾಜ್ಯದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ರಾಜ್ಯಪಾಲರ ಮೂಲಕ ಸುಳ್ಳು ಭಾಷಣ ಮಾಡಿಸುತ್ತಿದೆ ಎಂದು ಪ್ರತಿಭಟನೆ ನಡೆಸಿದರು. ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಎರಡು ಪುಟಗಳನ್ನು ರಾಜ್ಯಪಾಲರು ಓದಿದರು. ನಂತರ ಗದ್ದಲ ತೀವ್ರಗೊಂಡ ಪರಿಣಾಮ ತಮ್ಮ ಪೂರ್ಣ ಭಾಷಣದ ಪ್ರತಿಯನ್ನು ಸದನದಲ್ಲಿ ಮಂಡಿಸುತ್ತಿರುವುದಾಗಿ ಹೇಳಿ ಭಾಷಣ ಮೊಟಕುಗೊಳಿಸಿ, ತೆರಳಿದರು.
22 ಪುಟಗಳ ಪೈಕಿ 2 ಪುಟಗಳನ್ನು ಓದಿ ರಾಜ್ಯಪಾಲರು ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿ ವಿಧಾನಸಭೆಯಿಂದ ಹೊರ ನಡೆದರು.
ಕಾಂಗ್ರೆಸ್-ಜೆಡಿಎಸ್ ನ ಮೈತ್ರಿ ಸರ್ಕಾರಕ್ಕೆ ಬಿಜೆಪಿ ಸದಸ್ಯರು ಬಜೆಟ್ ಅಧಿವೇಶನಕ್ಕೆ ಅಡ್ಡಿ ಮಾಡಲಿದ್ದಾರೆ ಎನ್ನುವ ಆತಂಕ ಇತ್ತು ಆದರೆ ಅವರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡುವ ನಿರೀಕ್ಷೆ ಯಾವುದು ಇರಲಿಲ್ಲ. ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆ ಸದನದ ಭಾವಿಗಿಳಿದಾಗ ಆಡಳಿತ ಪಕ್ಷದ ಸದಸ್ಯರು ಒಂದು ಕ್ಷಣ ವಿಚಲಿತರಾಗಿದ್ದು ಕಂಡು ಬಂತು.
ಇನ್ನು, ಘಟನೆ ಕುರಿತಂತೆ ಮಾತನಾಡಿರುವ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ವಿಧಾನಮಂಡಲದ ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಮಾಡಿದ ಬಿಜೆಪಿ ವರ್ತನೆ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Discussion about this post