ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊರೋನಾ ಸೃಷ್ಟಿಸಿರುವ ತ್ರಿಶಂಕು ಸ್ಥಿತಿಯಿಂದ ದೇಶಕ್ಕೆ ದೇಶವೇ ಸ್ಥಬ್ದವಾಗಿರುವ ಈ ಪರಿಸ್ಥಿತಿಯಲ್ಲಿ ಮಾಧ್ಯಮಗಳು ತೋರಿಸುವ ಸಮಸ್ಯೆಗಳ ಸತ್ಯವನ್ನು ಮಾತ್ರ ನೋಡುವ ನಾವು ಕಣ್ಣಿಗೆ ಕಾಣದ ಅದೆಷ್ಟೋ ಜನರ ಯಾತನೆಗಳನ್ನು ನೋಡಲಾಗುವುದಿಲ್ಲ.
ಕೊರೋನಾ ಪೀಡಿತರ ಗೋಳಿನ ಮಧ್ಯೆ ಇತರ ರೋಗಿಗಳ ಪಾಡನ್ನು ಕೇಳುವವರೇ ಇಲ್ಲವಾಗಿದೆ. ಈ ನಡುವೆ ನಿತ್ಯ ನೂರಾರು ಜನರಿಗೆ ಅತ್ಯಗತ್ಯ ಬೇಕಿರುವ ರಕ್ತದ ಕೊರತೆ ನೀಗಿಸುವಲ್ಲಿ ಬ್ಲಡ್ ಬ್ಯಾಂಕುಗಳು ಮೊದಲಿನಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಇತರೆ ಅವಶ್ಯಕತೆಗಳನ್ನು ಮುಂದೂಡಬಹುದಾದರೂ ಅನೀಮಿಯಾ, ಡಯಾಲಿಸಿಸ್ ಮತ್ತಿತರೆ ರಕ್ತದ ಅವಶ್ಯವಿರುವ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದಿನವಿರಲಿ, ಒಂದು ಗಂಟೆಯನ್ನೂ ಮುಂದೂಡಲು ಸಾಧ್ಯವಿಲ್ಲ.
ಬ್ಲಡ್ ಬ್ಯಾಂಕುಗಳ ಸಹಾಯದಿಂದ ಈ ರೋಗಿಗಳ ಅಗತ್ಯತೆ ಹೇಗೋ ಪೂರೈಸುತ್ತಿತ್ತು. ಈಗ ಈ ಕಾಯಕಕ್ಕೂ ಕಂಟಕ ಎದುರಾಗಿರುವುದು ದುರದೃಷ್ಟಕರ. ದಾನಿಗಳ ನೆರವಿನಿಂದ ಸಾಂಗವಾಗಿ ನಡೆಯುತ್ತಿದ್ದ ಪುಣ್ಯದ ಕೆಲಸಕ್ಕೆ ಕೊರೋನಾ ಮಹಾಮಾರಿ ಅಡ್ಡ ಬಂದಿದೆ. ನಿತ್ಯ ರಕ್ತದ ಅವಶ್ಯಕತೆಯಿರುವ ರೋಗಿಗಳು ಪರಿತಪಿಸುವಂತಾಗಿದೆ. ದಾನಿಗಳ ಕೊರತೆ ಅನುಭವಿಸುತ್ತಿರುವ ಬ್ಲಡ್ ಬ್ಯಾಂಕುಗಳು ಲಾಕ್ ಡೌನ್ ಸಮಸ್ಯೆಯಿಂದಾಗಿ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಆಗಾಗ್ಗೆ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಕೊರತೆ ನೀಗಿಸಿಕೊಳ್ಳುತ್ತಿದ್ದ ಈ ಬ್ಲಡ್ ಬ್ಯಾಂಕುಗಳು ಈಗ ಸ್ವಯಂ ಪ್ರೇರಿತ ದಾನಿಗಳನ್ನು ಮಾತ್ರ ಅವಲಂಬಿಸಬೇಕಿದೆ. ಆದರೆ ಲಾಕ್ ಡೌನ್ ನಿಂದಾಗಿ ಹೊರಬರಲು ದಾನಿಗಳೂ ಹೆದರುತ್ತಿದ್ದಾರೆ.
ಅಗತ್ಯ ಸೇವೆಗಳ ಅಡಿಯಲ್ಲಿ ರಕ್ತದಾನವೂ ಸೇರುವುದರಿಂದ ದಾನಿಗಳು ರಕ್ತದಾನಕ್ಕೆಂದು ತಿಳಿಸಿ ಬರಬಹುದಾಗಿದೆ ಮತ್ತು ತೆರಳುವಾಗ ರಕ್ತದಾನ ಮಾಡಿದ ಸರ್ಟಿಫಿಕೇಟ್ ಪಡೆದು ಅಗತ್ಯಬಿದ್ದಲ್ಲಿ ಪೋಲೀಸರಿಗೆ ತೋರಿಸಬಹುದಾಗಿದೆ. ಈ ಕುರಿತು ಹೊರಬರಲು ಭಯಬೀಳದೇ ಯುವಕರು ಮುಂದಾಗಬೇಕಿದೆ. ನಮಗೆ ಆಹಾರದ ಕೊರತೆಯಾದಲ್ಲಿ ಪರ್ಯಾಯವಿದೆ. ಆದರೆ ಪರ್ಯಾಯವೇ ಇಲ್ಲದ ಏಕೈಕ ವಸ್ತು ಎಂದರೆ ರಕ್ತ ಮಾತ್ರ. ರಕ್ತಕ್ಕೆ ರಕ್ತವೇ ಪರ್ಯಾಯವಾಗಿದ್ದು ಕೃತಕ ತಯಾರಿಕೆ ಅಸಾಧ್ಯವಾದ್ದರಿಂದ ರಕ್ತದಾನ ಇಂದು ಶ್ರೇಷ್ಠ ದಾನವಾಗಿದೆ.
ಯಾವುದೇ ಕೆಲಸದ ಒತ್ತಡವಿಲ್ಲದ ಹಾಗೂ ಸಮಯಾಭಾವದ ಚಿಂತೆಯಿಲ್ಲದೇ ದಿನಗಳನ್ನು ಒತ್ತಾಯಪೂರ್ವಕವಾಗಿ ಮನೆಯಲ್ಲೇ ಕಳೆಯಬೇಕಾದ ಅನಿವಾರ್ಯತೆಯ ಈ ಸುಸಮಯವನ್ನು ಯುವಕರು, 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಕ್ತದಾನಕ್ಕಾಗಿ ಸದ್ಬಳಕೆ ಮಾಡಿಕೊಂಡು ಇತರರಿಗೂ ಮಾದರಿಯಾಗುವ ಅವಕಾಶ ಸೃಷ್ಟಿಸಿಕೊಂಡು ಈ ಪುಣ್ಯದ ಕೆಲಸಕ್ಕೆ ಮುಂದಾಗಿ ದೇವರ ಕೃಪೆಗೆ ಒಳಗಾಗಬಹುದಾಗಿದೆ ಮತ್ತು ರೋಗಿಗಳ ಮುಖದಲ್ಲಿ ಮಂದಹಾಸ ಮೂಡಿಸಬಹುದಾಗಿದೆ.
ಯುವಕರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಿರಪರಿಚಿತ ಯುವ ಉದ್ಯಮಿ ಡಿ.ಎಸ್. ಅರುಣ್ ಒಂದು ಹೆಜ್ಜೆಯನ್ನು ಈಗಾಗಲೇ ಇಟ್ಟು ಅಗತ್ಯವಿರುವವರಿಗೆ ರೋಟರಿ ಬ್ಲಡ್ ಬ್ಯಾಂಕ್ ಮೂಲಕ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಇವರ ಮಿತ್ರವೃಂದದವರೂ ಇವರನ್ನು ಅನುಸರಿಸಿ ರಕ್ತದಾನ ಮಾಡಿರುವುದು ಈ ಸಮಯದಲ್ಲಿ ಪ್ರಸ್ತುತ. ದಯಮಾಡಿ ದಾನಿಗಳು, ಯುವಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ನಿಟ್ಟಿನಲ್ಲಿ ಮುಂದಾಗಿ ಬಂದು ಪ್ರಸ್ತುತ ಲಾಕ್ ಡೌನ್ ಸಮಯದಲ್ಲಿ ತಮಗೆ ಸಮೀಪವಿರುವ ಯಾವುದೇ ರಕ್ತದಾನ ಕೇಂದ್ರಕ್ಕೆ ತೆರಳಿ ರಕ್ತದಾನ ಮಾಡುವ ಮೂಲಕ ರಕ್ತದ ಅಗತ್ಯವಿರುವ ರೋಗಿಗಳ ಪಾಲಿಗೆ ಮರಳುಗಾಡಿನ ಓಯಸಿಸ್ ಗಳಾಗುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮನಃಪೂರ್ವಕವಾಗಿ ವಿನಂತಿಸಲಾಗಿದೆ.
ವಿ.ಸೂ: ಆಸಕ್ತ ದಾನಿಗಳು ಕರೆ ಮಾಡಿದಲ್ಲಿ ರೋಟರಿ ರಕ್ತನಿಧಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ದಾನಿಗಳು ಇದರ ಸೌಲಭ್ಯ ಉಪಯೋಗಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕ ಸಂಖ್ಯೆಗಳು
ಸತೀಶ್, ರೋಟರಿ ರಕ್ತನಿಧಿ, ಶಿವಮೊಗ್ಗ
08182-274333, 9449685360
ಧರಣೇಂದ್ರ ದಿನಕರ್
ಸಂಜೀವಿನಿ ರಕ್ತನಿಧಿ,
ಜೆಪಿಎನ್ ರಸ್ತೆ ಶಿವಮೊಗ್ಗ
9481210866, 9844101866
Get in Touch With Us info@kalpa.news Whatsapp: 9481252093
Discussion about this post