ಮುಂಬೈ: ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲೇ ಖ್ಯಾತ ನಟಿ ಊರ್ಮಿಳಾ ಮಾತೋಡ್ಕರ್ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಊರ್ಮಿಳಾ ಅವರನ್ನು ಮುಂಬೈ ಉತ್ತರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ.
ಪಕ್ಷ ಸೇರ್ಪಡೆ ನಂತರ ಮಾತನಾಡಿರುವ ಊರ್ಮಿಳಾ, ಆತ್ಮೀಯ ಸ್ವಾಗತ ಕೋರಿದ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು. ಸಕ್ರಿಯ ರಾಜಕೀಯಕ್ಕೆ ಇಂದು ನನ್ನ ಮೊದಲ ಹೆಜ್ಜೆಯಾಗಿದ್ದು, ಇದು ನನ್ನ ಜೀವನದ ಮಹತ್ವದ ದಿನವಾಗಿದೆ. ನನ್ನ ಚಿಂತನೆಗಳು ಮಹಾತ್ಮಾ ಗಾಂಧೀಜಿ, ಜವಹರ ಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಾ ಬಾಯ್ ಪಟೇಲ್ ಅವರಿಂದ ಪ್ರೇರಿತವಾಗಿದ್ದು, ಇವರ ದಾರಿಯಲ್ಲೇ ನಡೆಯುತ್ತೇನೆ ಎಂದಿದ್ದಾರೆ.

















