ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಭಾರತೀಯ ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ವಿಶ್ವ ವಿಖ್ಯಾತ ರಾಮೋಜಿ ಫಿಲಂ ಸಿಟಿ ಖ್ಯಾತಿಯ ರಾಮೋಜಿ ರಾವ್(88) #RamojiRao ಇಂದು ನಸುಕಿನಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಸುಕಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ರಾಮೋಜಿ ಫಿಲಂ ಸಿಟಿಯಲ್ಲಿರುವ #RamojiFilmCity ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ರಾಮೋಜಿ ರಾವ್ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
1936ರ ನ.16ರಂದು ಆಂಧ್ರಪ್ರದೇಶದ #AndraPradesh ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ರಾಮೋಜಿ ರಾವ್ ಅವರು ಜನಿಸಿದರು.
ತೆಲಂಗಾಣದ #Telangana ರಾಜಧಾನಿಯಲ್ಲಿ ಪ್ರಸಿದ್ಧವಾದ ಸಮಗ್ರ ಉತ್ಪಾದನಾ ಸೌಲಭ್ಯವನ್ನು ಹೊಂದಿರುವ ರಾಮೋಜಿ ಗ್ರೂಪ್ ಸಂಸ್ಥಾಪಕರಾಗಿ ರಾವ್ ಖ್ಯಾತರಾಗಿದ್ದಾರೆ.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಹಿರಿಯ ನಾಯಕ ಜಿ. ಕಿಶನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.
ಶ್ರೀರಾಮೋಜಿ ರಾವ್ ಅವರ ನಿಧನದಿಂದ ದುಃಖವಾಗಿದೆ. ತೆಲುಗು ಮಾಧ್ಯಮ ಮತ್ತು ಪತ್ರಿಕೋದ್ಯಮಕ್ಕೆ ಅವರ ಗಮನಾರ್ಹ ಕೊಡುಗೆ ಶ್ಲಾಘನೀಯ. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪಗಳು ಎಂದು ರೆಡ್ಡಿ ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು, ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿರುವ ರಾಮೋಜಿ ರಾವ್ ಅವರು, ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್’ಗಳನ್ನು ಸ್ಥಾಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post