ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತಂತೆ ಇಂದು ಸಂಜೆ ಖಾಸಗಿ ಹೊಟೇಲ್’ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದರು. ಇದಕ್ಕೂ ಮುನ್ನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಶೋಕ್ ಹೆಸರನ್ನು ಸೂಚಿಸಿದರು. ಶಾಸಕ ಸುನಿಲ್ ಕುಮಾರ್ ಅನುಮೋದನೆ ನೀಡಿದರು.
ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದೊಳಗೆ ಅಸಮಾಧಾನ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಆಗಮಿಸಿದ್ದರು.
ಸಭೆಗೂ ಮುನ್ನ ಅಸಾಮಾಧಾನ ಸ್ಫೋಟಗೊಂಡಿತ್ತು. ಹಿರಿಯ ನಾಯಕರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಹೊರ ನಡೆದಿದ್ದಾರೆ. ಹೈಕಮಾಂಡ್ ನಿಲುವು ಸ್ಪಷ್ಟವಾಗುತ್ತಿದ್ದಂತೆಯೇ ಆಮೇಲೆ ಮಾತಾಡ್ತೀವಿ ಎಂದು ಹೊರ ನಡೆದ ಯತ್ನಾಳ್‍ಗೆ ರಮೇಶ್ ಜಾರಕಿಹೊಳಿಯೂ ಸಾಥ್ ನೀಡಿದರು.
ಆಯ್ಕೆ ಬಳಿಕ ಮಾತನಾಡಿದ ಆರ್. ಅಶೋಕ್, ಕಾಂಗ್ರೆಸ್ ದುರಾಡಳಿತ ಜನರ ಮುಂದೆ ಇಡಲಿದ್ದೇವೆ. ಮುಂಬರುವ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸೋಣ. ಒಂದು ಚುನಾವಣೆಯ ಸೋಲಿನಿಂದ ನಾವು ಹೆದರಿ ಕೂರೋದಿಲ್ಲ. ಹೈಕಮಾಂಡ್ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ ಎಂದರು.
ಪಕ್ಷ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಅದನ್ನು ಸರಿಯಾಗಿ ನಿಭಾಯಿಸುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ 45 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ನ ದುರಾಳಿತವ್ನನು ಜನರ ಮುಂದಿಡಲು ಪ್ರಯತ್ನಿಸುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post