ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶೀಘ್ರದಲ್ಲೇ ತನ್ನ ಎಲ್ಲಾ ಡೆಬಿಟ್ ಕಾರ್ಡ್ ಸೇವೆಯನ್ನು ರದ್ದುಗೊಳಿಸಲಿದೆ.
ಈ ಕುರಿತಂತೆ ದೆಹಲಿಯಲ್ಲಿ ನಡೆದ ಬ್ಯಾಂಕಿಂಗ್ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಎಸ್’ಬಿಐ ಚೇರ್ಮನ್ ರಜನೀಶ್ ಕುಮಾರ್, ಡೆಬಿಟ್ ಕಾರ್ಡ್ ಬಳಕೆ ನಿರ್ಮೂಲನೆ ಮಾಡುವುದು ನಮ್ಮ ಆಶಯವಾಗಿದೆ. ನಾವು ಅವುಗಳ ಬಳಕೆ ಸ್ಥಗಿತಗೊಳಿಸುವ ಬಗ್ಗೆ ನನಗೆ ವಿಶ್ವಾಸ ಇದೆ. ಡೆಬಿಟ್ ಕಾರ್ಡ್ ರಹಿತ ಬ್ಯಾಂಕಿಂಗ್ ವ್ಯವಸ್ಥೆಗೆ, ಬ್ಯಾಂಕ್ ಈಗಾಗಲೇ ಅಭಿವೃದ್ಧಿಪಡಿಸಿರುವ ಡಿಜಿಟಲ್ ಸೇವೆ ಯೋನೊ ಆ್ಯಪ್ ಪರ್ಯಾಯವಾಗಲಿದೆ. ಈ ಆ್ಯಪ್ ನೆರವಿನಿಂದ ಎಟಿಎಂಗಳಿಂದ ನಗದು ಪಡೆಯಬಹುದು. ಅಂಗಡಿ ಮಳಿಗೆಗಳಲ್ಲಿ ಹಣ ಪಾವತಿಸಬಹುದು ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ಡೆಬಿಟ್ ಕಾರ್ಡ್ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಉದ್ದೇಶಿಸಿರುವ ಎಸ್’ಬಿಐ, ಕ್ರಮೇಣವಾಗಿ ಬಳಕೆಯನ್ನು ಕಡಿಮೆಗೊಳಿಸುವುದಾಗಿ ಹೇಳಿದೆ.
ಡೆಬಿಟ್ ಕಾರ್ಡ್‌ಗೆ ಪರ್ಯಾಯವಾಗಿ ಯೋನೊ ಆ್ಯಪ್ ಮೂಲಕ ನಗದು ಪಡೆಯುವ ಸೇವೆಯನ್ನು ಈಗಾಗಲೇ ಆರಂಭಿಸಿದ್ದು, 68 ಸಾವಿರ ಯೋನೊ ಕ್ಯಾಷ್ ಪಾಯಿಂಟ್ಸ್’ಗಳನ್ನು ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಎಸ್’ಬಿಐ ಡೆಬಿಟ್ ಕಾರ್ಡ್ ಬಳಕೆ ಸ್ಥಗಿತಗೊಳ್ಳುವ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರು ಈಗನಿಂದಲೇ ಯೋನೊ ಆ್ಯಪ್ ಬಳಕೆಯನ್ನು ಆರಂಭಿಸುವುದು ಸೂಕ್ತ.
Discussion about this post