ನವದೆಹಲಿ: ಗಡಿಯಲ್ಲಿನ ಪರಿಸ್ಥಿತಿ ಯುದ್ಧದ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಭೆ ಮುಕ್ತಾಯವಾಗಿದ್ದು, ಯಾವ ನಿರ್ಧಾರಕ್ಕೆ ಬರಲಾಗಿದೆ ಎಂಬ ಕುತೂಹಲ ಮೂಡಿದೆ.
ಇಂದು ಸಂಜೆ ಪ್ರಧಾನಿಯವರ ನಿವಾಸದಲ್ಲಿ ನಡೆದ ಸುಮಾರು 75 ನಿಮಿಷಗಳ ಮಹತ್ವ ಸಭೆಯಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ವಾಯುಪಡೆಯ ಮುಖ್ಯಸ್ಥ ಬೀರೇಂದ್ರ ಸಿಂಗ್ ಧನೋವಾ ಹಾಗೂ ನೌಕಾಪಡೆಯ ಮುಖ್ಯಸ್ಥ ಸುನಿಲ್ ಲಂಬಾ ಅವರೊಂದಿಗೆ ಮಹತ್ವ ಚರ್ಚೆ ನಡೆದಿದೆ.
ಪಾಕಿಸ್ಥಾನ ವಿಮಾನಗಳ ಭಾರತದ ಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಗುವಿನ ಪರಿಸ್ಥಿತಿ ಹಾಗೂ ಮುಂಬರಬಹುದಾದ ಎಲ್ಲ ರೀತಿಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಮೂರೂ ಪಡೆಗಳ ಸಿದ್ದತೆ ಕುರಿತಾಗಿ ಪ್ರಧಾನಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದ್ದು, ದೇಶದ ರಕ್ಷಣೆಗಾಗಿ ಎಲ್ಲ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ, ದೇಶದ ಭದ್ರತೆ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ರಾಷ್ಟಿಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದಲ್ಲಿ ಇನ್ನೊಂದೆಡೆ ಮಹತ್ವದ ಸಭೆ ನಡೆದಿದೆ.
ಗುಪ್ತಚರ ಇಲಾಖೆ, ರಾ ಸೇರಿದಂತೆ ಪ್ರಮುಖರೊಂದಿಗೆ ಮಹತ್ವದ ತುರ್ತು ಸಭೆ ನಡೆಸಿರುವ ಧೋವಲ್, ಎಲ್ಲ ಮಾಹಿತಿಯನ್ನು ಪ್ರಧಾನಿಯವರಿಗೆ ತಿಳಿಸಲಿದ್ದಾರೆ.
Discussion about this post