ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಿಳೆಯರು ಸ್ತನ (Breast Cancer) ಮತ್ತು ಸ್ತ್ರೀರೋಗ ಸಂಬಂಧಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಎದುರಿಸುವ ಹಿಂಜರಿಕೆ ಹಾಗೂ ಮುಜುಗರವನ್ನು ಗಮನದಲ್ಲಿಟ್ಟುಕೊಂಡು, ಮಣಿಪಾಲ್ ಆಸ್ಪತ್ರೆಯ ಕನಕಪುರ ರಸ್ತೆ ಘಟಕವು SOWMYA (Specialized Oncology for Women, Mindfully with You, Always!) ಎಂಬ ಮಹಿಳಾ-ಕೇಂದ್ರಿತ ಕ್ಯಾನ್ಸರ್ ಆರೈಕೆ ಸೇವೆಯನ್ನು ಪರಿಚಯಿಸಿದೆ.
‘ಮಹಿಳೆಯರಿಗಾಗಿ, ಮಹಿಳೆಯರಿಂದಲೇ’ ಎಂಬ ಪರಿಕಲ್ಪನೆಯಡಿ ರೂಪುಗೊಂಡಿರುವ SOWMYA, ಕ್ಯಾನ್ಸರ್ ತಪಾಸಣೆ, ರೋಗನಿರ್ಣಯ, ಚಿಕಿತ್ಸೆ ಹಾಗೂ ಅನುಸರಣಾ ಆರೈಕೆಯ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌಪ್ಯತೆ, ಸೌಕರ್ಯ ಮತ್ತು ಆತ್ಮವಿಶ್ವಾಸದ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಿದೆ.
ಆರೋಗ್ಯ ಸಮಸ್ಯೆ ಹೇಳಿಕೊಳ್ಳಲು ಮುಕ್ತ ವಾತಾವರಣ
ಸ್ತನ ಮತ್ತು ಸ್ತ್ರೀರೋಗ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ತಪಾಸಣೆ ಹಾಗೂ ಚಿಕಿತ್ಸೆಗಳು ಅತ್ಯಂತ ವೈಯಕ್ತಿಕ ಸ್ವರೂಪದ್ದಾಗಿರುವುದರಿಂದ ಅನೇಕ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಲು ಹಿಂಜರಿಯುತ್ತಾರೆ. ಈ ಹಿಂಜರಿಕೆ ಕೆಲವೊಮ್ಮೆ ವೈದ್ಯರನ್ನು ಸಂಪರ್ಕಿಸುವುದನ್ನೇ ವಿಳಂಬಗೊಳಿಸಬಹುದು.
ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು, ಪ್ರಶ್ನೆಗಳನ್ನು ಕೇಳಲು ಹಾಗೂ ರೋಗನಿರ್ಣಯ ಮತ್ತು ಚಿಕಿತ್ಸಾ ಆಯ್ಕೆಗಳ ಕುರಿತು ಸ್ಪಷ್ಟ ಮಾಹಿತಿ ಪಡೆಯಲು ಅನುಕೂಲವಾಗುವ ವಾತಾವರಣವನ್ನು SOWMYA ಮೂಲಕ ಕಲ್ಪಿಸಲಾಗುತ್ತಿದೆ.
ಡಾ. ಮಮತಾ ಅವರಿಂದ ಉಪಕ್ರಮಕ್ಕೆ ಚಾಲನೆ
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ಉಪ ನಿರ್ದೇಶಕಿ ಡಾ. ಮಮತಾ ಎಂ.ಎಸ್. ಅವರು SOWMYA ಉಪಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಹಾಸ್ಪಿಟಲ್ಸ್ ಸಮೂಹದ ಚೀಫ್ ಆಪರೇಟಿಂಗ್ ಆಫೀಸರ್ ಕಾರ್ತಿಕ್ ರಾಜಗೋಪಾಲ್, ದಕ್ಷಿಣ ಮತ್ತು ಪೂರ್ವ ವಲಯದ ಚೀಫ್ ಆಪರೇಟಿಂಗ್ ಆಫೀಸರ್ ದೀಪಕ್ ವೇಣುಗೋಪಾಲನ್, ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಮುರಳಿ ಶ್ರೀನಿವಾಸನ್, ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥೆ ಡಾ. ಕ್ಷಿತಿಜಾ ಕುಲಕರ್ಣಿ, ಕ್ಲಸ್ಟರ್ ಡೈರೆಕ್ಟರ್ ಮೋಹನ್ ಹರಿಹರನ್ ಹಾಗೂ ಮಹಿಳಾ ಕ್ಯಾನ್ಸರ್ ಆರೈಕೆ ತಜ್ಞರು ಉಪಸ್ಥಿತರಿದ್ದರು.
‘Her Health Passport’ ಪರಿಚಯ
SOWMYA ಉಪಕ್ರಮದ ಭಾಗವಾಗಿ ಮಹಿಳೆಯರ ಕ್ಯಾನ್ಸರ್ ಸ್ಕ್ರೀನಿಂಗ್ ವೋಚರ್‌ಗಳ ಜೊತೆಗೆ ‘Her Health Passport – My Breast Health Journey’ ಅನ್ನು ಪರಿಚಯಿಸಲಾಗಿದೆ.
ಈ ವೈಯಕ್ತಿಕ ಆರೋಗ್ಯ ಪಾಸ್‌ಪೋರ್ಟ್‌ನಲ್ಲಿ ಸ್ತನ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯದ ವಿವರಗಳು, ಸ್ಕ್ರೀನಿಂಗ್ ಇತಿಹಾಸ, ಚಿಕಿತ್ಸಾ ಯೋಜನೆ, ತಡೆಗಟ್ಟುವ ಆರೋಗ್ಯ ತಪಾಸಣೆ ಹಾಗೂ ಮುಂದಿನ ಆರೈಕೆಗೆ ಸಂಬಂಧಿಸಿದ ಶಿಫಾರಸುಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ.
Breast Cancer: ಆರಂಭಿಕ ಪತ್ತೆಗೆ ಆದ್ಯತೆ
ಉದ್ಘಾಟನೆ ಬಳಿಕ ಮಾತನಾಡಿದ ಡಾ. ಮಮತಾ ಎಂ.ಎಸ್., ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಸೂಕ್ಷ್ಮತೆ, ಗೌರವ ಮತ್ತು ಅವರ ಅಗತ್ಯಗಳ ಕುರಿತ ಅರಿವಿನೊಂದಿಗೆ ನಿರ್ವಹಿಸುವುದು ಅತ್ಯಂತ ಮುಖ್ಯ ಎಂದರು.
SOWMYA ರೀತಿಯ ಉಪಕ್ರಮಗಳು ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಹಾಗೂ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲು ಅನುಕೂಲಕರ ವಾತಾವರಣ ಸೃಷ್ಟಿಸುತ್ತವೆ. ವಿಶೇಷ ವೈದ್ಯಕೀಯ ಸೇವೆ, ಜಾಗೃತಿ ಮತ್ತು ಸಮಗ್ರ ಕ್ಯಾನ್ಸರ್ ಆರೈಕೆಯನ್ನು ಒಗ್ಗೂಡಿಸುವ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಮಹಿಳೆಯರನ್ನು ಪ್ರೋತ್ಸಾಹಿಸಲು ಸಾಧ್ಯ ಎಂದರು.
ಒಂದೇ ಮಹಡಿಯಲ್ಲಿ ಆಂಕೊಲಾಜಿ ಸೇವೆಗಳು
ಮಹಿಳಾ-ಕೇಂದ್ರಿತ ಆರೈಕೆಯ ಜೊತೆಗೆ ವೈದ್ಯಕೀಯ ಪರಿಣತಿ ಮತ್ತು ಆಧುನಿಕ ತಂತ್ರಜ್ಞಾನಕ್ಕೂ SOWMYA ಒತ್ತು ನೀಡಿದೆ. ಕನಕಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಮೀಸಲಾದ ಸಿಂಗಲ್-ಫ್ಲೋರ್ ಆಂಕೊಲಾಜಿ ಹಬ್ ಮೂಲಕ ಹೊರರೋಗಿ ಸಮಾಲೋಚನೆ, ರೋಗನಿರ್ಣಯ ಹಾಗೂ ಡೇ-ಕೇರ್ ಕಿಮೊಥೆರಪಿ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತದೆ.
ಇದರೊಂದಿಗೆ ರೋಬೋಟಿಕ್ ಸರ್ಜರಿ, ವಿಕಿರಣ ಚಿಕಿತ್ಸೆ, PET-CT ಮತ್ತು ಡಿಜಿಟಲ್ ಮ್ಯಾಮೊಗ್ರಫಿ ಸೇರಿದಂತೆ ಸುಧಾರಿತ ಚಿಕಿತ್ಸಾ ಸೌಲಭ್ಯಗಳನ್ನೂ ಒದಗಿಸಲಾಗಿದೆ.
‘ಹಿಂಜರಿಕೆ ದೂರ ಮಾಡುವ ಪ್ರಯತ್ನ’
ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆಯ ಸ್ತನ ಮತ್ತು ಸ್ತ್ರೀರೋಗ ಆಂಕೊ-ಸರ್ಜರಿ ಹಾಗೂ ರೋಬೋಟಿಕ್ ಸರ್ಜರಿ ಸಲಹೆಗಾರ್ತಿ ಡಾ. ಮೋನಿಕಾ ಪನ್ಸಾರಿ ಮಾತನಾಡಿ, ಕ್ಯಾನ್ಸರ್ ಆರೈಕೆಯಲ್ಲಿ ಕೆಲವೊಮ್ಮೆ ಮೊದಲ ಅಡಚಣೆ ಚಿಕಿತ್ಸೆಯಲ್ಲ, ಮಹಿಳೆಯರು ತಮ್ಮ ಸಮಸ್ಯೆಗಳ ಕುರಿತು ಮಾತನಾಡಲು ಅನುಭವಿಸುವ ಹಿಂಜರಿಕೆಯಾಗಿರುತ್ತದೆ ಎಂದರು.
Also Read>> ಸಿಇಸಿ ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ನಿರಾಕರಿಸಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು ಏಕೆ?
SOWMYA ಆ ಹಿಂಜರಿಕೆಯನ್ನು ದೂರ ಮಾಡುವ ಪ್ರಯತ್ನವಾಗಿದ್ದು, ಮಹಿಳೆಯರು ಯಾವುದೇ ಮುಜುಗರವಿಲ್ಲದೆ ಪ್ರಶ್ನೆಗಳನ್ನು ಕೇಳಲು ಮತ್ತು ತಮ್ಮ ಕಾಳಜಿಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಮಹಿಳಾ ತಜ್ಞರ ತಂಡ ಹಾಗೂ ಸಮಗ್ರ ಆರೈಕೆ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬ ಮಹಿಳೆಯೂ ಗೌರವಯುತ ಆರೈಕೆ ಪಡೆಯುವಂತೆ ಮಾಡುವುದು ಗುರಿಯಾಗಿದೆ ಎಂದು ತಿಳಿಸಿದರು.
ಸಮಗ್ರ ಕ್ಯಾನ್ಸರ್ ಆರೈಕೆಗೆ ಒತ್ತು
SOWMYA ಮೂಲಕ ಮಹಿಳೆಯರ ಕ್ಯಾನ್ಸರ್ ಆರೈಕೆಯನ್ನು ಕೇವಲ ಚಿಕಿತ್ಸೆಗೆ ಸೀಮಿತಗೊಳಿಸದೆ, ಗೌಪ್ಯತೆ, ಸೌಕರ್ಯ, ವೈಯಕ್ತಿಕ ಗಮನ, ಆಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಪರಿಣತಿಯನ್ನು ಒಳಗೊಂಡ ಸಮಗ್ರ ಆರೈಕೆ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು ಮಣಿಪಾಲ್ ಆಸ್ಪತ್ರೆ ಹೊಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













