ಕಲ್ಪ ಮೀಡಿಯಾ ಹೌಸ್ | ಗೋಕರ್ಣ (ಉತ್ತರ ಕನ್ನಡ) |
ಶ್ವಾಸದ (Breath) ಮೂಲಕ ನಮ್ಮ ಜೀವನವನ್ನು ಮಾತ್ರವಲ್ಲ, ಜಗತ್ತಿನ ಎಲ್ಲಾ ಆಗುಹೋಗುಗಳನ್ನು ತಿಳಿದುಕೊಳ್ಳಬಹುದು. ದೇಹದಲ್ಲಿ ಏನಿದೆಯೋ ಅದೇ ಬ್ರಹ್ಮಾಂಡದಲ್ಲಿಯೂ ಇರುವುದರಿಂದ, ಪ್ರಪಂಚದ ಆಗುಹೋಗುಗಳ ರಹಸ್ಯವನ್ನು ಉಸಿರಿನ ಮೂಲಕ ಅರಿಯಲು ಸಾಧ್ಯವಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ (Raghaveshwara Shri) ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ‘ಸ್ವರೋದಯ’ ರಾಷ್ಟ್ರೀಯ ಜ್ಯೌತಿಷ ವಿಚಾರಮಂಥನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಶರೀರ ಮತ್ತು ಪ್ರಕೃತಿ ಮುಂದೆ ಸಂಭವಿಸಬಹುದಾದ ಸನ್ನಿವೇಶಗಳ ಸೂಚನೆಗಳನ್ನು ನೀಡುತ್ತವೆ. ಇದನ್ನು ‘ಶಕುನ’ ಎಂದು ಕರೆಯಲಾಗುತ್ತದೆ ಮತ್ತು ಇದು ಜ್ಯೌತಿಷದ ಒಂದು ಭಾಗವಾಗಿದೆ ಎಂದು ವಿವರಿಸಿದರು.
Breath: ಶ್ವಾಸದ ಗತಿ ಅರಿತರೆ ಬದುಕಿನ ಅರಿವು
ಶ್ವಾಸದ ಕುರಿತಾದ ಸ್ವರಶಾಸ್ತ್ರವೂ ಜ್ಯೌತಿಷದ ಒಂದು ಅಂಗವಾಗಿದೆ. ಶ್ವಾಸದ ಗತಿಯನ್ನು ಅರ್ಥಮಾಡಿಕೊಂಡರೆ ಬದುಕನ್ನೇ ಅರ್ಥಮಾಡಿಕೊಂಡಂತೆ. ಎಲ್ಲರೂ ಮೂಗಿನ ಮೂಲಕ ಉಸಿರಾಡುತ್ತಾರೆ, ಉಸಿರನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಡುತ್ತಾರೆ. ಇದರಲ್ಲಿ ವಿಶೇಷವೇನಿಲ್ಲವೆಂದು ಭಾಸವಾಗಬಹುದು. ಆದರೆ ಶ್ವಾಸವೇ ಜೀವನವಾಗಿದ್ದು, ಉಸಿರಾಟದ ಮೂಲಕ ಜಗತ್ತಿನ ಹಲವು ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಶ್ರೀಗಳು ಹೇಳಿದರು.
ನಮ್ಮ ಜೀವನದಲ್ಲಿ ಎದುರಾಗುವ ಶುಭಾಶುಭಗಳನ್ನು ಉಸಿರಿನ ಅವಲೋಕನದ ಮೂಲಕ ತಿಳಿದುಕೊಳ್ಳುವುದರ ಜೊತೆಗೆ, ಮುಂದಿನ ಹೆಜ್ಜೆಗಳನ್ನು ಸರಿಪಡಿಸಿಕೊಳ್ಳಲು ಸಹ ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ದೈವಜ್ಞನಿಗೆ ಸ್ವರಶಾಸ್ತ್ರದ ಜ್ಞಾನ ಅಗತ್ಯ
ಶರೀರಕ್ಕೂ ತಲೆಗೂ ಇರುವ ಸಂಬಂಧದಂತೆಯೇ ಜ್ಯೌತಿಷಕ್ಕೂ ಸ್ವರಶಾಸ್ತ್ರಕ್ಕೂ ಸಂಬಂಧವಿದೆ. ಉಸಿರಾಟದ ಸೂಕ್ಷ್ಮ ಜ್ಞಾನವನ್ನು ಅರಿತುಕೊಂಡಿರದಿದ್ದರೆ ದೈವಜ್ಞನು ಪರಿಪೂರ್ಣನಾಗಲು ಸಾಧ್ಯವಿಲ್ಲ ಎಂದು ರಾಘವೇಶ್ವರ ಶ್ರೀ ಹೇಳಿದರು.
ಈ ಜ್ಞಾನ ದೈವಜ್ಞರಿಗೆ ಮಾತ್ರ ಸೀಮಿತವಾಗಿರದೆ, ಜನಸಾಮಾನ್ಯರೂ ಸ್ವರಶಾಸ್ತ್ರದ ಅರಿವು ಪಡೆದು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಉಸಿರಾಟದ ಹಿನ್ನೆಲೆಯಲ್ಲಿರುವ ಹಲವು ಸೂಕ್ಷ್ಮ ವಿಚಾರಗಳನ್ನು ಅವರು ವಿವರಿಸಿದರು.
ಅಳಿವಿನಂಚಿನಲ್ಲಿರುವ ಶ್ವಾಸವಿದ್ಯೆ ಉಳಿಯಲಿ
ಇಂದು ಶ್ವಾಸವಿದ್ಯೆ ಅಳಿವಿನ ಅಂಚಿನಲ್ಲಿದೆ. ಈ ವಿದ್ಯೆಯನ್ನು ಪ್ರಾಯೋಗಿಕವಾಗಿ ಬಳಸುವ ಮೂಲಕವೇ ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಶ್ವಾಸಾವಲೋಕನವನ್ನು ಪ್ರಯೋಗಾತ್ಮಕವಾಗಿ ಅಳವಡಿಸಿಕೊಂಡರೆ ಈ ಅಮೂಲ್ಯ ವಿದ್ಯೆಯ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಶ್ರೀಗಳು ಹೇಳಿದರು.
ಭಾರತೀಯ ಪರಂಪರೆಯಲ್ಲಿ ಇಂತಹ ಅನೇಕ ಅಮೂಲ್ಯ ಜ್ಞಾನ ಮತ್ತು ವಿಚಾರಗಳು ಅಡಕವಾಗಿವೆ. ಆದರೆ ಇಂದು ಅವುಗಳ ಬಗ್ಗೆ ನಾವು ಅಸಡ್ಡೆ ಬೆಳೆಸಿಕೊಂಡಿದ್ದೇವೆ. ವಿದೇಶಿಗರು ನಮ್ಮ ಜ್ಞಾನ ಭಂಡಾರವನ್ನು ಕೊಂಡೊಯ್ದ ನಂತರ, ಅವರಿಂದಲೇ ಅದೇ ಜ್ಞಾನವನ್ನು ಮತ್ತೆ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
Also Read>> ರೈತನಿಗೆ ಹಾವು ಕಡಿತ: ಶಿವಮೊಗ್ಗಕ್ಕೆ ಕರೆದೊಯ್ಯಲು 108 ಸಿಬ್ಬಂದಿ ನಿರಾಕರಣೆ ಆರೋಪ!
ಖ್ಯಾತ ದೈವಜ್ಞರಿಂದ ವಿಚಾರ ಮಂಡನೆ
ಕಾರ್ಯಕ್ರಮದಲ್ಲಿ ದೇಶದ ಶ್ರೇಷ್ಠ ದೈವಜ್ಞರಲ್ಲೊಬ್ಬರಾದ ಕೇರಳದ ವಿದ್ವಾನ್ ಕೈಮುಕ್ಕು ನಾರಾಯಣ ನಂಬೂದರಿ ಅವರನ್ನು ರಾಘವೇಶ್ವರ ಶ್ರೀಗಳು ಆಶೀರ್ವದಿಸಿದರು.
ಎರಡು ದಿನಗಳ ರಾಷ್ಟ್ರೀಯ ವಿಚಾರಮಂಥನದಲ್ಲಿ ವಿದ್ವಾನ್ ಗೋಪಾಲಕೃಷ್ಣ ಶರ್ಮಾ ಅವರು ‘ದೈವಜ್ಞನ ಲಕ್ಷಣ’, ವಿದ್ವಾನ್ ರಾ. ಗಣಪತಿ ಭಟ್ಟರು ‘ಸಮಾಹಿತಮನಾಃ’, ವಿದ್ವಾನ್ ಶಿವಪ್ರಸಾದ್ ತಂತ್ರಿಗಳು ‘ದೈವಜ್ಞನ ದಿನಚರಿ’ ವಿಷಯಗಳ ಕುರಿತು ವಿಚಾರ ಮಂಡಿಸಿದರು.
ವಿದ್ವಾನ್ ಹಂಡ್ರಮನೆ ಗೋಪಾಲಕೃಷ್ಣ ಭಟ್ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ವಾನ್ ನರಸಿಂಹ ಭಟ್ಟ ಬಡಗು, ದೈವಜ್ಞ ಮಿತ್ತೂರು ಕೇಶವ ಭಟ್ಟ, ದೈವಜ್ಞ ಮಧುಸೂಧನ ಶರ್ಮಾ, ಡಾ. ಕೆ.ಸಿ. ನಾಗೇಶ್ ಭಟ್ ಸೇರಿದಂತೆ ನಾಡಿನ ವಿವಿಧ ಭಾಗಗಳ ದೈವಜ್ಞರು ವಿಚಾರಮಂಥನದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











