ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಬಾರಿಯ ಬಜೆಟ್ ಭರವಸೆ ಮೂಡಿಸುವ ಹಾಗೂ ಜನಪ್ರಿಯ ಅಂಶ ಒಳಗೊಂಡಿರುವ ಬಜೆಟ್ ಆಗಿದೆ ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು ಹಾಗೂ ಆರ್ಥಿಕ ವಿಶ್ಲೇಷಕರಾದ ಡಾ. ಎಂ.ಎಸ್. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 2026-27ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದ್ದು, 4,48,004 ಕೋಟಿ ಗಾತ್ರವಾಗಿದೆ. ರಾಜಸ್ವ ವೆಚ್ಚವು 3,38,0007 ಕೋಟಿ ಆಗಿದೆ. ಕಳೆದ ವರ್ಷಕ್ಕಿಂತ ಅಂದಾಜು 40,000 ಕೋಟಿ ಹೆಚ್ಚಾಗಿದೆ. 74,682 ಕೋಟಿ ರೂ. ಬಂಡವಾಳ ವೆಚ್ಚ ಮತ್ತು 35,316 ಕೋಟಿ ರೂ. ಸಾಲ ಮರುಪಾವತಿ ಒಳಗೊಂಡಿದೆ. 22,952 ಕೋಟಿ ರೂ. ರಾಜಸ್ವ ಕೊರತೆ ಅಂದಾಜಿಸಲಾಗಿದೆ. ವಿತ್ತೀಯ ಕೊರತೆ 97,449 ಕೋಟಿ ರೂ. ಅಂದಾಜಿಸಲಾಗಿದೆ. ಒಟ್ಟು 4,47,240 ಕೋಟಿ ರೂ. ಸ್ವೀಕೃತಿಯನ್ನು ಅಂದಾಜಿಸಲಾಗಿದೆ ಎಂದಿದ್ದಾರೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕ್ರಮ ಕೈಗೊಂಡಿದ್ದು, ಬೆಂಗಳೂರು ಹಾಗೂ ಮೈಸೂರಿಗೆ ಬರಪೂರ ಕೊಡುಗೆಗಳನ್ನು ನೀಡಿದ್ದಾರೆ. ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಬಡ, ಮದ್ಯಮ ವರ್ಗ ಜನತೆಗೆ ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆಯನ್ನು ಬಜೆಟ್ ನಲ್ಲಿ ನೀಡಲಾಗಿದೆ. ವಿವಿಧ ಇಲಾಖೆಗಳಿಗೆ ಸಾಕಷ್ಟು ಹಣ ವಿನಿಯೋಗಿಸಲಾಗಿದೆ. ಎಐ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶಕ್ತಿ ಯೋಜನೆಗೆ 5300 ಕೋಟಿ ರೂ. ವಿನಿಯೋಗಿಸಲಾಗಿದೆ. ಜೊತೆಗೆ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡುವುದನ್ನು ನಿಷೇಧಿಸಿರುವುದು ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ.
ಅಬಕಾರಿ, ವಾಣಿಜ್ಯ ತೆರಿಗೆ, ನೋಂದಣಿ ಮುದ್ರಾಂಕ, ಮೋಟಾರ್ ವಾಹನ, ಗಣಿ ಮತ್ತು ಭೂ ವಿಜ್ಞಾನ ಇವುಗಳಿಂದ ಸಂಪನ್ಮೂಲ ಕ್ರೂಢೀಕರಣ ಮಾಡಲು ಆದ್ಯತೆ ನೀಡಲಾಗಿದೆ. ಸರ್ವೋದಯ, ಸ್ವಾವಲಂಬನೆ ಮತ್ತು ಅಂತ್ಯೋದಯ ತತ್ವಗಳ ನೈತಿಕ ಅಡಿಪಾಯದಲ್ಲಿ ಮುಂಗಡ ಪತ್ರವನ್ನು ಮಂಡಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಹಾಗೂ ಶಿವಮೊಗ್ಗ ಜಿಲ್ಲೆಗೆ ನೀಡಿದ ಶೈಕ್ಷಣಿಕ ಕೊಡುಗೆಯಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















