ರಾಜನ್‌ನ ಹೆಂಡತಿಯ ಅಕ್ಕನ ಗಂಡ ರಾಜೇಂದ್ರ ಎಂಬಾತ ತಮಿಳುನಾಡಿನ ನಾಗರಕೋಯಲ್‌ನಲ್ಲಿದ್ದಾನೆ ಎಂಬ ಮಾಹಿತಿ ಕೊಟ್ಟ ವೇಣು. ನಾವೆಲ್ಲ ಅಲ್ಲಿ ತಲುಪಿದೆವು. ರಾಜನ್ 10 ದಿನಗಳ ಹಿಂದೆ ತನ್ನ ಪತ್ನಿಯನ್ನು ಇಲ್ಲಿ ಬಿಟ್ಟಿದ್ದ. ಆದರೆ ಸೆ.23ರಂದು ರಾತ್ರಿ (ಬೆಂಗಳೂರಿನಲ್ಲಿ ಕೊಲೆ ನಡೆದಿದ್ದು ಸೆ.22ರ ರಾತ್ರಿ) ಆತುರಾತುರವಾಗಿ ಕರೆದುಕೊಂಡು ಹೋಗಿದ್ದಾನೆ ಎಂದಾತ ಹೇಳಿದ. ನಾವು ಅಲ್ಲಿಂದ ಪಟ್ಟಣತಿಟ್ಟಂ, ಮಣಿಮಲೈ, ಕಾಂಜೀರಪಲ್ಲಿ ಪೊನ್ನುಕ್ಕೂನಂ ಮುಂತಾದ ಊರುಗಳಲ್ಲಿನ ರಬ್ಬರ್ ಎಸ್ಟೇಟ್‌ಗಳಲ್ಲಿ ಕೂಲಿಯಾಳು ವೇಷದಲ್ಲಿ ಹುಡುಕಾಡಿದೆವು. ಆದರೆ ಯಾವುದೇ ಕ್ಲೂ ಸಿಗದೇ ಹೋಯಿತು. ರಾಜನ್‌ನ ಫೋಟೊ ತೋರಿಸಿ ಅಲ್ಲಿಯ ಸ್ಟೇಷನ್‌ಗಳಿಗೆಲ್ಲ ಅಲೆದದ್ದು ವ್ಯರ್ಥವಾಯಿತು. ಮರಳಿ ಯತ್ನವ ಮಾಡು ಎಂಬಂತೆ ಮತ್ತೊಮ್ಮೆ ಆ ಮನೆಗೆ ಹೋದೆವು.
ರಾಜೇಂದ್ರನ 10 ವರ್ಷದ ಮಗ ವಿಜೇಂದ್ರ ಎಂಬಾತ ನಮ್ಮನ್ನೇ ದುರುಗುಟ್ಟಿ ನೋಡುತ್ತ ‘ಯಾರಪ್ಪಾ ಇವರು? ಪದೇಪದೇ ನಮ್ಮ ಮನೆಗೆ ಬರುತ್ತಾರೆ’ ಎಂದ. ‘ಇವರು ಬೆಂಗಳೂರಿನ ಪೊಲೀಸರು ಕಣೋ. ನಿನ್ನ ಮಾವನನ್ನು ಹುಡುಕಿಕೊಂಡು ಬಂದಿದ್ದಾರೆ.’ ಎಂದ ಅಪ್ಪ. ತತಕ್ಷಣ ಆ ಹುಡುಗ ‘ಮಾವ ಇಲ್ಲೆಲ್ಲಿ ಇರುತ್ತಾನೆ? ಆತ ಚಂಗನಶೇರಿಯಲ್ಲಿ ರಬ್ಬರ್ ತೋಟ ಖರೀದಿಸಲು ಹೋಗಿಲ್ವಾ; ಎಂದು ಬಿಟ್ಟ. ನನಗಾದ ಸಂತೋಷ ಅಷ್ಟಿಷ್ಟಲ್ಲ. ಹೊರಗಡೆ ಓಡಿ ಬಂದವನೇ ದೊಡ್ಡದೊಂದು ಕ್ಯಾಡ್‌ಬರೀಸ್ ಚಾಕೊಲೇಟ್ ಖರೀದಿಸಿ ತಂದು ಆತನ ಕೈಗಿಟ್ಟ. ನಾವು ಚಂಗನಶೇರಿಯತ್ತ ದೌಡಾಯಿಸಿದೆವು. ಅಲ್ಲಿಯ ರಬ್ಬರ್ ಎಸ್ಟೇಟನ್ನು ಒಂದಿಂಚೂ ಬಿಡದೆ ಹುಡುಕಿದೆವು. ಎಷ್ಟೇ ಪ್ರಯಾಸ ಪಟ್ಟರೂ ಹಂತಕರು ಕಣ್ಣಿಗೆ ಬೀಳದೆ, ನಿಸ್ಸಹಾಯಕರಾಗಿ ಬೆಂಗಳೂರಿಗೆ ವಾಪಸಾಗುವ ಯೋಚನೆ ಮಾಡುತ್ತ ಅಲ್ಲಿಯ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗಲೇ ಪವಾಡಸದೃಶ್ಯ ಘಟನೆ ನಡೆದಿದ್ದು!
ಆಗತಾನೇ ಒಂದು ಬಸ್ ಬಂದು ನಿಂತಿತ್ತು. ಏನೋ ಯೋಚನೆ ಮಾಡುತ್ತ ಕುಳಿತಿದ್ದ ಪಳನಿ ಇದ್ದಕ್ಕಿದಂತೆ ಎದ್ದು ನಿಂತ. ‘ಸಾರ್ ಆ ಬಸ್‌ನಿಂದ ಇಳಿದವನೊಬ್ಬ ಹಂತಕರಲ್ಲಿ ಒಬ್ಬನಾದ ಶಶಿ ಪಿಳ್ಳೈ ಥರಾ ಕಾಣ್ತಾನೆ’ ಎಂದ. ರೇಷ್ಮೆ ಜುಬ್ಬಾ, ಶಲ್ಯ ಧರಿಸಿದ್ದ ಆ ಶಂಕಿತ ವ್ಯಕ್ತಿ ಬೀಡಾ ಅಂಗಡಿಗೆ ಹೋಗಿ ಸಿಗರೇಟು ಹಚ್ಚಿ ಹೊಗೆಯ ಸುರುಳಿ ಬಿಡತೊಡಗಿದ. ಪಳನಿಯನ್ನು ನಾವು ಹಿಂಬಾಲಿಸಿದೆವು. ‘ನೀನು ಶಶಿ ಪಿಳ್ಳೈ ಅಲ್ವಾ?’ ಎಂದ ಪಳನಿ. ‘ಅರೆ ಪಳನಿ ಮೇಸ್ತ್ರಿ… ನೀನ್ ಇವಡೆ ಎಂದ್’ ಎಂದಾತ ಮಲಯಾಳದಲ್ಲಿ ಪ್ರತಿಕ್ರಿಯಿಸಿದ. ತತಕ್ಷಣ ಪಳನಿ ‘ಹಿಡ್ಕೊಳ್ಳಿ ಸಾರ್… ಇದೇ ಬಡ್ಡೀ ಮಗ ಸಾರ್ ಕೊಲೆಗಾರ,’ ಎಂದು ಅಬ್ಬರಿಸಿದ. ನಾವೆಲ್ಲ ಆತನ ಮೇಲೆ ಎಗರಿ ಹಿಡಿದುಕೊಂಡೆವು. ಅಷ್ಟರಲ್ಲಿ ಇನ್‌ಸ್ಪೆಕ್ಟರ್ ಸುರೇಂದ್ರ ನಾಯಕ್ ಅವರ ಸ್ಥಳೀಯ ಠಾಣೆಗೆ ಹೋಗಿ ಕೂತಿದ್ದರು. ನಾನು ಶಶಿಯನ್ನು ಎಳೆದುಕೊಂಡು ಅವರ ಮುಂದೆ ನಿಲ್ಲಿಸಿದೆ. ಅವರು ಅವಕ್ಕಾಗಿ ಬಿಟ್ಟರು. ಆದರೆ ಶಶಿ ತಾನು ಅಮಾಯಕ ಎಂದ. ಕರಾಟೆಪಟುವಾಗಿದ್ದ ನಾಯಕ್ ಕಾಲಿನಿಂದ ಒಂದು ಕಿಕ್ ಕೊಟ್ಟರು. ಶಶಿ ಎಗರಿ ಗೋಡೆ ಮೇಲೆ ಹೋಗಿ ಬಿದ್ದ. ತತಕ್ಷಣ ಸ್ಥಳೀಯ ಇನ್‌ಸ್ಪೆಕ್ಟರ್ ತಡೆದು, ಇಲ್ಲಿ ಹಾಗೆಲ್ಲ ಹೊಡೆಯುವ ಹಾಗಿಲ್ಲ ಎಂದು ನಮಗೆ ಗದರಿದರು. ಶಶಿಯನ್ನು ಅವರು ಹತ್ತಿರ ಕೂರಿಸಿಕೊಂಡು ಜೋರು ಮಾತಿನಿಂದಲೇ ಬಾಯಿ ಬಿಡಿಸಿದರು.
ತಾವು ನಡೆಸಿದ ದರೋಡೆ ಸಂಚನ್ನು ಎಳೆಎಳೆಯಾಗಿ ಬಿಡಿಸಿ, ಇತರ ಆರೋಪಿಗಳನ್ನೂ ತೋರಿಸಿದ. ಆದರೆ ಸ್ವಲ್ಪ ನಗ-ನಗದಿನೊಂದಿಗೆ ರಾಜನ್ ಇವರಿಂದ ಬೇರೆಯಾಗಿದ್ದ. ನಾವು ಮತ್ತತೆ ರಾಜನ್ ಹಿಂದೆ ಬಿದ್ದೆವು. ಕೋಕೊಕೋಲಾದ ಜಾಹೀರಾತು ಫಲಕವೊಂದರ ಕೆಳಗೆ ಬಣ್ಣದ ಪ್ಲೇಟ್ ಮತ್ತು ಬ್ರಷ್ ಮುದ್ರೆಯ ಜತೆಗೆ ‘ರಾಜನ್’ ಎಂದು ಚಿಕ್ಕದಾಗಿ ಬೈಲೈನ್ ಹಾಕಿದ್ದು ಎಲ್ಲೋ ಒಂದು ಕಡೆ ಕಣ್ಣಿಗೆ ಬಿತ್ತು. ನಾವು ಆ ಸುಳಿವನ್ನೇ ಫಾಲೋಮಾಡಿದಾಗ ಆತ ದೊಡ್ಡದೊಡ್ಡ ಕಂಪನಿಗಳ ಸೈನ್‌ಬೋರ್ಡ್ ತಯಾರಿಯಲ್ಲಿ ಬ್ಯುಸಿಯಾಗಿರುವುದು ಗೊತ್ತಾಯಿತು. ಬಳಿಕ ಆತನನ್ನು ಸುಲಭವಾಗಿ ಬಲೆಗೆ ಕೆಡವಿದೆವು. ಶೇಷಾದ್ರಿಪುರಂ ಎಸ್‌ಐ ಲವಕುಮಾರ್ ಸಹಕಾರದೊಂದಿಗೆ ನಾವು ಆರೋಪಪಟ್ಟಿ ಸಿದ್ಧಪಡಿಸಿದೆವು.
ಉಸಿರುಗಟ್ಟಿಸಲು ಬಳಸಿದ ಪಂಚೆ, ಮೃತನ ಮುಷ್ಟಿಯಲ್ಲಿದ್ದ ಆರೋಪಿಯ ತಲೆಕೂದಲು ಮತ್ತು ಬದುಕುಳಿದವರು ಆರೋಪಿಗಳ ಗುರುತು ಹಚ್ಚುವ ಕವಾಯಿತಿನಿಂದ (Identification Parade) ಆರೋಪಿಗಳನ್ನು ಗುರುತಿಸಿದ್ದು ನಿರ್ಣಾಯಕ ಸಾಕ್ಷಿಯಾದವು. ಸೆಷನ್‌ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಆರೋಪಿಗಳು ಹೈಕೋರ್ಟ್‌ಗೆ ಹೋದರು. ಹೈಕೋರ್ಟ್ ಜೀವಾವಧಿ ಬದಲು ಗಲ್ಲುಶಿಕ್ಷೆ ವಿಧಿಸಿತು! ಬಳಿಕ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ಕಾಯಂಗೊಳಿಸಿತು. ಇದಾದ ಎಷ್ಟೋ ವರ್ಷಗಳ ಬಳಿಕ ನಾನೊಮ್ಮೆ ತಪಾಸಣೆಗಾಗಿ ಸೆಂಟ್ರಲ್ ಜೈಲ್‌ಗೆ ಹೋಗಿದ್ದೆ. ಬಂದೀಖಾನೆಯ ಗೋಡೆಗಳೆಲ್ಲ ಆಕರ್ಷಕ ವರ್ಣಚಿತ್ರಗಳಿಂದ ಕಂಗೊಳಿಸುತ್ತಿದ್ದವು. ಇಷ್ಟು ಸೊಗಸಾದ ಚಿತ್ರ ಬರೆದ ಕಲಾವಿದಯಾರಿರಬಹುದು ಎಂಬ ಕುತೂಹಲವಾಯಿತು. ನೋಡಿದರೆ… ಚಿತ್ರದ ಕೆಳಗೆ ಸಣ್ಣ ಅಕ್ಷರದಲ್ಲಿ ‘ರಾಜನ್’ ಎಂದಿತ್ತು. ಜತೆಗೆ ಬಣ್ಣದ ಪ್ಲೇಟ್ ಮತ್ತು ಬ್ರಷ್ ಸಂಕೇತ!
ಸತತ ಪ್ರಯತ್ನಕ್ಕೆ, ಪರಿಶ್ರಮಕ್ಕೆ, ಕರ್ತವ್ಯನಿಷ್ಠೆಗೆ ಫಲ ಇದ್ದೇ ಇದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಬೆಂಗಳೂರಿನಲ್ಲಿ ನಡೆದ ಜೋಡಿ ಕೊಲೆ ಆರೋಪಿಗಳನ್ನು ಹಿಡಿಯಲು ನಾವು ಕೇರಳದ ಮೂಲೆಮೂಲೆಯಲ್ಲಿ ಕೂಲಿಗಳ ವೇಷದಲ್ಲಿ ಸುತ್ತ ಬೇಕಾಯಿತು.
Discussion about this post