1989
ಯಾವುದೋ ಕೇಸ್‌ಗೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಕೋರ್ಟ್‌ಗೆ ಹೋಗಿದ್ದೆ. ಎದುರಿಗೆ ಬಂದ ಸುಮಾರು 40 ವರ್ಷದ ವ್ಯಕ್ತಿಯೊಬ್ಬ ‘ನಮಸ್ಕಾರ ಸಾರ್’ ಎಂದ. ಕೂದಲೆಲ್ಲ ಉದುರಿ ಹೋಗಿತ್ತು. ಬೆನ್ನು ಬಾಗಿತ್ತು. ಕೈಗಳು ಸೊಟ್ಟಗಾಗಿದ್ದವು. ಮೈಮೇಲೆಲ್ಲ ಕುಷ್ಠ ರೋಗದ ಬಿಳಿ ಕಲೆಗಳು. ಆತನ ಗುರುತೇ ಸಿಗಲಿಲ್ಲ. ‘ಯಾರು ನೀನು? ಗೊತ್ತಾಗಲಿಲ್ಲವಲ್ಲ,’ ಎಂದೆ. ‘ಮರೆತು ಬಿಟ್ರಾ ಸಾರ್? ಟಿವಿ ಕಂಪನಿ ಚೀಟಿಂಗ್ ಕೇಸು…’ ಎಂದ. ಆಗ ನನಗೆ ಈಗ ಕೋಟ್ಯಂತರ ರೂ. ಆಕ್ರಮ ನಡೆಸಿ ಜೈಲು ಸೇರಿದ್ದ ಅಕ್ರಮ್ ಅಂತ. ಆತನ ಅವಸ್ಥೆ ಕಂಡು ನಿಬ್ಬೆರಗಾದೆ.
ಬ್ಯಾಂಕಾಕ್, ದುಬೈ, ಯೂರೋಪ್‌ಗಳಲೆಲ್ಲ ಬಿಂದಾಸ್ ಆಗಿ ಓಡಾಡುತ್ತ ಮಮಾ ಮಾಡುತ್ತಿದ್ದ. ಲಕ್ಷ ಲಕ್ಷ ಕೊಟ್ಟು ಬಾಲಿವುಡ್ ಸೂಪರ್‌ಸ್ಟಾರ್ ಹೀರೋಯಿನ್‌ಗಳ ಜತೆಗೂ ಸರಸವಾಡುತ್ತಿದ್ದ. ಲೈವ್‌ಬ್ಯಾಂಡ್ ಹುಡುಗಿಯರ ಮೇಲೆ ಸಾವಿರ ರೂ.ಗಳ ನೋಟುಗಳ ಸುರಿಸುತ್ತಿದ್ದ, ಕೈಚಾಚಿದವರಿಗೆಲ್ಲ ನೂರಾರು ರೂ.ಗಳ ಟಿಪ್ಸ್ ಕೊಡತ್ತಿದ್ದ ಅಕ್ರಮ್ ಪಾಷಾ ಈಗ ಹೇಗಾಗಿಬಿಟ್ಟ ಎಂದುಕೊಂಡೆ. ಇದೇನೋ ಹೀಗಾಗಿ ಬಿಟ್ಟೆ ಅಚ್ಚರಿಯಿಂದ ಕೇಳಿದೆ. ‘ಏನು ಮಾಡೋಣ ಸಾರ್… ನಾನು ಮಾಡಿದ ಪಾಪದ ಫಲ,’ ಎಂದು ವಿರಾಗಿಯಂತೆ ಮಾತನಾಡಿದ…
ಆತ ತನ್ನ ಕಂಪನಿಗಾಗಿ ಓವರ್‌ಟೈಂ ಕೆಲಸ ಮಾಡುತ್ತಿದ್ದ. ಪ್ರಾಮಾಣಿಕ ನೌಕರ ಎಂದು ಖ್ಯಾತಿ ಗಳಿಸಿದ್ದ. ಮಾಲೀಕರ ಪಾಲಿಗೆ ವಿಶ್ವಾಸಾರ್ಹ ಮ್ಯಾನೇಜರ್ ಆಗಿದ್ದ. ಅದೊಂದು ದಿನ ಆತ 6.68 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದು ಎಲ್ಲರಿಗೂ ಶಾಕ್ ಆಯಿತು. ಏನೋ ಹೆಚ್ಚುಕಡಿಮೆ ಆಗಿರಬಹುದು. ದೂರು ಕೊಡುವುದು ಬೇಡ ಎಂದುಕೊಂಡ ಮಾಲೀಕರು, ಜತೆ ಮಾತನಾಡಲು ಚೀಫ್ ಮ್ಯಾನೇಜರ್‌ನನ್ನು ಕಳಿಸಿದರು. ತನ್ನ ತಪ್ಪನ್ನು ವಿನಮ್ರತೆಯಿಂದ ಒಪ್ಪಿಕೊಂಡ ಆತ ‘ಇದಿಷ್ಟೇ ಅಲ್ಲ ಇನ್ನೂ ೩ ಲಕ್ಷ ರೂ. ಚೆಕ್ ಬಳಸಿಕೊಂಡಿದ್ದೇನೆ. ಇವಿಷ್ಟೂ ಹಣವನ್ನು ಕಟ್ಟಿಕೊಡುತ್ತೇನೆ. ಸ್ವಲ್ಪ ಟೈಂ ಕೊಡಿ,’ ಎಂದ. ಈ ವಿಷಯ ಫೋನ್‌ನಲ್ಲಿ ಮಾಲೀಕರಿಗೆ ತಿಳಿಸಿದಾಗ ಅವರು, ತನ್ನ ತಪ್ಪನ್ನು ಪ್ರಾಮಾಣಿಕತೆಯಿಂದ ಒಪ್ಪಿಕೊಂಡಿದ್ದಾನಲ್ಲ ಎಂದು ಖಷಿಯಾದರು. ತಪ್ಪೊಪ್ಪಿಗೆ ಬರೆದುಕೊಟ್ಟು, ನಿಧಾನವಾಗಿ ಹಣ ಕಟ್ಟು ಎಂದು ಸುಮ್ಮನಾದರು.
ಇತ್ತ ಬಿಳಿ ಹಾಳೆಯ ಮೇಲೆ ಒಂದಿಷ್ಟು ಬರೆದ ಆತ, ಟಾಯ್ಲೆಟ್‌ಗೆ ಹೋಗಿ ಬರುತ್ತೇನೆ ಎಂದು ಬಾಗಿಲು ಹಾಕಿಕೊಂಡವನು ಹೊರಬರಲೇ ಇಲ್ಲ. ಕೊನೆಗೆ ಬಾಗಿಲು ಒಡೆದು ನೋಡಿದರೆ ಆತ ನಾಪತ್ತೆ ಕಿಟಕಿಯ ಗಾಜು ಸರಿಸಿ, ಜಿಗಿದು ಪರಾರಿಯಾಗಿದ್ದ! ಆ ಬಳಿಕ ಅಕ್ರಮ್ ಎಸಗಿದ ಸಾಲುಸಾಲು ಅಕ್ಮಗಳು ಬಯಲಾಗತೊಡಗಿದವು. ಆ ನಯವಂಚಕ ಕಂಪನಿಗೆ ಒಟ್ಟು 3 ಕೋಟಿ 95 ಲಕ್ಷ ರೂ. ಮೋಸ ಮಾಡಿದ್ದ! ಆ ದಿನಗಳಲ್ಲಿ ಆ ಕಂಪನಿ ಟಿವಿ, ಫ್ರಿಜ್, ವಿಡಿಯೊ ಕ್ಯಾಸೆಟ್ ಪ್ಲೇಯರ್, ಓವನ್, ರೇಡಿಯೊ ಎಲೆಕ್ಟ್ರಾನಿಕ್ಸ್ ಸಾಮಗ್ರಿ ತಯಾರಿಯಲ್ಲಿ ದೇಶದಲ್ಲೇ ನಂಬರ್ 1 ಆಗಿತ್ತು. ಜಪಾನ್ ಕಂಪನಿಯೊಂದಿಗೆ ಸಹಯೋಗ ಹೊಂದಿತ್ತು. ಆದರೆ ಒಬ್ಬನೇ ಮ್ಯಾನೇಜರ್ ಮಾಡಿದ ವಂಚನೆಯಿಂದಾಗಿ, ಅಷ್ಟು ದೊಡ್ಡ ಕಂಪನಿ ಮುಂದೆಂದೂ ಚೇತರಿಸಿಕೊಳ್ಳಲಾಗದಂತೆ ಕುಸಿದು ಬಿತ್ತು. ಕ್ರಮೇಣ ಇಡೀ ಕಂಪನಿಯೇ ಮುಚ್ಚಿ ಹೋಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 4 ಸಾವಿರ ಮಂದಿ ಬೀದಿಪಾಲಾದರು.
ಕಂಪನಿಗೆ ಆತ ಹೇಗೆ ಮೋಸ ಮಾಡಿದ ಎನ್ನುವುದು ಕುತೂಹಲಕಾರಿ. ಟಿವಿಯ ಬಿಡಿ ಭಾಗಗಳನ್ನು ಜಪಾನ್‌ನಿಂದ ತರಿಸಿ ಬೆಂಗಳೂರು ಹವಾನಿಯಂತ್ರಿತ ಉಗ್ರಾಣದಲ್ಲಿ ಶೇಖರಿಸಿಡಲಾಗುತ್ತಿತ್ತು. ವಿದೇಶದಿಂದ ಸಾಮಗ್ರಿ ತಂದಾಗ ಒಟ್ಟಿಗೇ ಕಷ್ಟಮ್ಸ್ ಸುಂಕ ಕಟ್ಟುತ್ತಿರಲಿಲ್ಲ. ಉಗ್ರಾಣದದ ಕೀಯನ್ನು ಕಸ್ಟಮ್ಸ್ ಇಲಾಖೆಯ ವಶಕ್ಕೆ ನೀಡಲಾಗಿತ್ತು. ಎಷ್ಟು ಬಿಡಿಭಾಗ ಬೇಕೋ ಅಷ್ಟು ಮಾತ್ರ ತೆಗೆದುಕೊಂಡು. ಅದಕ್ಕೆ ತಕ್ಕ ಸುಂಕ ಕಟ್ಟಲಾಗುತ್ತಿತ್ತು. ಅಂದರೆ, ಕಂಪನಿಯು ಬೇಕಾದ ಬಿಡಿ ಭಾಗಗಳ ಇಂಡೆಂಟ್ ತಯಾರಿಸಿ ನಾಲ್ಕು ಚಲನ್ ಮತ್ತು ಕಸ್ಟಮ್ಸ್ ಸುಂಕದ ಒಂದು ಚೆಕ್ ಸಿದ್ಧಪಡಿಸುತ್ತಿತ್ತು. ಈ ರೀತಿ ನಾಲ್ಕೈದು ಇಂಟೆಂಟ್‌ಗಳ ಸೆಟ್ ಮತ್ತು ನಾಲ್ಕೈದು ಚೆಕ್‌ಗಳಿರುತ್ತಿದ್ದವು.
ಕಂಪನಿಯಲ್ಲಿ ಪರ್ಚೆಸಿಂಗ್ ಮ್ಯಾಜೇಜರ್ ಆಗಿದ್ದ ಅಕ್ರಂ ಇವುಗಳನ್ನು ತೆಗೆದುಕೊಂಡು ಬ್ಯಾಂಕಿಗೆ ಹೋಗಬೇಕಿತ್ತು. ಅಲ್ಲಿ ಆತ ಎಲ್ಲ ಚಲನ್‌ಗಳಿಗೆ ‘ಟ್ರಾನ್ಸ್‌ಫರ್’ ಎಂದು ಸೀಲು ಒತ್ತಿಸಿಕೊಂಡು, ನಾಲ್ಕರ ಸೆಟ್‌ನಲ್ಲಿ ಎರಡು ಚಲನ್ ಮತ್ತು ಒಂದು ಚೆಕ್ ಅನ್ನು ಅಲ್ಲಿ ಕೊಡಬೇಕಿತ್ತು. ಬಳಿಕ ಎಲ್ಲ ಸೆಟ್‌ಗಳ ಒಂದೊಂದು ಚಲನ್ ಅನ್ನು ಕಸ್ಟಮ್ಸ್ ಇಲಾಖೆಗೆ ಕೊಟ್ಟಾಗ, ಅಲ್ಲಿಯ ಅಧಿಕಾರಿಗಳು ಆತನ ಜತೆಗೇ ಉಗ್ರಾಣಕ್ಕೆ ಬಂದು ಬಿಡಿಭಾಗ ತೆಗೆದುಕೊಡುತ್ತಿದ್ದರು. ಆ ಸಾಮಗ್ರಿ ಜತೆ ಅಕ್ರಂ ತನ್ನ ಕಂಪನಿಗೆ ಹೋಗಿ ಒಂದು ಚಲನ್ ಅನ್ನು ಫೈಲ್ ಮಾಡಬೇಕಿತ್ತು. ಈತ ಏನು ಮಾಡಲಾರಂಭಿಸಿದ ಗೊತ್ತಾ?
(ಮುಂದುವರೆಯುವುದು)
Discussion about this post