ನಾನು ಎಂಎಂ ಹಿಲ್ಸ್‌ನಲ್ಲಿದಾಗ ಯಾವುದೋ ಹಳೆಯ ಪತ್ರಿಕೆಯ ಕಣ್ಣಾಡಿಸುತ್ತಿದ್ದಾಗ ಬ್ಯಾಂಕ್ ಲಾಕರ್‌ನಲ್ಲಿದ್ದ ಒಡವೆಯನ್ನು ಬ್ಯಾಂಕ್ ಸಿಬ್ಬಂದಿಯೇ ವಂಚಿಸಿದ ಸುದ್ದಿ ಓದಿ ಗಾಬರಿಯಾಯಿತು. ಅಕ್ರಮ್‌ನಿಂದ ವಶಪಡಿಸಿಕೊಂಡ ಕೋಟ್ಯಂತರ ರೂ. ಮೌಲ್ಯದ ಸೊತ್ತು ನನ್ನ ಹೆಸರಿನ ಲಾಕರ್‌ನಲ್ಲಿದೆ. ಅಲ್ಲೇನಾದರೂ ಮೋಸ ಆದರೆ ಏನು ಗತಿ ಎಂದುಕೊಂಡು. ಆ ಆಭರಣಗಳನ್ನು ಸಿಬಿಐ ಡಿವೈಎಸ್‌ಪಿ ಆಗಿದ್ದ ಎ.ಪಿ.ಗೋಪಾಲಕೃಷ್ಣನ್ ಎಂಬುವರಿಗೆ ಒಪ್ಪಿಸಿದೆ. ಕಾಲರ್‌ನಿಂದ ಕೆ.ಜಿ.ಗಟ್ಟಲೆ ಒಡವೆ, ಹಣ ತೆಗೆದು ಲೆಕ್ಕ ಹಾಕಿ, ಚಿನ್ನಾಭರಣ ಅಂಗಡಿಗೆ ಹೋಗಿ ಪರೀಕ್ಷಿಸಿ, ನಾನಾನ ಅಭರಣಗಳ ಹೆಸರು ಬರೆದು ಪಟ್ಟಿ ದೊಡ್ಡ ಸಾಹಸವಾಗಿ ಹೋಯಿತು. ಈ ಬಗ್ಗೆ ಠಾಣೆಯ ಮುದ್ದೆಮಾಲ್ (ವಸ್ತು, ದಾಖಲೆ ಇತ್ಯಾದಿ ವಶಕ್ಕೆ ತೆಗೆದುಕೊಂಡು ಮತ್ತು ಬೇರೆಯವರ ವಶಕ್ಕೆ ನೀಡಿರುವ ಬಗ್ಗೆ ದಾಖಲಿಸುವ ರಿಜಿಸ್ಟರ್ ಬುಕ್)ನಲ್ಲಿ ದಾಖಲಿಸಿದೆ.
ವಸ್ತುಗಳನ್ನು ಸಿಬಿಐ ಡಿವೈಎಸ್‌ಪಿಗೆ ಹಸ್ತಾಂತರಿಸುವಾಗ ನನ್ನ ನಂಬಿಕಸ್ತ ರೈಟರ್ ಮಂಜುನಾಥ್ ಸಿಂಗ್ ಹೇಳಿದ ‘ಸಾರ್ ಇಷ್ಟೊಂದು ಬೆಲೆ ಬಾಳುವ ವಸ್ತುಗಳನ್ನು ಒಪ್ಪಿಸುತ್ತಿದ್ದೀರಿ. ಯಾವುದಕ್ಕೂ ‘ಮಾಲುಪಟ್ಟಿ’ಯ ಎಲ್ಲ ಪುಟಗಳಿಗೆ ಅವರ ಸಹಿ ಪಡೆದು ಒಂದು ಜೆರಾಕ್ಸ್ ಕಾಪಿಯನ್ನು ಖಾಸಗಿಯಾಗಿ ಇಟ್ಟುಕೊಂಡಿರಿ.’ ನಾನು ಹೂಂಝ ಎನ್ನಲಿಲ್ಲ ಊಹೂಂ ಎನ್ನಲಿಲ್ಲ. ಆತನೆ ಹೊರಗಡೆ ಹೋಗಿ ಜೆರಾಕ್ಸ್ ಮಾಡಿಸಿಕೊಂಡು ಬಂದು ಎಲ್ಲ ಪುಟಗಳಿಗೆ ಆ ಅಧಿಕಾರಿಯ ಸಹಿ ಪಡೆದ.
ಮುಂದೆ ನಾನು ಎಂ.ಎಂ. ಹಿಲ್ಸ್‌ನಲ್ಲಿ ಸೇವೆ ಸಲ್ಲಿಸಿ, ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಪಡೆದು, ಮತ್ತೆ ಬೆಂಗಳೂರಿನಲ್ಲಿ ಡ್ಯೂಟಿ ಮಾಡತೊಡಗಿದೆ. ನಾನಾಗ ಚಿಕ್ಕಪೇಟೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದೆ. ಒಂದು ದಿನ ಮೂವರು ಸೂಟುಧಾರಿಗಳು ನನ್ನ ಚೇಂಬರ್‌ನಲ್ಲಿ ಬಂದು ಕುಳಿತು, ತಾವು ಸಿಬಿಐ ಐಜಿ, ಡಿಐಜಿ ಮತ್ತು ಎಂದು ಪರಿಚಯಿಸಿಕೊಂಡಿದ್ದರು. ಟಿವಿ ಕಂಪನಿಯ ಚೀಟಿಂಗ್ ಕೇಸ್ ಬಗ್ಗೆ ಕೇಳಿದರು. ಆ ಪ್ರಕರಣದ ಕಡತಗಳನ್ನು ಸಿಬಿಐಗೆ ಒಪ್ಪಿಸಿ ಬರೋಬ್ಬರಿ 10ವರ್ಷ ಕಳೆದು ಹೋಗಿತ್ತು. ನಾನು ಒಂದಷ್ಟು ಹೊತ್ತು ಆ ಕೇಸಿನ ಹಿನ್ನೆಲೆಯನ್ನೆಲ್ಲ ವಿವರಿಸಿ. ನಾನು ಹೇಗೆ ಆರೋಪಿಯನ್ನು ಹಿಡಿದೆ, ಹೇಗೆ ಆತನಿಂದ ಬೆಲೆ ಬಾಳುವ ಸೊತ್ತನ್ನು ವಶಪಡಿಸಿಕೊಂಡೆ ಎನ್ನುವುದನ್ನು ಭಾರೀ ಹುರುಪಿನಿಂದ ಹೇಳಿದೆ.
ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳುತ್ತ ತಾಳ್ಮೆಯಿಂದ ನನ್ನ ಮಾತನ್ನೆಲ್ಲ ಕೇಳಿಸಿಕೊಂಡ ಅವರು ‘ನಿಮ್ಮ ಗತಕಾಲದ ಕತೆಗಳೆಲ್ಲ ಚೆನ್ನಾಗಿಯೇ ಇವೆ. ಆದರೆ ಆ ಕೇಸಿನಲ್ಲಿ ನೀವು ವಶಪಡಿಸಿಕೊಂಡ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳೆಲ್ಲಿ? ನೀವು ಸಿಬಿಐಗೆ ಕೇಸ್ ಪೈಲ್‌ಗಳನ್ನು ಮಾತ್ರ ಹಸ್ತಾಂತರಿಸಿದ್ದೀರಿ. ಸೊತ್ತನ್ನು ನೀಡಿರುವ ಬಗ್ಗೆ ನಮ್ಮಲ್ಲಿ ಯಾವುದೇ ದಾಖಲೆ ಇದಲ್ಲ,’ ಎಂದು ಬಿಟ್ಟರು. ನಾನು ಬೆವೆತು ಹೋದೆ. ತಲೆ ಗಿರ‌್ರನೆ ತಿರುಗಿದಂತಾಯಿತು. ಕುಸಿದು ಬೀಳುವುದೊಂದೇ ಬಾಕಿ. ಟೇಬಲ್ ಮೇಲಿದ್ದ ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡು ಹೇಳಿದೆ. ‘ಸರ್, ಸಿಬಿಐ ಡಿವೈಎಸ್‌ಪಿ ಆಗಿದ್ದ ಗೋಪಾಲಕೃಷ್ಣನ್‌ಗೆ ಫೈಲ್ ಅಷ್ಟೂ ಸ್ವತ್ತನ್ನು ಒಪ್ಪಿಸಿದ್ದೇನೆ. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲೆ ಇದೆ. ಬೇಕಾದರೆ ನೋಡಿ.’ ಎಂದೆ. ಅದಕ್ಕವರು ‘ನಾವು ನಿನ್ನೆಯೇ ಕಮಿಷನರ್ ಅನುಮತಿ ಪಡೆದು ಮುದ್ದೆಮಾಲ್ ಪರಿಶೀಸಿದೆವು. ಆದರೆ ಈ ಪ್ರಕರಣದ ಪುಟಗಳನ್ನು ಹರಿದು ಹಾಕಲಾಗಿದೆ ಎಂದರು.
ನಾನು ಮತ್ತಷ್ಟು ಹೆದರಿದೆ. ಅಂದು ಮಂಜುನಾಥ್ ಸಿಂಗ್ ಸಿಬಿಐ ಅಧಿಕಾರಿಯ ಸಹಿ ಇರುವ ‘ಮಾಲುಪಟ್ಟಿ’ಯನ್ನು ನನಗೆ ಕೊಟ್ಟಿದ್ದು, ಅದನ್ನು ನಾನು ಬಿಳಿ ಬಣ್ಣದ, ಕರಿ ಚುಕ್ಕಿ ಇರುವ ಪ್ಲಾಸ್ಟಿಕ್ ಹಾಕಿ ಮನೆಯ ಬೀರುವಿನಲ್ಲಿ ಇಟ್ಟಿದ್ದು ನೆನಪಾಯಿತು. ‘ಸರ್ ಒಂದು ದಿನ ಟೈಂ ಕೊಡಿ. ದಾಖಲೆ ತೋರಿಸುತ್ತೇನೆ.’ ಎಂದೆ. ಅವರು ನಾಳೆ ಬರುವುದಾಗಿ ಹೇಳಿ ಹೊರಟರು. ನಾನು ಒಂದು ನಿಮಿಷವೂ ತಡ ಮಾಡದೆ ಜೀಪನ್ನು ಮನೆಗ ಓಡಿಸಿದೆ. ‘ಇವೆಲ್ಲ ಕೆಲಸಕ್ಕೆ ಬಾರದ ಕಾಗದಗಳು’ ಎಂದು ಹೆಂಡತಿ ಕಸದ ಬುಟ್ಟಿಗೆ ಎಸೆದಿದ್ದರೆ ಮುಂದೇನು ಗತಿ ಎಂಬ ಆತಂಕದಲ್ಲೇ ಹುಡುಕಾಡತೊಡಗಿದೆ. ಅಂದುಕೊಂಡಿದ್ದಕ್ಕಿಂತ ಸುಲಭವಾಗಿ ಆ ಕವರ್ ಸಿಕ್ಕಿತು. ಅದನ್ನೊಮ್ಮೆ ಚುಂಬಿಸಿ, ದೇವರಿಗೆ ಧನ್ಯವಾದ ಅರ್ಪಿಸಿದೆ.
ಮರುದಿನ ಆ ಅಧಿಕಾರಿಗಳು ಮತ್ತೆ ನನ್ನ ಚೇಂಬರ್‌ಗೆ ಹಾಜರಾದರು. ನಾನು ಅವರಿಗೆ ದಾಖಲೆ ತೋರಿಸಿದಾಗ ಅವರು, ನನ್ನ ಮೇಲೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು. ‘ಗೋಪಾಲಕೃಷ್ಣನ್ ಅವರೇ ಹಣ, ಆಭರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ಮೇಲೆ ಇಂಥ ಇನ್ನೂ ಎರಡು ಪ್ರಕರಣಗಳು ದಾಖಲಾಗಿವೆ. ಅವರೀಗ ನಮ್ಮ ಕಸ್ಟಡಿಯಲ್ಲಿದ್ದಾರೆ,’ ಎಂದರು. ‘ನಾನು ಹಗಲು ರಾತ್ರಿ ಕಷ್ಟಪಟ್ಟು ನಿಭಾಯಿಸಿದ ಕೇಸ್ ಇದು. ಈಗ ನನಗೇ ತಿರುಗುಬಾಣವಾಗುತ್ತಿತ್ತಲ್ಲ ಸರ್? ಸಿಬಿಐ, ಪೊಲೀಸ್ ಇಲಾಖೆಯ ಬೆನ್ನೆಲುಬು ಇದು ದೇಶದ ಹೆಮ್ಮೆಯ ತನಿಖಾ ಸಂಸ್ಥೆ. ಇಂಥ ಕಡೆಯೂ ಭ್ರಷ್ಟರು ಇದ್ದಾರಲ್ಲಾ,’ ಎಂದು ನಾನು ಬೇಸರದಿಂದ ಹೇಳಿದೆ. ನನ್ನಲ್ಲಿದ್ದ ೨೦ ಪುಟಗಳ ದಾಖಲೆಯ ಜೆರಾಕ್ಸ್ ತೆಗೆದು, ಆ ಅಧಿಕಾರಿಗಳ ಸಹಿ ಮತ್ತು ಸೀಲ್ ಹಾಕಿಸಿಕೊಂಡು, ಅವರ ಐಡೆಂಟಿಟಿ ಕಾರ್ಡ್‌ನ ನಕಲುಪ್ರತಿಗೂ ಸಹಿ ಹಾಕಿಸಿಕೊಂಡೆ.
ಇದು ವಂಚನೆಯೊಳಗೊಂದು ವಂಚನೆಯ ಪ್ರಕರಣ. ಸಿಬಿಐಯಲ್ಲಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದ ಗೋಪಾಲಕೃಷ್ಣನ್ ಕುಡಿತ ಮತ್ತು ಜೂಜಿನ ಚಟಕ್ಕೆ ಸಿಲುಕಿ ಲಕ್ಷಾಂತರ ರೂ. ಮಾಡಿಕೊಂಡಿದ್ದರಂತೆ. ಹಣ ಹೊಂದಿಸಲು, ಸಿಬಿಐ ವಶದಲ್ಲಿದ್ದ ಸೊತ್ತುಗಳನ್ನು ದುರುಪಯೋಗಪಡಿಸಿಕೊಂಡರು. ತಮ್ಮ ಮಕ್ಕಳ ಮದುವೆಯನ್ನೂ ಈ ದುಡ್ಡಿನಲ್ಲೇ ಅದ್ಧೂರಿಯಾಗಿ ಮಾಡಿದ್ದರು. ಕೊನೆಗೆ ಜೈಲು ಪಾಲಾಗಿ, ಕೆಲ ವರ್ಷಗಳ ಬಳಿಕ ಮೃತಪಟ್ಟರು. ಇತ್ತ, ಅವರಿಂದ ಲಂಚ ಪಡೆದು ಮುದ್ದೆಮಾನ್‌ನ ದಾಖಲೆ ಹರಿದು ಹಾಕಿದ್ದ ಪೇದೆ ಕೂಡ ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡ. ಈ ಪ್ರಕರಣದ ಕೇಂದ್ರ ಬಿಂದು ಅಕ್ರಮ್ ಪಾಷಾ ನಾನಾ ಕಾಯಿಲೆಗಳಿಗೆ ತುತ್ತಾಗಿ, ಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಳ್ಳುವ ಸತ್ತು ಹೋದ. ಈ ಬಹುಕೋಟಿ ರೂ. ವಂಚನೆಯಿಂದಾಗಿ ನಷ್ಟಕ್ಕೊಳಗಾದ ಟಿವಿ ತಯಾರಿಕೆ ಕಂಪನಿ ಶೋಚನೀಯ ಸ್ಥಿತಿಯಲ್ಲಿ ಬಾಗಿಲು ಮುಚ್ಚಿಕೊಂಡಿತು.
Discussion about this post