ಯಾವುದೇ ವಿಶೇಷ ಉಪಕರಣಗಳಿಲ್ಲದೆ ಕೇವಲ ಚಾಕು, ಗುದ್ದಲಿ, ಕಟಿಂಗ್ ಪ್ಲೈಯರ್ ಮತ್ತು ಹಲವು ಕಟ್ಟಿಗೆ ತುಂಡುಗಳನ್ನಿಟ್ಟುಕೊಂಡು ಲ್ಯಾಂಡ್ಮೈನ್ನನ್ನು ನಿಷ್ಕ್ರಿಯಗೊಳಿಸಬಲ್ಲ ಅಕಿರಾ, ಹೊರತೆಗೆದು ಲ್ಯಾಂಡ್ಮೈನ್ಗಳಿಂದ ಪ್ಯೂಸ್ ಮತ್ತು TNTಯನ್ನು ಬೇರ್ಪಡಿಸಿ ಲ್ಯಾಂಡ್ಮೈನ್ನ ಕಬ್ಬಿಣದ ಹೊರ ಕವಚವನ್ನು ಶೇಖರಿಸಿ ಒಂದು ಸಂಗ್ರಹಾಲಯವನ್ನೇ ಮಾಡಿದ್ದಾನೆ.
ಹಲವು ಬಾರಿ ತನ್ನ ಈ ಕಾರ್ಯಕ್ಕೆ ಆರ್ಥಿಕವಾಗಿ ಸಹಾಯವಾಗಲೆಂದು ಕಬ್ಬಿಣವನ್ನು ತೂಕಕ್ಕೆ ಹಾಕಿದ್ದೂ ಉಂಟು. ಯಾವುದೇ ವಿಶೇಷ ಉಪಕರಣಗಳಿಲ್ಲದೆ ಲ್ಯಾಂಡ್ಮೈನ್ ನಿಷ್ಕ್ರಿಯಗೊಳಿಸುವ ಅಕಿರಾನ ಬಗ್ಗೆ ಪ್ರವಾಸಿಗರು ಕುತೂಹಲಗೊಂಡು ಮ್ಯೂಸಿಯಂನ್ನು ವೀಕ್ಷಿಸಲು ಶುರು ಮಾಡಿದರು.
ತನ್ನ ಡೀ- ಮೈನಿಂಗ್ ಕಾರ್ಯಕ್ಕೆ ಸಹಕಾರಿಯಾಗಲೆಂದು 1999 ರಿಂದ ಪ್ರತಿ ಪ್ರವಾಸಿಗರಿಗೆ 1 ಡಾಲರ್ ಶುಲ್ಕವಿಟ್ಟು ಹಣ ಸಂಗ್ರಹಿಸಿದ್ದಾನೆ. ಸುತ್ತ ಮುತ್ತ ಹಳ್ಳಿಗಳಲ್ಲಿ ಎಲ್ಲೇ ಲ್ಯಾಂಡ್ಮೈನ್ ಸ್ಫೋಟಗೊಂಡರು ಅಕಿರಾನಿಗೆ ಮೊದಲು ಕರೆ ಹೋಗುತ್ತದೆ ಮತ್ತು ಅಕಿರಾ ಸ್ಫೋಟವಾದ ಜಾಗದ ಸುತ್ತೆಲ್ಲಾ ಇರಬಹುದಾದ ಮತ್ತಷ್ಟು ಲ್ಯಾಂಡ್ಮೈನ್ಗಳನ್ನು ಹುಡುಕಿ ನಿಷ್ಕ್ರಿಯಗೊಳಿಸುತ್ತಾನೆ. ಹಳ್ಳಿ ಜನರಿಗೆ ಲ್ಯಾಂಡ್ಮೈನ್ಗಳ ಅರಿವು ಮೂಡಿಸಲು ಹಲವು ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾನೆ.
ತನ್ನ ಕಾರ್ಯದಲ್ಲಿ ನಿರತನಾಗಿರುವಾಗ ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಕಷ್ಟು ಗಾಯಗೊಂಡ ಅನಾಥ ಮಕ್ಕಳನ್ನು ಕಂಡಿದ್ದಾನೆ ಮತ್ತು ಅವರನ್ನು ತನ್ನ ಜೊತೆ ಇಟ್ಟುಕೊಂಡು ಸಾಕುತ್ತಿದ್ದಾನೆ. ಈತನ ಪತ್ನಿಯೂ ಸಹ ಈ ಕಾರ್ಯದಲ್ಲಿ ಅವನ ಜೊತೆ ಕೈ ಜೋಡಿಸಿದ್ದಳು. ದುರದೃಷ್ಟವಶಾತ್, ಹಲವು ವರ್ಷಗಳ ಹಿಂದೆ ಆಕೆ ಕಾಯಿಲೆಯೊಂದಕ್ಕೆ ಬಲಿಯಾದಳು. ಆ ನಂತರವೂ ಅಕಿರಾನ ಜೊತೆ ಸುಮಾರು 19 ಮಕ್ಕಳು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
(ಮುಂದುವರೆಯುವುದು)
Discussion about this post