ಲಾರಿಯ ಕೆಳಗಡೆ ಸಿಲುಕಿಕೊಂಡ ಸ್ಕೂಟರ್‌ನ ಬಿಡಿ ಭಾಗಗಳು ಪುಡಿಪುಡಿಯಾಗಿ, ಹಿಂದಿನಿಂದ ಬರುತ್ತಿದ್ದ ನಮ್ಮ ಮೇಲೆ ಹಾರಿದವು! ಕಿ.ಮೀ.ಗಟ್ಟಲೆ ಉಜ್ಜಿಕೊಂಡು ಹೋದ ಸ್ಕೂಟರ್ ಕೊನೆಗೆ ಪೀಸ್‌ಪೀಸ್ ಆಗಿ ಹಿಂದಿನಿಂದ ಹೊರಬಂತು. ಆದರೂ ಲಾರಿಯ ವೇಗ ಕಡಿಮೆಯಾಗಲಿಲ್ಲ. ಲಾರಿ ಒಂದು ರೌಂಡ್ ತೆಗೆದುಕೊಂಡು ಪುನಃ ಹಳೆಯ ವಿಮಾನ ನಿಲ್ದಾಣ ರಸ್ತೆಗೆ ಬಂದು, ದೊಮ್ಮಲೂರಿನ ಕಡೆ ಧಾವಿಸಿತು. ನಾನು ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡುತ್ತ ಬೆನ್ನಟ್ಟುವುದನ್ನು ಮುಂದುವರಿಸಿದೆ. ದೊಮ್ಮಲೂರಿನಿಂದ ವಿಮಾನ ನಿಲ್ದಾಣ ರಸ್ತೆಯ ತಿರುವಿನವರೆಗೆ ಆಗಷ್ಟೆ ರಸ್ತೆ ವಿಭಜಕ ಹಾಕಲಾಗಿತ್ತು.
ನಾನು ಹೆಡ್‌ಲೈಟ್ ಮತ್ತು ಸೈರನ್ ಹಾಕಿಕೊಂಡು ಬಲಭಾಗದ ರಾಂಗ್ ಸೈಡ್‌ಗೆ ಬೈಕ್ ಓಡಿಸಿದೆ. ಲಾರಿಗೆ ಬೈಕ್ ಓಡುತ್ತಿತ್ತು. ಆ ಚಾಲಕ ಮತ್ತು ನನ್ನ ಮುಖಾಮುಖಿಯಾಯಿತು. ಇನ್ನು ತಪ್ಪಿಸಿಕೊಳ್ಳಲು ಬೇರೆ ದಾರಿಯೇ ಇಲ್ಲ ಎಂದು ನಿರ್ಧರಿಸಿದ ಆತ ಎಡಗಡೆಯಿಂದ ತನ್ನ ಸಹಚರನನ್ನು ಕೆಳಕ್ಕೆ ಜಿಗಿಯಲು ಸೂಚಿಸಿದ. ಆತ ಜಿಗಿದ ಬಳಿಕ, ಬಲಗೈಯಿಂದ ಸ್ಟೇರಿಂಗ್ ಮಾತ್ರ ಹಿಡಿದುಕೊಂಡು ಬ್ಯಾಲೆನ್ಸ್ ಮಾಡುತ್ತ ಎಡಗಡೆಯ ಬಾಗಿಲಿನಿಂದ ಕೆಳಕ್ಕೆ ಹಾರಿದ! ಲಾರಿ ಬೇಕಾಬಿಟ್ಟಿ ಚಲಿಸಿ ರಸ್ತೆ ವಿಭಜಕದ ಮೇಲೆ ಹತ್ತಿ ಕೊನೆಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಿಂತಿತು. ನಾನು ಮತ್ತು ಗೋಪಾಲ್ ಬೈಕ್‌ನಿಂದ ಇಳಿದು ಆತನತ್ತ ಓಡಿದೆವು. ಆತ, ಪಕ್ಕದ ಗೋಡೆಯೊಂದನ್ನು ಹಾರಿ ಪಾರ್ಕ್‌ನೊಳಗೆ ತಲೆಮರೆಸಿಕೊಳ್ಳಲು ಯತ್ನಿಸಿದ.
ಆದಾಗಲೇ ಆತನ ಮೈಯಿಂದ ರಕ್ತ ಸೋರಲಾರಂಭಿಸಿತ್ತು. ನಾವು ಆತನನ್ನು ಹಿಡಿದು ಹೆಡೆಮುರಿ ಕಟ್ಟಿದೆವು. ಆತನ ಹೆಸರು ಅಮೀರ್ ಸುಲ್ತಾನ್ ಎಂದು ಗೊತ್ತಾಯಿತು. ಲಾರಿಯ ಬಳಿ ಬಂದು ಪರಿಶೀಲಿಸಿದಾಗ, ಸಾವಿರಾರು ಲೀಟರ್ ಕಳ್ಳಬಟ್ಟಿಯನ್ನು ಟಯರ್ ಟ್ಯೂಬ್‌ಗಳಲ್ಲಿ ತುಂಬಿಸಿಟ್ಟಿದ್ದು ಬೆಳಕಿಗೆ ಬಂತು. ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಚಂದೂಲಾಲ್ ನಮ್ಮ ಬೆನ್ನು ತಟ್ಟಿದರು. ನಾನಾ ಭಾಗಗಳಿಂದ ಸಹೋದ್ಯೋಗಿಗಳು ವೈರ್‌ಲೆಸ್ ಮೂಲಕ ನಮಗೆ ಅಭಿನಂದಿಸುತ್ತಿರುವುದನ್ನು ಕೇಳಿ ಖುಷಿಯಾಯಿತು.
ಆ ಘಟನೆ ನಡೆದ ಸುಮಾರು ಎರಡೂವರೆ ದಶಕಗಳ ಬಳಿಕ ನಾನು ಫ್ರೇಜರ್ ಟೌನ್‌ನಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಫ್ರೇಜರ್ ಟೌನ್‌ನ ನಾರ್ತ್ ರಸ್ತೆಯಲ್ಲಿರುವ ಮಸೀದಿಯೊಂದರ ಕುರಿತ ವಿವಾದ ಉಲ್ಬಣಗೊಂಡು, ಅಲ್ಪಸಂಖ್ಯಾತರಲ್ಲೇ ಎರಡು ಗುಂಪುಗಳ ನಡುವೆ ಆಗಾಗ ಸಂಘರ್ಷ ಉಂಟಾಗುತ್ತಿತ್ತು. ಅಲ್ಲಿಯ ಪರಿಸರ ಉದ್ವಿಗ್ನವಾಗಿತ್ತು. ಆ ಮಸೀದಿಯ ಮುಲ್ಲಾ ನನ್ನನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದ್ದರು. ‘ಮಸೀದಿಯಲ್ಲಿ ರಾತ್ರಿ ಮಲಗುವ ವಿಚಾರದಲ್ಲಿ ಗಲಾಟೆಯಾಗುತ್ತಿದೆ. ಗಲಾಟೆ ಮಾಡುತ್ತಿದ್ದವರೆಲ್ಲ ಈ ಊರಿನವರಲ್ಲ. ಅವರೆಲ್ಲ ಬಿಹಾರ, ಯುಪಿ ಕಡೆಯವರು,’ ಎಂದು ಹೇಳಿ ಹೋಗಿದ್ದರು. ನಾನು ಆ ಯುವಕರನ್ನೆಲ್ಲಾ ಠಾಣೆಗೆ ಕರೆಸಿ ‘ಬಿಹಾರ, ಯುಪಿಯಲ್ಲಿ ಮಾಡಿದಂತೆ ಇಲ್ಲಿ ಮಾಡಿದರೆ ಹುಷಾರ್, ಬೆಂಗಳೂರು ಪೊಲೀಸರ ಮುಂದೆ ನಿಮ್ಮ ಆಟ ನಡೆಯುವುದಿಲ್ಲ,’ ಎಂದು ಖಡಕ್ಕಾಗಿ ಹೇಳಿ, ಅವರ ಊರಿನ ವಿಳಾಸ ಮತ್ತು ಫೋನ್ ನಂಬರ್ ಬರೆದುಕೊಂಡೆ. ಮೂಲ ವಿಳಾಸ ಸುಳ್ಳು ಎಂದು ಗೊತ್ತಾದರೆ ಒಬ್ಬರನ್ನೂ ಸುಮ್ಮೆನೆ ಬಿಡುವುದಿಲ್ಲ ಎಂದು ಎಚ್ಚರಿಸಿ ಕಳಿಸಿದೆ.
ಅವರೆಲ್ಲ ಸುಳ್ಳು ವಿಳಾಸ ಕೊಟ್ಟಿದ್ದರು. ಹಾಗಾಗಿ ಮರುದಿನವೇ ಇಲ್ಲಿಂದ ಜಾಗ ಖಾಲಿ ಮಾಡಿದರು. ಮುಂದೆ ಗಲಾಟೆ ತನ್ನಿಂದತಾನೇ ನಿಂತು ಹೋಯಿತು. ಈ ಹಿನ್ನೆಲೆಯಲ್ಲಿ ಆ ಮುಲ್ಲಾ ನನ್ನನ್ನು ಮಸೀದಿಗೆ ಕರೆದು ಸನ್ಮಾನಿಸಿದ್ದರು. ವಿಚಾರಿಸಿದಾಗ ಅಮೀರ್ ಸುಲ್ತಾನ್ ಆ ವ್ಯಕ್ತಿಯ ಕುರಿತು ಮತ್ತಷ್ಟು ಕುತೂಹಲದ ಮಾಹಿತಿ ಲಭ್ಯವಾಯಿತು. ಕಳ್ಳಬಟ್ಟಿ ಸಾಗಣೆ ಮತ್ತು ನನ್ನ ಕೊಲೆ ಯತ್ನ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಹೊರಬಂದ ಬಳಿಕ ಅಮೀರ್‌ನನ್ನು ಮನೆಯವರು ಸೌದಿಗೆ ಕಳಿಸಿದ್ದರು. ಅಲ್ಲಾತ ಕೆಲ ವರ್ಷ ಕೆಲಸ ಮಾಡಿ ಸಾಕಷ್ಟು ದುಡ್ಡು ಸಂಪಾದನೆ ಮಾಡಿ ಬೆಂಗಳೂರಿಗೆ ವಾಪಾಸಾಗಿದ್ದ. ಹೊಸಕೋಟೆ ಬಳಿ ಎಕರೆಗಟ್ಟಲೆ ಜಮೀನು ಖರೀದಿಸಿದ್ದ. ಮುಂದೆ ಆತನ ಕುಟುಂಬದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದವು.
ಇವೆಲ್ಲ ತಾನು ಹಿಂದೆ ಮಾಡಿದ ಪಾಪದ ಫಲ ಎಂದುಕೊಂಡ ಆತ ಬೆಲೆ ಬಾಳುವ ಜಮೀನನ್ನು ಮಾರಿ, ಆ ಹಣದಿಂದ ಫ್ರೇಜರ್‌ಟೌನ್‌ನಲ್ಲಿ ಮಸೀದಿ ಕಟ್ಟಿಸಿದ್ದ. ಸಂತನಂತೆ ಬದುಕಿ, ಸಮಾಜ ಸೇವೆಯಲ್ಲಿ ತೊಡಗಿದ್ದ…
ಮುಂದೆ ನಾವಿಬ್ಬರೂ ಉತ್ತಮ ಸ್ನೇಹಿತರಂತೆ ಇದ್ದೆವು. 2010ರಲ್ಲಿ ಅನಾರೋಗ್ಯದಿಂದ ತೀರಿಕೊಂಡಾಗ ನಾನು ದುಃಖಿತನಾಗಿದ್ದೆ.
ಆ ವ್ಯಕ್ತಿ ನನ್ನ ಮೇಲೆ ಲಾರಿ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದ. ಆದರೆ ನಾನು ಸ್ವಲ್ಪದರಲ್ಲೇ ಅಪಾಯದಿಂದ ಪಾರಾದೆ. ಆ ಅಪರಾಧಕ್ಕಾಗಿ ಆತ ಜೈಲು ಶಿಕ್ಷೆ ಅನುಭವಿಸಿದ. ಮುಂದೆ 26 ವರ್ಷಗಳ ಬಳಿಕ ಅದೇ ವ್ಯಕ್ತಿ ನನಗೆ ಶಾಲು ಹೊದಿಸಿ ಸನ್ಮಾನಿಸಿದ!
Discussion about this post