ಸಂಜೆ 4.15ಕ್ಕೆ ಸರಿಯಾಗಿ ರಾಜೀವ್ ನೀಟಾಗಿ ಡ್ರೆಸ್ ಮಾಡಿಕೊಂಡು ರಾಜಕುಮಾರನ ಗತ್ತಿನಲ್ಲಿ ಕಾರು ಏರಲು ಅಣಿಯಾದರು. ಅಷ್ಟರಲ್ಲಿ, 5ಕ್ಕೆ ಹೊರಡಬೇಕಿದ್ದ ವಿಮಾನ ಕಾರಣಾಂತರಗಳಿಂದ ಎರಡು ಗಂಟೆ ವಿಳಂಬವಾಗಿ ಹೊರಡಲಿದೆ ಎಂಬ ಮೆಸೇಜ್ ಬಂತು. ಎರಡು ಗಂಟೆ ಟೈಂಪಾಸ್ ಮಾಡಬೇಕಲ್ಲ ಎಂದುಕೊಂಡ ರಾಜೀವ್, ಸಿಟಿ ರ್‌ಂಡ್‌ಸ್ಗೆ ಮುಂದಾದರು. ಅವರಿಗಾಗಿ ಐಷಾರಾಮಿ ಕಾರು ಸಜ್ಜಾಗಿ ನಿಂತಿತ್ತು. ಆದರೆ ಅವರು ಇದ್ದಕ್ಕಿಂದಂತೆ, ಪೋರ್ಟಿಕೊದ ಹೊರಗೆ ನಿಲ್ಲಿಸಲಾಗಿದ್ದ ಹಳದಿ ಬಣ್ಣದ ಜೀಪಿನತ್ತ ಹೆಜ್ಜೆ ಹಾಕಿ, ಚಾಲಕನ ಸೀಟಿನಲ್ಲಿ ಕುಳಿತು ಬಿಟ್ಟರು! ಅಲ್ಲಿ ನೆರೆದಿದ್ದ ಹಿರಿ-ಕಿರಿಯ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ತಬ್ಬಿಬ್ಬು!!
ಗುಂಡೂರಾವ್, ಬೂಟಾ ಸಿಂಗ್ ಮತ್ತು ಎಫ್.ಎಂ.ಖಾನ್ ತರಾತುರಿಯಿಂದ ಜೀಪಿನಲ್ಲಿ ಕೂತರು. ಆ ಜೀಪಿನ ಟಾಪ್ ಓಪನ್ ಆಗಿತ್ತು. ಪ್ರಚಾರಕ್ಕಾಗಿ ಮುಂದುಗಡೆ ಮೈಕ್ ಬೇರೆ ಕಟ್ಟಲಾಗಿತ್ತು. ಜೀಪ್ ಯಾವ ಕಡೆ ಬರುತ್ತಿದೆ ಎಂಬುದನ್ನು ಸೈಡ್ ಮಿರರ್‌ನಲ್ಲಿ ನೋಡುತ್ತ ಯಶವಂತಪುರದ ಕಡೆ ಬುಲೆಟ್ ಓಡಿಸತೊಡಗಿದೆ. ಜತೆಗೆ, ವೈರ್‌ಲೆಸ್‌ನಲ್ಲಿ ಕಂಟ್ರೋಲ್ ರೂಮ್‌ಗೆ ಮೆಸೆಜ್ ಕಳಿಸತೊಡಗಿದೆ.
ವಿಂಡ್ಸರ್‌ಮ್ಯಾನರ್ ಅಂಡರ್‌ಪಾಸ್, ಕಾವೇರಿ ಥೀಯೇಟರ್, ಭಾಷ್ಯಂ ಸರ್ಕಲ್, ಸರ್ಕಲ್ ಮಾರಮ್ಮ ದೇವಸ್ಥಾನ ವೃತ್ತ, ಟಾಟಾ ಇನ್‌ಸ್ಟಿಟ್ಯೂಟ್ ಮುಂಭಾಗದವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಯಶವಂತಪುರ ಸರ್ಕಲ್ ಬಳಿ ಹೋಗಿ ಹಿಂದೆ ನೋಡಿದರೆ ಹಳದಿ ಜೀಪ್ ನಾಪತ್ತೆ. ಅಷ್ಟರಲ್ಲಿ ಟ್ರಾಫಿಕ್ ಎಸಿಪಿ ಮಹಾದೇವಸ್ವಾಮಿ ಅಲ್ಲಿಗೆ ಬಂದು, ರಾಜೀವ್ ಬಗ್ಗೆ ವಿಚಾರಿಸತೊಡಗಿದರು. ರಾಜೀವ್ ಗಾಂಧಿ ಮಿಸ್ ಎಂಬ ಸಂದೇಶ ವೈರ್‌ಲೆಸ್‌ನಲ್ಲಿ ಹರಿದಾಡತೊಡಗಿತು. ಕಮೀಷನ್ ನಿಜಾಮುದ್ದೀನ್, ಡಿಸಿಪಿಗಳಾದ ನಾಗರಾಜ್ ಮತ್ತು ಸೋಮಶೇಖರ್ ಕೂಡ ಅಲ್ಲಿಗೆ ಬಂದು ಗಾಬರಿಗೊಂಡರು. ಅಧಿಕಾರಿಗಳೆಲ್ಲ ಬೇರೆ ಬೇರೆ ದಿಕ್ಕಿನಲ್ಲಿ ಸಾಗಿ ಆ ಜೀಪನ್ನು ಹುಡುಕಲು ತೊಡಗಿದರು.
ನಾನು ಸೀದಾ ಸ್ಯಾಂಕಿ ರಸ್ತೆ ಮತ್ತು ಸಂಪಿಗೆ ರಸ್ತೆ ಕೂಡುವ ಜಾಗದಲ್ಲಿ ಹೋಗಿ ನಿಂತೆ. ಅಷ್ಟರಲ್ಲಿ ನನಗೆ ಮಲ್ಲೇಶ್ವರ 18ನೇ ಕ್ರಾಸ್‌ನ ಬಿಟಿಎಸ್ ಬಳಿ ನಿಲ್ದಾಣದ (ಈಗ ಬಿಎಂಟಿಸಿ) ಬಳಿ ಹಳದಿ ಜೀಪ್ ವೇಗವಾಗಿ ಬರುತ್ತಿರುವುದು ಕಾಣಿಸಿತು. ತಕ್ಷಣ ಮೆಸೇಜ್ ಕಳಿಸಿ, ಪೈಲಟಿಂಗ್ ಮುಂದುವರೆಸಿದೆ. ನಮ್ಮತ್ತ ಜೀಪ್ ಭಾರಿ ವೇಗದಿಂದ ಬರುತ್ತಿದೆ ಎಂದು ನನ್ನ ಹಿಂದೆ ಕುಳಿತಿದ್ದ ಕಾನ್‌ಸ್ಟೇಬಲ್ ಕೂಗತೊಡಗಿದ. ನಾನು ಮತ್ತಷ್ಟು ವೇಗವಾಗಿ ಬೈಕ್ ಓಡಿಸತೊಡಗಿದೆ. ಕಾವೇರಿ ಥೀಯೇಟರ್ ಜಂಕ್ಷನ್‌ಗೆ ಬಂದು ಬಲ ತಿರುವು ತೆಗೆದುಕೊಂಡೆ. ಜೀಪ್ ಹತ್ತಿರ ಹತ್ತಿರ ಬರುತ್ತಿತ್ತು. ನನಗೆ ಹಿರಿಯ ಅಧಿಕಾರಿಗಳು ಆದೇಶಿಸಿದ ಪ್ರಕಾರ, ನಾನು ಆ ಜೀಪ್‌ನ ಮುಂದೆಯೇ ಇರಬೇಕಿತ್ತು. ವಿಂಡ್ಸನ್ ಮ್ಯಾನರ್ ಬ್ರಿಜ್ ಬಳಿ ಬಂದಾಗ ಬೈಕ್‌ನ ವೇಗ 120 ಕಿ.ಮೀ. ತಲುಪಿತ್ತು. ಹಿಂದುಗಡೆಯ ಕಾನ್‌ಸ್ಟೇಬಲ್ ಭೀತಿಯಿಂದ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ‘ಸರ್ ರಾಜೀವ್ ಗಾಂಧಿ ಅವರು ನಮ್ಮತ್ತ ಬೆರಳು ತೋರಿಸಿ ಏನೋ ಬೈಯುತ್ತಿದ್ದಾರೆ ಸರ್, ಇನ್ನೇನು ನಮಗೆ ಡಿಕ್ಕಿ ಹೊಡೆದೇ ಬಿಡುತ್ತಾರೆ.’ ಎಂದು ಚೀರತೊಡಗಿದ.
ಜೀಪ್ ತೀರ ಹತ್ತಿರ ಬಂದು ಗುದ್ದೇ ಬಿಡುತ್ತದೆ ಎಂಬ ಸನ್ನಿವೇಶ ನಿರ್ಮಾಣವಾದಾಗ ಬ್ರೇಕ್ ಹಾಕಲೇಬೇಕಾಯಿತು. ಆ ಯಮ ವೇಗದಲ್ಲಿ ಜೀಪ್ ಏನಾದರೂ ಒಂದು ಚೂರು ತಾಗಿದರೂ, ಬೈಕ್ ಮೀಟರ್‌ಗಟ್ಟಲೆ ದೂರ ಎಗರಿ ಬೀಳುತ್ತಿತ್ತು. ನಮ್ಮಿಬ್ಬರ ಮೂಳೆಗಳನ್ನು ಹೆಕ್ಕಿ ಹೆಕ್ಕಿ ಚೀಲ ತುಂಬಬೇಕಾಗುತ್ತಿತ್ತು.!
ವಾಸ್ತವ ಏನೆಂದರೆ, ನಾನು ಬಿಳಿ ಮಫ್ತಿ ಡ್ರೆಸ್‌ನ್ಲಿ ಅವರ ವಾಹನವನ್ನು ಪೈಲಟ್ ಮಾಡುತ್ತಿದ್ದ ಮಾಹಿತಿ ರಾಜೀವ್‌ಗೆ ಇರಲೇ ಇಲ್ಲ. ನಾನು ಅವರ ಜೀಪ್‌ಗೆ ಸೈಡ್ ಬಿಡದೆ ಅತಿ ವೇಗದಿಂದ ಹೋಗುತ್ತಿರುವುದನ್ನು ಕಂಡು ಅವರು ಸಿಡಿಮಿಡಿಗೊಂಡಿದ್ದರು. ರ್ರೂಮ್… ಎಂಬ ಸದ್ದಿನೊಂದಿಗೆ ಜೀಪನ್ನು ಹಿಂದಕ್ಕೆ ತೆಗೆದುಕೊಂಡ ರಾಜೀವ್, ಮತ್ತೆ ಅದೇ ವೇಗದಲ್ಲಿ ಮುಂದೆ ಚಲಾಯಿಸತೊಡಗಿದರು. ನಮಗೆ ವಾಪಸ್ ಹೋಗಲು ಸೂಚಿಸಿ, ಹಿರಿಯ ಅಧಿಕಾರಿಗಳೆಲ್ಲ ನಿಧಾನವಾಗಿ ಆ ಜೀಪನ್ನು ಹಿಂಬಾಲಿಸತೊಡಗಿದರು. ಈ ಘಟನೆಯಿಂದ ಚೇತರಿಸಿಕೊಂಡು, ಬೈಕ್ ಸ್ಟಾರ್ಟ್ ಮಾಡಲು ಮುಂದಾದೆ. ನನ್ನ ಸೀಟಿನಿಂದ ನೀರು ಸುರಿಯುತ್ತಿರುವುದು ಗಮನಕ್ಕೆ ಬಂತು. ಬಿಳಿಯ ಪ್ಯಾಂಟ್‌ನ ಹಿಂಭಾಗ ಪೂರ್ತಿ ಒದ್ದೆ. ಏನೆಂದು ನೋಡಿದರೆ, ಕಾನ್‌ಸ್ಟೇಬಲ್ ಹೆದರಿ ಉಚ್ಚೆ ಹೊಯ್ದುಕೊಂಡು ಗುಬ್ಬಚ್ಚಿಯಂತೆ ಮುದುರಿಕೊಂಡು ಕುಳಿತಿದ್ದ!
ಆ ಘಟನೆ ನಡೆದು 31 ವರ್ಷಗಳು ಕಳೆದಿವೆ. ಮುಂದೆ ಪ್ರಧಾನಿಯೂ ಆದ ರಾಜೀವ್ ಗಾಂಧಿ ಈಗ ಬದುಕಿಲ್ಲ. ನಾನು ನಿವೃತ್ತಿಯಾಗಿದ್ದೇನೆ. ಬೆಂಗಳೂರಿನ ಸ್ಯಾಂಕಿ ರಸ್ತೆಯ ಗಾಲ್‌ಫ್ ಕೋರ್ಸ್ ಬಳಿಯ ಲೀ ಮೆರಿಡಿಯನ್ (ಹಿಂದಿನ ಹೆಸರು ಹಾಲಿಡೇ ಇನ್) ಬಳಿ ಹೋದಾಗಲೆಲ್ಲ ಆ ಘಟನೆ ಕಣ್ಮುಂದೆ ಬಂದು ನಿಲ್ಲುತ್ತದೆ. ನನ್ನ ಬೆನ್ನ ಹಿಂದೆ ಕೂತಿದ್ದ ಪೇದೆ ಈಗ ಟ್ರಾಫಿಕ್ ಎಸ್‌ಐ. ರಸ್ತೆಯಲ್ಲಿ ಸಿಕ್ಕಾಗಲೆಲ್ಲ ಆ ಘಟನೆಯನ್ನು ನೆನಸಿಕೊಳ್ಳುತ್ತಾರೆ.
Discussion about this post