1990
ಆ್ಯಸಿಡ್ ರಾಜಾನನ್ನು ಬಲೆಗೆ ಬೀಳಿಸುವ ಕಾರ್ಯತಂತ್ರ ಹೆಣೆಯುತ್ತ ಠಾಣೆಯಲ್ಲಿ ಕೂತಿದ್ದೆ. ಅಷ್ಟರಲ್ಲಿ ಕಾನ್‌ಸ್ಸ್ಟೇಬಲ್ ಬಿ.ಟಿ. ರಾಮಕೃಷ್ಣಯ್ಯ ನನ್ನೆದುರು ಬಂದು ನಿಂತರು. ಆ್ಯಸಿಡ್ ದಾಳಿಗೆ ಒಳಗಾದವರಲ್ಲಿ ಅವರೂ ಒಬ್ಬರು. ಕಣ್ಣಿನ ಕೆಳಗೆ, ಮುಖದ ಭಾಗವೆಲ್ಲ ಸುಟ್ಟು ವಿರೂಪವಾಗಿತ್ತು. ನಾನು ಕುಶಲ ವಿಚಾರಿಸುತ್ತಿದ್ದಂತೆ ಜೋರಾಗಿ ಅಳತೊಡಗಿದರು.
‘ಸಾರ್ ನನ್ನ ಮೂರು ವರ್ಷದ ಮಗುವಿಗೆ ನಾನೆಂದರೆ ತುಂಬಾ ಇಷ್ಟವಾಗಿತ್ತು. ಡ್ಯೂಟಿ ಮುಗಿಸಿ ಬರುತ್ತಲೇ ಓಡೋಡಿ ಬಂದು ತಬ್ಬಿಕೊಳ್ಳುತ್ತಿತ್ತು. ಆದರೆ ಈಗ ನನ್ನ ಈ ವಿರೂಪ ಮುಖ ನೋಡಿದಾಕ್ಷಣ ಕಿಟಾರನೆ ಕಿರುಚಿಕೊಳ್ಳುತ್ತದೆ. ಹೇಗಾದರೂ ಮಾಡಿ ಆ ಪಾತಕಿಯನ್ನು ಹಿಡಿದು, ಎನ್‌ಕೌಂಟರ್‌ನಲ್ಲಿ ಮುಗಿಸಿಬಿಡಿ.’ ಎಂದು ಕೈಜೋಡಿಸಿದರು. ಆಗಷ್ಟೆ ಸ್ಟೇಷನ್ ಶೇಖರ್ ಎಂಬ ರೌಡಿ ನನ್ನ ಗುಂಡಿಗೆ ಬಲಿಯಾಗಿದ್ದ. ನಾನು ಆ ಕಾನ್‌ಸ್ಟೇಬಲ್‌ಗೆ ಸಮಾಧಾನ ಮಾಡಿ ಕಳಿಸಿದೆ.
ಎಸ್‌ಐ ಮಂಜುಳಾ ಅವರು ಠಾಣೆಗೆ ಕರೆ ತಂದಿದ್ದ ವೇಶ್ಯೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಸ್ ಹಾಕದೆ ಬಿಟ್ಟು ಬಿಡುವಂತೆ ರಿಕ್ವೆಸ್‌ಟ್ ಮಾಡಿದೆ. ರೇಷ್ಮಾ ಮತ್ತು ಲತಾ ತನಿಖೆಗೆ ಸಾಥ್ ನೀಡಲು ಒಪ್ಪಿಕೊಂಡರು. ‘ಸೇಂಟ್ ಮಾರ್ಕ್‌ಸ್ ರಸ್ತೆ ಪಕ್ಕದಲ್ಲಿ ನಾವು ರಾತ್ರಿ ಹೊತ್ತು ‘ಬ್ಯುಸಿನೆಸ್’ಗಾಗಿ ನಿಂತಿರುತ್ತೇವೆ. ಆ್ಯಸಿಡ್ ರಾಜಾ ನಮ್ಮಿಂದ ಹಫ್ತಾ ವಸೂಲಿ ಮಾಡಲು ಬರುತ್ತಾನೆ. ಆತ ಬಂದ ತಕ್ಷಣ ನಾನು ವೇಲ್‌ಅನ್ನು ತಲೆ ಮೇಲೆ ಹೊದ್ದುಕೊಂಡು ಸಿಗ್ನಲ್ ಕೊಡುತ್ತೇನೆ. ತತಕ್ಷಣ ನೀವು ಬಂದು ಹಿಡಿಯಿರಿ.’ ಎಂದು ರೇಷ್ಮಾ ಐಡಿಯಾ ಕೊಟ್ಟಳು. ಮರು ದಿನ ರಾತ್ರಿ 8 ಗಂಟೆ ಸುಮಾರಿಗೆ ನಮ್ಮ ಸ್ಕ್ವಾಡ್ ಮಫ್ತಿಯಲ್ಲಿ ಬೆಂಗಳೂರಿನ ಸೇಂಟ್ ಮಾರ್ಕ್‌ಸ್ ರಸ್ತೆ ಬಳಿ ಕಾದು ನಿಂತಿತು. ಎಸ್‌ಐ ಮಂಜುಳಾ ಕೂಡಾ ಸೇರಿಕೊಂಡರು.
ಸುಂದರವಾಗಿದ್ದ ರೇಷ್ಮಾ ಶೃಂಗರಿಸಿಕೊಂಡು ಫುಟ್‌ಪಾತ್‌ನಲ್ಲಿ ನಿಂತಿದ್ದಳು. ವಿಟಪುರುಷರು ಕಾರು, ಬೈಗಳನ್ನು ನಿಲ್ಲಿಸಿ ಆಕೆಯನ್ನು ಕರೆದುಕೊಂಡು ಹೋಗಲು ಪೈಪೋಟಿಗೆ ಬಿದ್ದರು. ಅಂಥವರನ್ನು ಪಕ್ಕಕ್ಕೆ ಎಳೆದುಕೊಂಡು ಹೋಗಿ, ನಾವು ಪೊಲೀಸರೆಂದು ಹೇಳಿದಾಗ ಅವರ ಕಾಮೋತ್ಸಾಹ ಇಳಿದುಬಿಡುತ್ತಿತ್ತು. ಅವರೆಲ್ಲ ಶ್ರೀಮಂತ ಕುಳಗಳು. ನಮ್ಮ ಕಾರ್ಯಾಚರಣೆಗಾಗಿ ರೇಷ್ಮಾಳನ್ನು ಓಲೈಸಲೇಬೇಕಿತ್ತು. ಹಾಗಾಗಿ ವಿಟಪುರುಷರಿಂದ 100, 200, 300 ರೂ.ವನ್ನು ವಸೂಲಿ ಮಾಡಿ ಆಕೆಯ ಕೈಗೆ ಕೊಡಲಾರಂಭಿಸಿದೆವು. ಮೊದಲ ದಿನ ಸಂಗ್ರಹವಾದ ಮೊತ್ತು 5 ಸಾವಿರ ರೂ.ಗೂ ಹೆಚ್ಚು! ರೇಷ್ಮಾ ಖುಷಿಯಿಂದ ‘ಸಾರ್ ನಾನು ಒಂದು ವಾರ ಬಿಸಿನೆಸ್ ಮಾಡಿದರೂ ಇಷ್ಟು ಕಾಸು ಸಿಗುತ್ತಿರಲಿಲ್ಲ.’ ಎಂದಳು.
ಆದರೆ ಆ್ಯಸಿಡ್ ರಾಜಾ ಬರಲೇ ಇಲ್ಲ. ಹೀಗೆ ಮೂರು ರಾತ್ರಿ ಕಳೆಯಿತು. ನಾಲ್ಕನೆಯ ದಿನ ರಾತ್ರಿ 10 ಗಂಟೆಗೆ ಸುಮಾರಿಗೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಹಿಡಿದು ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸುತ್ತಿರುವುದು ಕಂಡು ಬಂತು. ತತಕ್ಷಣ ಆಕೆ ವೇಲ್‌ಅನ್ನು ತಲೆಯ ಮೇಲೆ ಎಳೆದುಕೊಂಡರು. ನಾವು ಆತನ ಮೇಲೆ ಮುಗಿಬಿದ್ದು ಹಿಡಿದುಕೊಂಡೆವು. ನೋಡಿದರೆ ಆತ ಆ್ಯಸಿಡ್ ರಾಜಾ ಆಗಿರಲಿಲ್ಲ. ‘ಚಾಕು ತೋರಿಸಿದ್ದರಿಂದ ಹೆದರಿ ನಿಮ್ಮನ್ನು ಕರೆದೆ. ಇವನನ್ನು ಲಾಕಪ್‌ಗೆ ಹಾಕಿ.’ ಎಂದು ನಮಗೇ ಆರ್ಡರ್ ಮಾಡಿದಳು ರೇಷ್ಮಾ!
ಅವತ್ತು ರಾತ್ರಿ ಸುಮಾರು 11:30 ಆಗಿರಬಹುದು. ಫಿಯೆಟ್ ಕಾರಿನಲ್ಲಿ ಬಂದ ಸೂಟ್‌ಧಾರಿ ವ್ಯಕ್ತಿಯೊಬ್ಬ ತೂರಾಡುತ್ತ ಆಕೆಯನ್ನು ಹಿಡಿದು ಕಾರಿನತ್ತ ಎಳೆಯುತ್ತಿದ್ದ. ನಾವು ಆಕೆಯನ್ನು ಆ ವ್ಯಕ್ತಿಯಿಂದ ಬಿಡಿಸಿದೆವು. ಆತನ ಕಾಮೋನ್ಮಾದಕ್ಕೆ ತಣ್ಣೀರು ಎರಚಿದ್ದರಿಂದ ಕೋಪಗೊಂಡು ನಮ್ಮ ಮೇಲೆ ತಿರುಗಿ ಬಿದ್ದ. ನಾವು ಆತನನ್ನು ಕಾರಿನ ಸಮೇತ ಠಾಣೆಗೆ ಎಳೆದು ತಂದೆವು. ಪೂರ್ವಾಪರ ವಿಚಾರಿಸಿದಾಗ ನಮಗೆ ಪರಮಾಶ್ಚರ್ಯ ಕಾದಿತ್ತು. ಆತ ಅಬಕಾರಿ ಇಲಾಖೆಯ ಕಮಿಷನರ್ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿಯಾಗಿದ್ದ! ಅಷ್ಟರಲ್ಲಿ ನಮ್ಮ ಠಾಣೆಗೆ ಡಿಸಿಪಿಯೊಬ್ಬರು ಭೇಟಿ ನೀಡಿದರು. ಅವರು, ಆ ವ್ಯಕ್ತಿ ಠಾಣೆಯಲ್ಲಿ ಕೂತಿದ್ದನ್ನು ಕಂಡು ದಂಗಾದರು. ಏಕೆಂದರೆ, ಅವರಿಬ್ಬರು ಬಳ್ಳಾರಿಯಲ್ಲಿ ಸರ್ವಿಸ್‌ನಲ್ಲಿದ್ದರಂತೆ. ಒಟ್ಟಿಗೇ ಬೆಂಗಳೂರಿಗೆ ಟ್ರಾನ್‌ಸ್ಫರ್ ಆಗಿತ್ತಂತೆ. ಕೊನೆಗೆ ಅವರನ್ನು ಬಿಟ್ಟು ಕಳಿಸಲಾಯಿತು.
ಆ್ಯಸಿಡ್ ರಾಜಾನನ್ನು ಬಂಧಿಸಲು ನಾವು ಕೈಗೊಂಡ ರಾತ್ರಿ ಕಾರ್ಯಾಚರಣೆ ವೇಳೆ ಇಂಥ ಹಲವಾರು ವಿನೋದಾವಳಿಗಳು ನಡೆದು ಹೋದವು. ನಾವು ಮಫ್ತಿಯಲ್ಲಿ ಆರೋಪಿಗಾಗಿ ಹೊಂಚು ಹಾಕುತ್ತಿದ್ದರೆ. ಸಮವಸ್ತ್ರದಲ್ಲಿದ್ದ ಪೇದೆಗಳು ಐದೋ ಹತ್ತೋ ಕೊಡುವಂತೆ ರೇಷ್ಮಾಳತ್ತ ಕೈ ಚಾಚುತ್ತಿದ್ದ ದೃಶ್ಯವೂ ತಮಾಷೆಯಾಗಿತ್ತು. ಹೀಗೆ ನಾಲ್ಕು ದಿನ ಕಾದರೂ ರಾಜಾ ಬರಲೇ ಇಲ್ಲ. ಗೀತಾ ಎಂಬ ಮತ್ತೊಬ್ಬ ವೇಶ್ಯೆಯಿಂದ ಮಾಹಿತಿ ಪಡೆಯಲು ಹೊರಟ ದಿನವೇ ಆಕೆ ಬೀದಿ ಬದಿಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಳು.
(ಮುಂದುವರೆಯುವುದು)
Discussion about this post