ಐವರು ಆರೋಪಿಗಳು ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು, ಕಾಲೇಜು ಹುಡುಗಿಯರನ್ನು ಚುಡಾಯಿಸುತ್ತ ನಮ್ಮತ್ತಲೇ ಹೆಜ್ಜೆಹಾಕುತ್ತಿದ್ದರು! ಆದರೆ ಅದು ಜನದಟ್ಟಣೆಯ ಪ್ರದೇಶವಾದರಿಂದ ಸಂಘರ್ಷಕ್ಕೆ ಇಳಿಯುವುದು ಅಪಾಯಕಾರಿಯಾಗಿತ್ತು. ಹಾಗಾಗಿ ನಾನು ಕಾನ್‌ಸ್ಟೆಬಲ್ ನರಸಿಂಹಮೂರ್ತಿಯನ್ನು ಸ್ಥಳೀಯ ಮಾಹಿತಿದಾರನೊಬ್ಬನ ಜತೆ ಫಾಲೋ ಮಾಡಲು ಸೂಚಿಸಿದೆ. ರಾತ್ರಿ 8 ಗಂಟೆ ಸುಮಾರಿಗೆ ವಾಪಸ್ ಬಂದ ಕಾನ್‌ಸ್ಟೆಬಲ್, ಹೊರ ವಲಯದಲ್ಲಿ ಮಹಿಳೆಯೊಬ್ಬಳ ಮನೆ ಇದ್ದು, ಆಕೆ ‘ಗಾಳಿಬೀಡು ಆಂಟಿ’ ಎಂದೇ ಕುಖ್ಯಾತಿ ಪಡೆದಿರುವ ವೇಶ್ಯೆ. ಆ ಮನೆಗೆ ಐವರು ಆರೋಪಿಗಳು ಹೋಗಿದ್ದಾರೆ ಎಂಬ ಮಾಹಿತಿ ತಂದರು. ಕಾಡಿನಿಂದ ಆವೃತವಾದ ರಸ್ತೆಯಲ್ಲಿ ಸುಮಾರು ದೂರ ನಡೆದುಕೊಂಡೇ ಹೋಗಬೇಕಿತ್ತು. ನಾವು ಮನೆ ಸಮೀಪಿಸುತ್ತಿದ್ದಂತೆ ಅವರೆಲ್ಲ ಹೊರ ಬರಲಾರಂಭಿಸಿದ್ದರು. ನಾವು ಪೊದೆಯ ಹಿಂದೆ ಅವಿತುಕೊಂಡೆವು. ಆದರೆ, ನಮ್ಮ ಟಾರ್ಚ್ ಲೈಟ್ ನೋಡಿದ ಆರೋಪಿಗಳು, ಕತ್ತಲೆಯಲ್ಲಿ ಬೆಂಕಿ ಕಡ್ಡಿ ಗೀರುತ್ತ ನಮ್ಮನ್ನು ಹುಡುಕತೊಡಗಿದರು.
‘ನಾವು ಪೊಲೀಸರು, ಸರೆಂಡರ್ ಆಗಿ’ ಎಂದು ಅಬ್ಬರಿಸಿದೆ. ಅವರಲ್ಲೊಬ್ಬ ‘ಚಾರ್ಜ್’ ಎಂದು ಕೂಗಿದ. ಉಳಿದವರು ಕತ್ತಿ, ಚಾಕು ಹೊರತೆಗೆದು ನಮ್ಮ ಮೇಲೆ ದಾಳಿಗೆ ಮುಂದಾದರು. ಗಾಳಿಯಲ್ಲಿ ಗುಂಡು ಹಾರಿಸಿದರೂ ಸುಮ್ಮನಾಗಲಿಲ್ಲ. ನಾನು ಅವರ ಕಾಲುಗಳತ್ತ ಗುಂಡು ಹಾರಿಸಿದೆ. ಪ್ರಶಾಂತ್ ಎಂಬಾತ ಗುಂಡೇಟು ತಿಂದು ಕುಸಿದು ಬಿದ್ದ, ಪಳನಿ, ಜಾನ್ಸನ್‌ನನ್ನು ಸೆರೆ ಹಿಡಿದೆವು. ಅರುಣ್ ಮತ್ತು ಗೌಡ ಪರಾರಿಯಾದರು. ಗಾಳಿ ಬೀಡು ಆಂಟಿ ಮನೆಗೆ ಹೋಗಿದ್ದ ಇಬ್ಬರು ವಿಟ ಪುರುಷರನ್ನು ಆರೋಪಿಗಳು ಬಲವಂತವಾಗಿ ಎಳೆದುಕೊಂಡು ಬಂದು ಸುಲಿಗೆ ಮಾಡಲು ಹವಣಿಸಿದ್ದರು. ದುರದೃಷ್ಟವಶಾತ್ ಅವರಲೊಬ್ಬನಿಗೂ ನನ್ನ ಗುಂಡು ಬಿತ್ತು. ರಾತ್ರಿಯಿಡೀ ಕಾಡಿನಲ್ಲಿ ಕಳೆದಿದ್ದ ಉಳಿದಿಬ್ಬರು ಆರೋಪಿಗಳು, ಬೆಳಗಿನ ಜಾವ ‘ಉದಯ ಬಸ್’ ಹತ್ತಿದ್ದರು. ಅಷ್ಟರಲ್ಲಾಗಲೇ ಮಡಿಕೇರಿ ಪೊಲೀಸರು ನಾಕಾಬಂದಿ ಏರ್ಪಡಿಸಿ, ಎಲ್ಲ ಬಸ್ ಚಾಲಕರಿಗೆ ಸೂಚನೆ ಕೊಟ್ಟಿದ್ದರು. ಹಾಗಾಗಿ ಆ ಇಬ್ಬರನ್ನು ಬಸ್ ಚಾಲಕ ದಾಸಪ್ಪ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಅರ್ಜುನ್ ಬೋಪಯ್ಯ ಮತ್ತು ಆರ್.ಸಿ. ಚಂದ್ರಶೇಖರ್ ಬೆಂಗಳೂರಿನಲ್ಲೇ ಇದ್ದರು. ಅವರನನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದರು. ಹೀಗೆ, ಮೂರು ಕೊಲೆ ಮತ್ತು 20ಕ್ಕೂ ಹೆಚ್ಚು ದರೋಡೆ ಪ್ರಕರಣ ನಡೆಸಿ ರಾಜ್ಯ ರಾಜಧಾನಿಯಲ್ಲಿ ತಲ್ಲಣಗೊಳಿಸಿದ್ದ ಆರೋಪಿಗಳೆಲ್ಲ ಸೆರೆ ಸಿಕ್ಕರು.
ಈ ಕುರಿತು ಅಂದಿನ ಡಿಜಿ ನಿಜಾಮುದ್ದೀನ್ ಮತ್ತು ಪೊಲೀಸ್ ಕಮಿಷನರ್ ಶ್ರೀಧರನ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಂದಿನ ಗೃಹ ಸಚಿವ ಆರ್.ಎಲ್. ಜಾಲಪ್ಪ ಭಾಗವಹಿಸಿ ನಮ್ಮ ಬೆನ್ನು ತಟ್ಟಿದ್ದರು. ಈ ಘಟನೆಯಿಂದಾಗಿ ‘ಗಾಳಿಬೀಡು ಆಂಟಿ’ಯ ವ್ಯವಹಾರವೂ ನಿಂತು ಹೋಯಿತು. ಆಕೆಯ ಉಪಟಳದಿಂದ ಬೇಸತ್ತಿದ್ದ ಮಡಿಕೇರಿಯ ಜನರಂತೂ ದೊಡ್ಡ ಸಮಾರಂಭ ಏರ್ಪಡಿಸಿ ನನ್ನನ್ನು ಮೆರವಣಿಗೆ ಮಾಡಿ, ಸನ್ಮಾನಿಸಿದ್ದರು! ಆದರೆ ಈ ಕತೆ ಇಲ್ಲಿಗೇ ಮುಗಿಯಲಿಲ್ಲ.
ಅದು 1988ರ ಏಪ್ರಿಲ್ ತಿಂಗಳು, ಯಾವುದೋ ಕೇಸಿನ ಸಂಬಂಧ ನಾನು ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹೋಗಿದ್ದೆ ಸಾಕ್ಷಿ ಹೇಳಿ ಬರುತ್ತಿದ್ದಾಗ ಕೋರ್ಟ್ ಆವರಣದಲ್ಲಿ ಜನ ಗುಂಪುಗೂಡಿ ಆತಂಕಿತರಾಗಿದ್ದು ಕಾಣಿಸಿತು. ವಿಚಾರಿಸಿದಾಗ, ಮೂರು ಕೈದಿಗಳು ಎಸ್ಕೇಪ್ ಆದ್ರು ಸಾರ್ ಎಂದರು. ಸಂಬಂಧಿಕರು ಊಟದ ಜತೆ ಮಾವಿನಹಣ್ಣು ಕೊಯ್ಯಲು ತಂದಿದ್ದ ಚಾಕುವಿನಿಂದ ಪೊಲೀಸ್ ಪೇದೆಗೆ ಇರಿದು ಆರೋಪಿಗಳು ಕೈಕೋಳ ಸಮೇತ ಪರಾರಿಯಾಗಿದ್ದರು. ನಾನು ಬುಲೆಟ್ ಮೋಟಾರ್‌ಬೈಕ್ ಏರಿದೆ. ಚೇಸ್ ಮಾಡುವಾಗ ಸ್ವಲ್ಪ ಭಾರ ಇದ್ದರೆ ಒಳ್ಳೆಯದು ಎಂದು ಯಶವಂತ ಎಂಬ ಪೇದೆಯನ್ನು ಕೂರಿಸಿಕೊಂಡೆ. ಕೋರ್ಟ್‌ನ ಮುಂದಿನ ರಸ್ತೆಯಲ್ಲಿ ಗಾಬರಿಯಿಂದ ಜನರು ನಿಂತು ಆರೋಪಿಗಳು ಓಡಿ ಹೋಗುತ್ತಿದ್ದ ದಿಕ್ಕನ್ನು ಅನುಸರಿಸಿ ನಾನು… ಎಸ್‌ಜೆ ಪಾರ್ಕ್‌ನ ಥಿಯೇಟರ್‌ವೊಂದರ ಬಳಿ ವ್ಯಕ್ತಿಯೊಬ್ಬ ಓಡಿ ಹೋಗುತ್ತಿರುವುದು ಕಾಣಿಸಿತು.
ನಾನು ಬುಲೆಟ್ ನಿಲ್ಲಿಸಿ, ಆತನನ್ನು ಹಿಡಿಯಲು ಓಡಿದೆ. ಆತನ ಮುಖ ನೋಡಿ ದಂಗಾಗಿಬಿಟ್ಟೆ. ಆತ, ಆರು ತಿಂಗಳ ಹಿಂದೆ ನಾನೇ ಪ್ರಯಾಸದಿಂದ ಮಡಿಕೇರಿಯಲ್ಲಿ ಹಿಡಿದಿದ್ದ ಅರುಣ್! ನನ್ನ ಗುರುತು ಹಿಡಿದ ಆತ ‘ಯೂ ಬಾಸ್ಟರ್ಡ್ ಅಶೋಕ್‌ಕುಮಾರ್’ ಎನ್ನುತ್ತ ಚಾಕು ಬೀಸಿದ. ನಾನು ಆತನ ತೊಡೆಗೆ ಗುಂಡು ಹಾರಿಸಿದೆ. ಆಲ್ಲೇ ಕುಸಿದು ಬಿದ್ದ. ಇನ್ನೊಬ್ಬ ಆರೋಪಿ ಅರ್ಜುನ್ ಬೋಪಯ್ಯ ಚಲಿಸುತ್ತಿದ್ದ ಬಿಟಿಎಸ್ ಬಸ್ ಏರಲು ಹೋಗಿ ಜಾರಿ ಬಿದ್ದ. ಹಿಂದಿನ ಚಕ್ರ ಆತನ ತಲೆಯ ಮೇಲೆ ಏರಿ ಸತ್ತೇ ಹೋದ. ಮತ್ತೊಬ್ಬ ಆರೋಪಿ ಈರಪ್ಪ ಗೌಡನನ್ನು ಕೆಲ ದಿನಗಳ ಬಳಿಕ ಸೆರೆ ಹಿಡಿಯಲಾಯಿತು. ಬಳಿಕ ಆರೋಪಿಗಳೆಲ್ಲ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು.
Discussion about this post