ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಪ್ರಶ್ನೆ: ನನ್ನ ಹೆಸರು ಇಂದಿರಾ, ನಿವೃತ್ತ ಶಿಕ್ಷಕಿ. ಹಾಲಿ ಶಿವಮೊಗ್ಗ ನಗರದಲ್ಲಿ ನನ್ನ ವಾಸ. ನನಗೀಗ 62 ವರ್ಷ ವಯಸ್ಸು. ನನ್ನ ತವರು ಹಾವೇರಿ ಜಿಲ್ಲೆ. 2018ನೇ ಇಸವಿಯಲ್ಲಿ ನನ್ನ ತವರು ಮನೆಯ ಆಸ್ತಿ ವಿಭಜನೆಯಾಗಿದ್ದು, ನನಗೆ ಹಾಗು ನನ್ನ ಇಬ್ಬರು ಅಕ್ಕಂದಿರ ಪಾಲಿಗೆ ಒಂಬತ್ತು ಎಕರೆ ಕೃಷಿ ಜಮೀನು ಬಂದಿದೆ. ಈ ಜಮೀನು ನಮ್ಮ ಜಂಟಿ ಮಾಲೀಕತ್ವದಲ್ಲಿದ್ದು, ಈಗ ನಾವು ಇದನ್ನು ತಲಾ 3 ಎಕರೆಯಂತೆ ಹಂಚಿಕೊಳ್ಳಬೇಕೆಂದು ಒಮ್ಮತದಿಂದ ನಿಶ್ಚಯಿಸಿದ್ದೇವೆ. ವಯೋಸಹಜ ಅನಾರೋಗ್ಯದ ಕಾರಣದಿಂದ ಜಮೀನಿನ ವಿಭಾಗ ಪತ್ರದ ತಯಾರಿ, ನೋಂದಣಿ, ಜಮೀನಿನ ಮಾಪನ, ಹದ್ದುಬಸ್ತು, ಗಡಿ ಗುರುತಿಸುವಿಕೆ ಇತ್ಯಾದಿ ಕೆಲಸಗಳಿಗೆ ನಾವು ಸಂಬಂಧಪಟ್ಟ ಕಚೇರಿಗಳಿಗೆ ಓಡಾಡಲು ಸಾಧ್ಯವಿಲ್ಲ. ಈ ಕೆಲಸಗಳನ್ನು ನಿರ್ವಹಿಸಲು ನನ್ನ ಅಳಿಯನಿಗೆ ಪವರ್ ಆಫ್ ಅಟಾರ್ನಿ (GPA) ಕೊಡಬೇಕೆಂದು ನಾವು ಮೂವರು ತೀರ್ಮಾನಿಸಿದ್ದೇವೆ. GPA ಅಧಿಕಾರವನ್ನು ನಾವು ಮೂವರು ಒಂದೇ ಪತ್ರದಲ್ಲಿ ನೀಡಬಹುದೇ ಅಥವಾ ಪ್ರತ್ಯೇಕ ಪತ್ರಗಳನ್ನು ಬರೆಸಬೇಕೇ?
ಉತ್ತರ: GPA ಪತ್ರದ ಮೂಲಕ ನೀವು ನಿಮ್ಮ ನಂಬಿಕೆಗೆ ಪಾತ್ರನಾದ ವ್ಯಕ್ತಿಗೆ ಕಾನೂನು ವಿವಾದಗಳಲ್ಲಿ ನಿಮ್ಮನ್ನು ಪ್ರತಿನಿಧಿಸಲು, ನಿಮ್ಮ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳಲು ಹಾಗು ನಿಮ್ಮ ಸ್ಥಿರಾಸ್ಥಿಗಳ ಮೇಲ್ವಿಚಾರಣೆ ಮಾಡುವ ಅಧಿಕಾರ ನೀಡಬಹುದು. ಕಾನೂನಿನ ಪರಿಭಾಷೆಯಲ್ಲಿ ಹೀಗೆ ಅಧಿಕಾರ ನೀಡುವ ವ್ಯಕ್ತಿಯನ್ನು ಪ್ರಿನ್ಸಿಪಲ್ ಎಂದು ಹಾಗು ಅಧಿಕಾರ ಪಡೆದುಕೊಳ್ಳುವ ವ್ಯಕ್ತಿಯನ್ನು ಏಜೆಂಟ್ ಎಂದು ಕರೆಯಲಾಗುತ್ತದೆ. GPA ಪತ್ರದಲ್ಲಿ ನಮೂದಾಗಿರುವ ಷರತ್ತುಗಳಿಗೆ ಅನುಗುಣವಾಗಿಯೇ ಏಜೆಂಟ್ ಕಾರ್ಯನಿರ್ವಹಣೆ ಮಾಡಬೇಕು.
ಹಲವು ವ್ಯಕ್ತಿಗಳು ಅಂದರೆ ಪ್ರಿನ್ಸಿಪಲ್ ಗಳು ಒಂದೇ ಪತ್ರದಲ್ಲಿ ಒಬ್ಬ ಏಜೆಂಟಿಗೆ GPA ಅಧಿಕಾರ ನೀಡಲು ಸಾಧ್ಯ. ಅಂದರೆ ನೀವು ಹಾಗು ನಿಮ್ಮ ಇಬ್ಬರು ಅಕ್ಕಂದಿರು ಒಂದೇ ಪತ್ರದಲ್ಲಿ GPA ಅಧಿಕಾರ ನಿಮ್ಮ ಅಳಿಯನಿಗೆ ನೀಡಬಹುದು. ನಿಮ್ಮ ಸ್ವತ್ತಿನ ವಿವರ, ನೀವು ನೀಡಬೇಕೆಂದಿರುವ ಅಧಿಕಾರದ ಸ್ವರೂಪ ಹಾಗು ವ್ಯಾಪ್ತಿ ಇವುಗಳನ್ನು ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿ. ಸದರಿ GPA ಪತ್ರವನ್ನು ಶಾಸನಾತ್ಮಕ ಶುಲ್ಕ ನೀಡಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಿ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post