ಇತ್ತೀಚೆಗೆ ಜಪಾನ್ ದೇಶದ ವಿಡಿಯೋ ಒಂದನ್ನು ನೋಡ್ತಾ ಇದ್ದೆ. ಅದರಲ್ಲಿ ಅತಿ ಚಿಕ್ಕ ವಯಸ್ಸಿನ ಮಕ್ಕಳು ಕೂಡ ತಮ್ಮ ತಂದೆ ತಾಯಿಗಳ ಜೊತೆಯಲ್ಲಿ ಅವರು ಮಾಡ್ತಾ ಇದ್ದ ಎಲ್ಲ ರೀತಿಯ ಕೆಲಸಗಳಲ್ಲೂ ಕೂಡ ಕೈ ಜೋಡಿಸುತ್ತಿದ್ದರು. ಅದನ್ನು ನೋಡಿದವರು ಯಾರು ಬೇಕಾದರೂ ಹೇಳಬಹುದು, ಈ ಮಕ್ಕಳಿಗೆ ಗೊತ್ತಿಲ್ಲದ ಕೆಲಸವೇ ಇಲ್ಲವೆಂದು. ಜಪಾನೀಯರು ಶ್ರಮ ಜೀವಿಗಳು ಹಾಗೇ ತಮ್ಮ ಮಕ್ಕಳಿಗೂ ಕಷ್ಟ ಪಟ್ಟು ದುಡಿಯುವುದನ್ನು, ಅವರ ಕೆಲಸವನ್ನು ಅವರೇ ಮಾಡಿಕೊಳ್ಳುವುದನ್ನು ಕಲಿಸುತ್ತಾರೆ ಎನ್ನುವ ನಾವು, ಸರ್ವಾಂಗೀಣ ಶಿಕ್ಷಣದ ವಿಷಯದಲ್ಲಿ ನಮ್ಮ ಹಿರಿಯರು ತೋರಿಸುತ್ತಿದ್ದ ಕಾಳಜಿಯನ್ನು, ನೀಡುತ್ತಿದ್ದ ಮಹತ್ವವನ್ನು, ನಮ್ಮ ಬಾಲ್ಯದ ದಿನಗಳಲ್ಲಿ ನಾವು ಮಾಡುತ್ತಿದ ಕೆಲಸಗಳನ್ನು ಇಷ್ಟು ಬೇಗ ಮರೆತರೆ ಹೇಗೆ ಅಲ್ಲವೇ? ಈಗ ಅದನ್ನೆಲ್ಲ ನಮ್ಮ ಮಕ್ಕಳಿಗೆ ಎಷ್ಟರ ಮಟ್ಟಿಗೆ ಕಲಿಸುತ್ತಿದ್ದೇವೆ ಅಥವಾ ನಾವು ಕಲಿಸಿದ್ದನ್ನು ಅವರೆಷ್ಟು ಕಲಿಯುತ್ತಿದ್ದಾರೆ ಎನ್ನುವುದರ ಬಗ್ಗೆ ಯೋಚನೆ ಮಾಡಿದ್ರೆ ಅಲ್ಲಿ ಒಂದಿಷ್ಟು ಸೋಲು ಕಾಣಿಸಬಹುದು. ಒಮ್ಮೆ ನಮ್ಮದೇ ಜೀವನದ ಪುಟಗಳನ್ನು ತಿರುವಿ ಹಾಕಿದರೆ ಒಂದಿಷ್ಟು ನೆನಪಾಗಬಹುದೇ?
ಅವರವರ ಕೆಲಸವನ್ನು ಅವರವರು ಮಾಡಿಕೊಳ್ಳಬೇಕು ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ಬಹು ದೊಡ್ಡ ಪಾಠ, ಊಟ ಮಾಡಿದ ತಟ್ಟೆ ಲೋಟ ತೊಳೆಯುವುದು, ನಮ್ಮ ಬಟ್ಟೆ ನಾವೇ ಒಗೆದುಕೊಳ್ಳುವುದು, ನಮ್ಮ ವಸ್ತುಗಳನ್ನು ಜೋಪಾನ ಮಾಡಿ ಇಟ್ಟುಕೊಳ್ಳುವುದು, ಶಾಲೆ ಮನೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಇತ್ಯಾದಿ. ಆದ್ರೆ ಇತ್ತೀಚೆಗೆ ತಟ್ಟೆ ಲೋಟ ತೊಳೆಯುವುದರಿಂದ ಹಿಡಿದು ಮಕ್ಕಳ ಸ್ಕೂಲ್ ಬ್ಯಾಗ್ ರೆಡಿ ಮಾಡಿಕೊಡುವುದು, ಪುಸ್ತಕಗಳನ್ನು ಜೋಡಿಸಿಕೊಡುವುದು, ಕಂಡ ಕಂಡಲ್ಲಿ ಬಿಸಾಡುವ ಅವರ ವಸ್ತುಗಳನ್ನು ಹೆಕ್ಕಿ ಇಡುವುದು. ಕೊನೆಗೆ ಕೈ ತುಂಬಾ ನೋಯ್ತಾ ಇದೆ ಹೋಂ ವರ್ಕ್ ಮಾಡಿಕೊಡಮ್ಮ ಅಥವಾ ಮಾಡಿಕೊಡಿ ಅಪ್ಪಾ ಅಂತ ಹೇಳಿದಾಗ ಅಯ್ಯೋ ಪಾಪ ಮಗೂಗೆ ಕಷ್ಟ ಆಗುತ್ತೆ ಅಂತ ಹೇಳಿ, ಅದನ್ನು ಕೂಡ ಮಾಡಿಕೊಡುವುದು ತಮಾಷೆ ಅನಿಸಿದರೂ ಸತ್ಯ.
ಮೊದಲೆಲ್ಲ ನಮ್ಮ ಹಿರಿಯರು ತಾವು ಮಾಡುವ ಕೆಲಸಗಳಲ್ಲಿ, ನಮ್ಮನ್ನು ಕೂಡ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ಆಗೆಲ್ಲ ಬೆಳಿಗ್ಗೆ ಎದ್ದ ತಕ್ಷಣ ಬಾವಿಯಿಂದ ಒಂದು ಕೊಡಪಾನ ನೀರು ತಂದು ಇಡೋದು, ಪೂಜೆಗೆ ಹೂವು ರೆಡಿ ಮಾಡಿಕೊಡೋದು, ಅಂಗಳ ಗುಡಿಸೋದು, ನೆಲ ಗುಡಿಸೋದು, ಒರೆಸುವುದು, ಪಾತ್ರೆ ತೊಳೆಯೋದು, ಕಾಯಿ ತುರಿಯೋದು, ಕಲ್ಲಿನಲ್ಲಿ ರುಬ್ಬುವುದು, ಇದೆಲ್ಲ ಏಳು ಎಂಟನೆಯ ವಯಸ್ಸಿನಿಂದಲೇ ಮಾಡಲು ಹೇಳುತ್ತಿದ್ದ ಕೆಲಸಗಳಾಗಿದ್ದವು.
ಇನ್ನು ಕೃಷಿ ಪ್ರಧಾನ ಕುಟುಂಬಗಳಲ್ಲಿ ಗುಡ್ಡಕ್ಕೆ ಮೇಯಲು ಹೋಗುವ ದನ ಕರುಗಳನ್ನು ಕೊಟ್ಟಿಗೆಗೆ ಸೇರಿಸಿ ಕಟ್ಟುವ, ಅವುಗಳಿಗೆ ಕುಡಿಯಲು ನೀರು ಕೊಡುವ ಕೆಲಸ, ಕೊಯ್ಲಿನ ಸಮಯದಲ್ಲಿ ಗದ್ದೆಯಲ್ಲಿ ಬಿದ್ದ ಕದಿರು ಹೆಕ್ಕುವ ಕೆಲಸ, ತೋಟಕ್ಕೆ ನೀರು ಬಿಡುವ ಕೆಲಸ, ಗೇರು ಬೀಜ ಹೆಕ್ಕುವ ಕೆಲಸ ಈ ಕೆಲಸಗಳು ಮಕ್ಕಳನ್ನು ಕಲಿಕೆಯ ಜೊತೆಗೆ ಪರಿಸರದ ಮಡಿಲಲ್ಲಿ ಬೆಳೆಸುತ್ತ ಪರಿಸರ ಪ್ರೀತಿಯನ್ನು ಕಾಳಜಿ, ಪ್ರಾಣಿ ಪ್ರೀತಿಯನ್ನು ತಂತಾನೇ ಬೆಳೆಸುವ ಕೆಲಸ ಮಾಡುತ್ತಿತ್ತು. ಆಗೆಲ್ಲ ತಂದೆ ತಾಯಿ, ಮನೆಯವರು, ಯಾವತ್ತೂ ತಮ್ಮ ಮಕ್ಕಳಿಗೆ ಈ ಕೆಲಸ ಮಾಡುವುದರಿಂದ ಕಷ್ಟ ಆಗುತ್ತೆ ಅಂತ ಅಂದುಕೋತಾನೆ ಇರ್ಲಿಲ್ಲ. ಇದರಿಂದ ಜೀವನಾನುಭವ, ಕಲಿಕೆ ಅಲ್ಲಿಂದಾನೆ ಶುರು ಆಗ್ತಾ ಇತ್ತು, ಮನೆಯ ಕೆಲಸಗಳು, ಸ್ವಚ್ಛತೆ, ಶಿಸ್ತು, ಇನ್ನೊಬ್ಬರ ಕಷ್ಟ, ಸ್ವಾವಲಂಬನೆಯ ಜೀವನ, ದುಡಿಮೆಯ ಮಹತ್ವ, ಕಷ್ಟ, ಶ್ರಮ ಇದೆಲ್ಲವೂ ಅರ್ಥ ಆಗ್ತಾ ಇತ್ತು. ಮಕ್ಕಳು ಬೆಳೆದು ದೊಡ್ಡವರಾಗುವಾಗ ಈ ಎಲ್ಲಾ ಕೆಲಸಗಳು ಯಾವತ್ತೂ ಕೂಡ ಅವರಿಗೆ ಹೊರೆ ಅನಿಸ್ತಾ ಇರಲಿಲ್ಲ. ಹಾಗೆ ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರ ನಡುವಿನ ಬಾಂಧವ್ಯ ಕೂಡ ತುಂಬಾ ಉತ್ತಮವಾಗಿರುತ್ತಿತ್ತು. ಹೇಗೆ ಗೊತ್ತಾ? ಒಂದು ಕೆಲಸ ಮಾಡುವಾಗ ಮಗುವಿಗೆ ಈ ಕೆಲಸ ಮಾಡಿದರೆ ನಿಂಗೆ ಇವತ್ತು ತಿಂಡಿ ಮಾಡಿ ಕೊಡ್ತೇನೆ ಇಲ್ಲ, ಒಂದು ರೂಪಾಯಿ ಕೊಡ್ತೇನೆ, ನಾಕಾಣೆ ಕೊಡ್ತೇನೆ, ಟೆಂಟ್ ಅಲ್ಲಿ ಮೂವಿ ತೋರಿಸ್ತೇನೆ, ಇವತ್ತು ನಿನ್ನ ನಾಟಕಕ್ಕೆ ಕರೆದುಕೊಂಡು ಹೋಗ್ತೇನೆ. ಜಾತ್ರೇಲಿ ತೊಟ್ಟಿಲಲ್ಲಿ ಕೂರಿಸ್ತೇನೆ, ಹೀಗೆ ಏನಾದರೊಂದು ಆಸೆ ತೋರಿಸ್ತಾ ಇದ್ರು. ನಂತರ ಹೇಳಿದಂತೆ ನಡೆದುಕೊಂಡು ಮಕ್ಕಳ ಮನಸ್ಸನ್ನು, ನಂಬಿಕೆಯನ್ನು ಗೆಲ್ತಾ ಇದ್ರು, ಅವರನ್ನು ಇನ್ನಷ್ಟು ಕೆಲಸ ಮಾಡುವಂತೆ ಹುರಿದುಂಬಿಸ್ತಾ ಇದ್ರು.
ಆದ್ರೆ ಅಂದಿನ ದಿನಗಳಲ್ಲಿ ಹೀಗೆ ಎಲ್ಲವನ್ನು ಕಲಿಯುತ್ತಲೇ ಬೆಳೆದು ಉತ್ತಮ ಬದುಕು ರೂಪಿಸಿಕೊಂಡ ಅಪ್ಪ ಅಮ್ಮ, ಇಂದು ತಮ್ಮ ಮಕ್ಕಳಿಗೆ ಆ ರೀತಿಯ ಕಲಿಕೆಗೆ ಅವಕಾಶವನ್ನೇ ಕೊಡ್ತಾ ಇಲ್ಲ. ಬದಲಿಗೆ ಅವರ ಬಾಯಿಯಲ್ಲಿ ಬರುವ ಮಾತು ನಾವು ಕಷ್ಟ ಪಟ್ಟ ಹಾಗೆ ನಮ್ಮ ಮಕ್ಕಳು ಕಷ್ಟ ಪಡಬಾರ್ದು ಅವರಿಗೇನು ಕೊರತೆ ಆಗ್ಬಾರ್ದು ಅನ್ನೋದು. ಇದು ಇವತ್ತು ಅವರವರ ಕೆಲಸ ಅವರವರು ಮಾಡಿಕೊಳ್ಳದೆ ಇರುವಷ್ಟರ ಮಟ್ಟಿಗೆ ಹೋಗಿ ಮಕ್ಕಳಿಗೆ ಅಪ್ಪ ಅಮ್ಮನ ದೈಹಿಕ ಶ್ರಮ ಅರ್ಥ ಆಗದ ಲೆವೆಲ್’ಗೆ ಹೋಗಿದೆ. ಮನೆ ಕೆಲಸ ಇರಲಿ ಎಷ್ಟೋ ಮನೆಗಳಲ್ಲಿ ಅಮ್ಮಂದಿರು, ಆಫೀಸ್ ಕೆಲಸ, ಮನೆ ಕೆಲಸದ ಜೊತೆ ಜೊತೆಗೆ ಬೆಳೆದ ಮಕ್ಕಳ ಕೆಲಸಗಳನ್ನು ಸಹ ಮಾಡಬೇಕಾದ ಪರಿಸ್ಥಿತಿ. ಅಮ್ಮ ನನ್ನ ಶರ್ಟ್ ಎಲ್ಲಿ ಪ್ಯಾಂಟ್ ಎಲ್ಲಿ? ಇವತ್ತು ಕೂಡ ದೋಸೆನಾ ನನಗೆ ಬೇಡ, ಎಷ್ಟು ಸಲ ಹೇಳಿದ್ದೀನಿ ನಿನಗೆ ಅಂತೆಲ್ಲ ಜೋರು ಧ್ವನಿಯಲ್ಲಿ ಆವಾಜ್ ಹಾಕಿದ್ರೂನು ಅಮ್ಮ, ಅಪ್ಪ ಬೇಜಾರು ಮಾಡ್ಕೊಳ್ಳೋದೇ ಇಲ್ವೋ ಅಥವಾ ಅವರಿಂದ ಏನು ಮಾಡದ ಪರಿಸ್ಥಿತಿಯನ್ನು ಅವರೇ ಆಹ್ವಾನ ಮಾಡಿರುತ್ತಾರೋ ಗೊತ್ತಿಲ್ಲ.
ಇನ್ನೊಂದು ವಿಷಾದನೀಯ ಸಂಗತಿ ಅಂದ್ರೆ ಹಣಕಾಸಿನ ವಿಚಾರ, ಹೆಚ್ಚಿನ ತಂದೆ ತಾಯಿ ಹೇಳುವ ಮಾತು, ನಾವು ಓದುವಾಗ ನಮಗೆ ಹಣದ ಅವಶ್ಯಕೆತೆ ಇತ್ತು ಆದ್ರೆ ನಮ್ಮ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ, ಈಗ ನಮಗೆ ಬೇಕಾಗುವಷ್ಟು ದೇವರು ಕೊಟ್ಟಿದ್ದಾನೆ, ನಾವು ಅಂದು ಹಣಕಾಸಿನ ವಿಷ್ಯದಲ್ಲಿ ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬರಬಾರದು ಎನ್ನುವುದು. ಖಂಡಿತ ಇದರಲ್ಲಿ ತಪ್ಪಿಲ್ಲ ಆದರೆ ಈ ತುಡಿತ, ತಾವು ಕಳೆದು ಕೊಂಡಿದ್ದರ ಬಗೆಗಿನ ನೋವು, ಮಕ್ಕಳು ಕೇಳಿದಾಗಲೆಲ್ಲ ಎಷ್ಟೇ ಕಷ್ಟ ಆದರೂ ಹಣ ಒಟ್ಟು ಮಾಡಿಕೊಡುವ, ಅವರ ಅಗತ್ಯಗಳನ್ನು ಎಷ್ಟೇ ಕಷ್ಟ ಆದರೂ ಪೂರೈಸುವ ಸ್ಥಿತಿಗೆ ತಂದು ನಿಲ್ಲಿಸಿಬಿಟ್ಟಿದೆ.
ಹೀಗಾಗಿ, ಇವತ್ತು ಎಷ್ಟೋ ಮಕ್ಕಳು ಅಪ್ಪ ಅಮ್ಮನನ್ನು ಪ್ರೀತಿಸಿ ಗೌರವಿಸುವುದರ ಬದಲು ಅವರನ್ನು ಕೇವಲ ಹಣ ತರುವ ಯಂತ್ರಗಳು ಎಂದು ತಿಳಿದುಕೊಂಡಿರೋದು ವಿಪರ್ಯಾಸವೇ ಸರಿ. ಕೇಳಿದಾಗಲೆಲ್ಲ ಸಿಗುವ ಹಣದ ಬೆಲೆ ದುಡಿಯುವ ಕಷ್ಟ ಗೊತ್ತಾಗೋದಾದರೂ ಹೇಗೆ. ಅಂದೆಲ್ಲ ಹಿರಿಯರು ಹಣ ಆಕಾಶದಿಂದ ಉದುರುತ್ತಾ? ಒಂದು ರೂಪಾಯಿ ದುಡಿದರೆ ಅದರ ಬೆಲೆ ಗೊತ್ತಾಗ್ತಾ ಇತ್ತು ಅನ್ನುವ ಮಾತುಗಳು ಕಿವಿಗೆ ಅಪ್ಪಳಿಸಿದಾಗ, ನಿಜವಾಗಲೂ ಹಣದ ಬೆಲೆ ಗೊತ್ತಾಗ್ತಾ ಇತ್ತು. ಆದರೆ ಈಗ ಕಾಲ ಮಿಂಚಿದ ಮೇಲೆ ಅನಿಸುವುದುಂಟು, ನಿಜವಾಗಲೂ ಮಕ್ಕಳಿಗೆ ಹಣದ ಬೆಲೆ, ಶ್ರಮದ ಬಗ್ಗೆ ಹೇಳಬೇಕಾಗಿತ್ತು. ಈಗೀಗ ಅವರ ಬೇಡಿಕೆಗಳನ್ನು ಪೂರೈಸಲು ನಮ್ಮಿಂದ ಆಗ್ತಾನೆ ಇಲ್ಲ, ಎನ್ನುವ ಮಾತುಗಳು ಮನಸ್ಸಿನಲ್ಲಿ ಮೂಡಿದಾಗ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ನಿಂತ ಹಾಗಾಗಿ ಜೀವನವೇ ಕುಸಿದಂತ ಅನುಭವ ಆಗಬಹುದು. ದಿನ ಬೆಳಗಾದರೆ ಕೆಲ ಮನೆಗಳಲ್ಲಿ ಈ ವಿಷಯಗಳಲ್ಲೇ ಆಗುವ, ಜಗಳ ಕದನ, ಅಶಾಂತಿ ತುಂಬಿದ ವಾತಾವರಣದಲ್ಲಿ ಬಾಂಧವ್ಯದ ಮಿಡಿತ, ತುಡಿತ, ಭಾವನಾತ್ಮಕತೆ ಮೊದಲಾದವುಗಳಿಗೆ ಜಾಗವೇ ಇರದೇ ಹೋದರೆ ಇದು ಕೌಟುಂಬಿಕ ಮೌಲ್ಯಗಳಿಗೆ ಬೀಳುವ ಹೊಡೆತವಲ್ಲವೇ?
ಆದರೆ ಹೀಗೆ ಮಕ್ಕಳನ್ನು ಸಾಕುವುದರಿಂದ ಯಾರಿಗೇನು ನಷ್ಟ, ತಂದೆ ತಾಯಿಗಳ ಇಷ್ಟ ಅವರು ಸಾಕ್ತಾರೆ, ಕೇಳಿದ್ದು ಕೊಡಿಸ್ತಾರೆ, ಅದರಿಂದ ಏನಾಗುತ್ತೆ ಅನಿಸಬಹುದು.
ಆದರೆ ಇದು ಅಷ್ಟಕ್ಕೇ ಮುಗಿಯುವುದಿಲ್ಲ. ನಿಜವಾದ ಜೀವನದ ಸಂಕಷ್ಟಗಳು ಎದುರಾಗೋದು ಓದು ಮುಗಿಸಿ ವೃತ್ತಿಜೀವನ ಶುರು ಮಾಡಿದ ಮೇಲೆನೇ, ಆಗ ನಿರೀಕ್ಷಿಸಿದ ಕೆಲಸ ಸಿಗದೇ ಹೋದಾಗ, ಬೇರೆ ಬೇರೆ ಕಾರಣಗಳಿಂದ ಆರ್ಥಿಕ ಸಧ್ರಡತೆ ಸಾಧ್ಯವಾಗದೆ ಇದ್ದಲ್ಲಿ, ಹೊಸದಾಗಿ ಶುರು ಮಾಡಿದ ವ್ಯವಹಾರ ಕೈಗೂಡದೆ ಇದ್ದಲ್ಲಿ, ತಂದೆ ತಾಯಿ ನೀಡಿದ ಲಕ್ಸುರಿ ಲೈಫ್ ನಡೆಸಲು ಆಗದೆ, ಅದಿಲ್ಲದೆ ಬದುಕುವ ಬಗೆಯೇ ಗೊತ್ತಿಲ್ಲದೇ ಹೋದಾಗ, ಕಷ್ಟವೇ ಆಗದಂತೆ, ಇರುವುದರಲ್ಲೇ ಖುಷಿ ಖುಷಿಯಾಗಿ ಜೀವನ ನಡೆಸೋದಕ್ಕೆ ಎಷ್ಟು ಜನರಿಂದ ಸಾಧ್ಯ ಆಗಬಹುದು?? ನಮ್ಮ ಜೀವನದಲ್ಲಿ, ಹಾಗೆಲ್ಲ ಆಗೋದೇ ಇಲ್ಲ ಅನ್ನೋಕೆ, ಏರಿಳಿತಗಳಿಲ್ಲದ ಜೀವನ ಯಾರದ್ದೂ ಕೂಡ ಅಲ್ಲ ಅಲ್ಲವೇ?
ಇತ್ತೀಚೆಗೆ ಕೆಲವು ಕಂಪೆನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಶ್ರಮವಹಿಸಿ ದುಡಿಯುವವರ ಸಂಖ್ಯೆ ಹಾಗೆ ಸವಾಲುಗಳನ್ನು ಎದುರಿಸುವವವರು ಎಲ್ಲವನ್ನು ಸಹಿಸಿಕೊಂಡು ತಾಳ್ಮೆಯಿಂದ ಬಹಳ ಸಮಯದ ತನಕ ಗಟ್ಟಿಯಾಗಿ ನಿಂತು ಉನ್ನತ ಸ್ಥಾನಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿದೆಯಂತೆ ಇದಕ್ಕೆ ಕಾರಣ, ಇತ್ತೀಚಿನವರಲ್ಲಿ ಕಂಡುಬರುತ್ತಿರುವ ಸೋಮಾರಿತನ, ಸಹನೆಯ ತಾಳ್ಮೆಯ ಕೊರತೆ, ಕಷ್ಟ ಪಡಲು ತಯಾರಿಲ್ಲದೆ ಇರುವುದು, ಎಲ್ಲವೂ ಸುಲಭವಾಗಿ ಸಿಗಬೇಕು ಅನ್ನುವ ಭಾವನೆ, ಇದೆಲ್ಲ ಅವರ ಪ್ರಗತಿಗೆ ಅಡ್ಡಿಪಡಿಸುತ್ತಿದೆ. ಇದಕ್ಕೆ ಕಾರಣ ಇಂದಿನ ಶಿಕ್ಷಣ ಪದ್ಧತಿ ಹಾಗೆ ಕೌಟುಂಬಿಕ ಮೌಲ್ಯಗಳು ಎಂದು ಅಂದಾಜಿಸಲಾಗಿದೆಯಂತೆ, ಹಾಗಾದರೆ ಈ ಪರಿಸ್ಥಿತಿಗಳಿಗೆಲ್ಲ ಮಕ್ಕಳು ರೆಡಿ ಆಗದೆ ಇದ್ದರೆ, ಅವರ ಬದುಕು ದಿಕ್ಕುತಪ್ಪುವುದು ಎಂದಾದರೆ ನಮ್ಮ ದೈನಂದಿನ ಜೀವನದಲ್ಲಿ ಒಂದಿಷ್ಟು ಬದಲಾವಣೆ ಯಾಕೆ ಮಾಡಿಕೊಳ್ಳಬಾರದು?
ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಯಾಗುವುದು, ಶಾಲೆಯ ಶಿಕ್ಷಣದ ಜೊತೆ ಜೀವನ ಮೌಲ್ಯಗಳ ಕಲಿಕೆಯಿಂದ, ಕೌಟುಂಬಿಕ ಮೌಲ್ಯಗಳ ಅರಿವಿನಿಂದ, ಮನೆಯಲ್ಲಿ ತನ್ನ ಸಹೋದರ ಸಹೋದರಿಯ ಜೊತೆ ಹಂಚಿಕೊಂಡು ಅಥವಾ ಹೊಂದಿಕೊಂಡು ಬಾಳದ ಮಗು ತಾನು ಕೆಲಸ ಮಾಡುವ ಕಡೆ ಆ ರೀತಿ ಸ್ನೇಹದಿಂದ ಇರೋದಕ್ಕೆ ಸಾಧ್ಯಾನಾ ಅನ್ನೋದು ಕೆಲವರ ಪ್ರಶ್ನೆ, ಗುರು ಹಿರಿಯರನ್ನು ಗೌರವಿಸಿದ ಮಗು ತನ್ನ ಮೇಲಾಧಿಕಾರಿಯ ಜೊತೆ ಹೇಗೆ ನಡೆದುಕೊಂಡೀತು? ಪರಿಸರದ, ಮರ ಗಿಡಡಾ ಮಹತ್ವ ಅರಿಯದ ಅದರೊಡನೆ ಎಂದೂ ಸಂಭಾಷಿಸದ ಮಗು ಮುಂದೆ ತನಗಾಗಿ ಸ್ವಚ್ಛ ಸುಂದರ ಪರಿಸರದ ನಿರ್ಮಾಣಕ್ಕಾಗಿ ಅಥವಾ ಅದನ್ನು ನಾಶ ಮಾಡುವ ಶಕ್ತಿಗಳ ವಿರುದ್ಧ ಹೋರಾಟ ಮಾಡೀತು? ಸೋಲುವುದನ್ನು ಅರಿಯದ ಮಗು ಅಕಸ್ಮಾತ್ ಕೆಲಸ ಕಳೆದುಕೊಂಡರೆ, ವ್ಯವಹಾರದಲ್ಲಿ ನಷ್ಟ ಆದರೆ ಅದನ್ನು ಹೇಗೆ ಸಹಜವಾಗಿ ಸ್ವೀಕಾರ ಮಾಡೋದಕ್ಕೆ ಸಾಧ್ಯ? ಅನವಶ್ಯಕವಾಗಿ ತಂದೆ ತಾಯಿಯ ಹಣ ಖರ್ಚು ಮಾಡಿಕೊಂಡಿದ್ದ ಮಗುವಿಗೆ, ಒಮ್ಮೆಲೇ ಆ ಹಣ ಬರುವುದು ನಿಂತರೆ, ಅದನ್ನು ಸಹಿಸಿಕೊಳ್ಳುವ ಮತ್ತೆ ನಾನು ದುಡಿದು ಸಂಪಾದನೆ ಮಾಡ್ತೀನಿ, ಇವತ್ತು ಸೋತಿರಬಹುದು ಆದರೆ ನಾಳೆಯಿಂದ ಗೆದ್ದೇ ಗೇಳ್ತೀನಿ ಅನ್ನುವ ಆತ್ಮ ಶಕ್ತಿಯಿಂದ ಮುನ್ನುಗ್ಗೋಕೆ ಸಾಧ್ಯಾನಾ? ಒಂದು ಹೊತ್ತಿನ ಊಟಕ್ಕಿಲ್ಲದ ಅಥವಾ ಮೂಲಭೂತ ಸೌಕರ್ಯಗಳನ್ನು ಪಡೆಯದಷ್ಟು ಕಷ್ಟ ಬಂದರೆ ನಾನು ಹೇಗಾದರೂ ಮಾಡಿ ಬದುಕಬಲ್ಲೆ ಎನ್ನುವ ಆತ್ಮವಿಶ್ವಾಸ ಎಷ್ಟು ಜನರಿಗಿದೆ? ನಮ್ಮ ಶಿಕ್ಷಣ ವ್ಯವಸ್ಥೆ ಇದಕ್ಕೆ ಬೇಕಾದ ಧೈರ್ಯ, ಛಲ, ಸೋತರೂ ಮುನ್ನುಗ್ಗುವಷ್ಟು ಆತ್ಮವಿಶ್ವಾಸ ತುಂಬಿಸಿಕೊಡುವಷ್ಟು ಶಕ್ತವಾಗಿದೆಯಾ? ಖಂಡಿತಾ ಇಲ್ಲ, ಇದೆಲ್ಲವೂ ಜೀವನದಲ್ಲಿ ಅಗತ್ಯವಾಗಿ ಬೇಕಾಗುವ ಶಿಕ್ಷಣ. ಇದನ್ನು ತಂದೆ ತಾಯಿ ಕೊಡದೆ ಹೋದರೆ ಲಕ್ಷ ಕೋಟಿಗಳಲ್ಲಿ ಸಂಪಾದಿಸಿದರೂ ಕೊನೆಗೆ ಜೀವನದಲ್ಲಿ ಬರೀ ಸೊನ್ನೆಯಾಗಿ ಉಳಿಯಬಹುದು. ಹಾಗಾಗಬಾರದು ಎಂದಾದರೆ ನಾವು ಬದುಕಿದಂತೆ ನಮ್ಮ ಹಿರಿಯರು ನಮ್ಮನ್ನು ಬೆಳೆಸಿದಂತೆ ಮುಂದಿನ ಜನಾಂಗವನ್ನು ತಯಾರು ಮಾಡಬೇಕಾಗಿದೆ.
ಹಣ ಕೊಡುವ ಮುನ್ನ ಹಣದ ಮಹತ್ವ, ಶ್ರಮದ ದುಡಿಮೆಯ ಬಗ್ಗೆ ಹೇಳಿಕೊಟ್ಟು, ಸೋಲು, ಕಷ್ಟ, ಅವಮಾನ, ಹೋರಾಟ, ಸವಾಲುಗಳು ಬಂದಾಗಲೆಲ್ಲ ಅದನ್ನು ತಾವು ಎದುರಿಸಿದ ಬಗೆಯನ್ನು ಸೂಕ್ಷ್ಮವಾಗಿ ಹೇಳುತ್ತಾ, ತಮ್ಮ ಇಂದಿನ ಸುಖದ ಜೀವನದ ಹಿಂದೆ ನಮ್ಮ ಶ್ರಮ ಎಷ್ಟಿದೆ, ಅನ್ನುವುದರ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಎಷ್ಟು ಒಳ್ಳೆಯ ಬದಲಾವಣೆ ಆಗಬಹುದು?, ಇನ್ನು ಅವರವ ಕೆಲಸ ಅವರವರು ಮಾಡಿಕೊಳ್ಳುವುದು ಕಲಿತಾಗ ಮುಂದೆ ಜೀವನದಲ್ಲಿ ಅದ್ಯಾವುದು ಹೊರೆ ಅನಿಸೋದೇ ಇಲ್ಲ. ಅಡುಗೆಯಿಂದ ಹಿಡಿದು, ಮನೆಯನ್ನು ಸ್ವಚ್ಚ ಮಾಡುವ ಚಿಕ್ಕ ಪುಟ್ಟ ಕೆಲಸಗಳು ಕೂಡ ಮುಂದಿನ ಶಿಸ್ತಿನ ಜೀವನಕ್ಕೆ, ಒಳ್ಳೆಯ ಬುನಾದಿ ಹಾಕಿ ಕೊಡುತ್ತವೆ. ಅವರದ್ದೇ ಅಂತ ಒಂದು ಪುಟ್ಟ ಗೂಡು ಸಂಸಾರ ಮಕ್ಕಳು ಅಂತ ಬಂದಾಗ ಹೀಗೆ ಕಲಿತ ವಿಷಯಗಳು ಅವರ ಮುಂದಿನ ಬದುಕಿಗೆ ಖಂಡಿತಾ ನೆರವಾಗುತ್ತವೆ.
ತಂದೆ ತಾಯಿಗಳು ತಾವು ಮಾಡುವ ಪ್ರತೀ ಕೆಲಸಗಳಲ್ಲೂ ಕೂಡ ಮಕ್ಕಳನ್ನು ತೊಡಗಿಸಿಕೊಳ್ಳೋದು, ರಜಾ ದಿನಗಳಲ್ಲಿ ಮಕ್ಕಳನ್ನು ಕಾಡು ಬೆಟ್ಟ ನದಿ ಇರುವ ಸ್ಥಳಗಳಿಗೆ ಕರೆದುಕೊಂಡು ಹೋಗುವುದು. ಬಡತನ ನೋವು ಅಂದರೆ ಏನು ಅನ್ನುವುದರ ಅರ್ಥ ಮಾಡಿಸುವ ಪ್ರಯತ್ನ ಮಾಡುವುದು, ಎಲ್ಲದಕ್ಕಿಂತ ಯಶಸ್ಸು ಅಂದರೆ ಹಣ, ಹೆಸರು, ಆಸ್ತಿ ಅಲ್ಲ, ನಮ್ಮಿಂದಾಗುವ ನೆರವನ್ನು ಇನ್ನೊಬ್ಬರಿಗೆ ನೀಡುವುದು, ಸಾಧ್ಯವಾದರೆ ನಮ್ಮಿಂದ ಒಂದಿಷ್ಟು ಜನ ಬದುಕು ಕಟ್ಟಿಕೊಳ್ಳುವ ಹಾಗೆ ಮಾಡುವುದು. ಆಗ್ಲೇ ಜೀವನ ಸಾರ್ಥಕ ಎನ್ನುವುದನ್ನು ಮಕ್ಕಳಿಗೆ ಅರ್ಥ ಮಾಡಿಸುವ ಒಂದಿಷ್ಟು ಪ್ರಯತ್ನ ಮಾಡಿದರೂ ಸಾಕು, ಮಕ್ಕಳನ್ನು ಹೆತ್ತರೆ ಸಾಲದು ಅವರಿಗೆ ಬದುಕುವ ಕಲೆ ಕಲಿಸಬೇಕು ಆಗ ಮಾತ್ರ ಹೆತ್ತಿದ್ದಕ್ಕೂ ಸಾರ್ಥಕ ಎನ್ನುವ ಮಾತಿನಂತೆ ನಡೆದುಕೊಂಡಿದ್ದೇವೆ ಎನ್ನುವ ಸಮಾಧಾನವಂತೂ ಮನಸ್ಸಲ್ಲಿ ಇದ್ದೆ ಇರುತ್ತೆ.
Discussion about this post