ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ ಜಿಲ್ಲೆಯ ಗಡಿ ಭಾಗಗಳನ್ನೆಲ್ಲ ಬಂದ್ ಮಾಡಲಾಗುತ್ತೆ ಅನ್ನೋ ಸುದ್ದಿ ಬಂದಾಗಿನಿಂದ ಬಿಡದೆ ಕಾಡುತ್ತಿದೆ ಮಳೆಗಾಲದ ಸ್ವರ್ಗ ನನ್ನೂರು, ಮನೆಯವರು ಸ್ನೇಹಿತರು, ಹಸಿರ ಹೊದ್ದು ಮಲಗಿರುವ ನನ್ನ ಮನೆ, ತೋಟ, ಕಾಡು, ತೋಡು, ಕೆರೆ, ಹೊಳೆ, ಊರಿಗೆ ಹೋದಾಗೆಲ್ಲ ನಾ ಓಡೋಡಿ ಹೋಗೋದೇ ನೀರಿನ ಒರತೆ ಇರುವೆಡೆಗೆ, ಮನೆಯ ಎದುರಿನ ಅಡಿಕೆ ತೋಟದ ಒಳಗೆ ಹೋದರೆ ಸಾಕು, ಗುಡ್ಡ ಬೆಟ್ಟಗಳಿಂದ ಹರಿದು ಬರುವ ತೋಡಿನ ನೀರು ಅದರಲ್ಲಿ ಒಮ್ಮೆ ಕಾಲು ಇಳಿಸಿ ಕೂತರೆ ಸಾಕು, ಹೇಳಲಾಗದ ಅಪರಿಮಿತ ಆನಂದ, ಅಲ್ಲಿಂದ ಮುಂದೆ ಸಾಗಿದರೆ ತೋಟಕ್ಕೆ ತಾಗಿ ಕೊಂಡಿರುವ ಕಾಡು ಅದ್ರಲ್ಲಿರುವ ಪುಟ್ಟ ಕೆರೆ ತನ್ನೊಡಲ ಒಳಗೆ ಸಾವಿರ ಬಾಲ್ಯದ ನೆನಪುಗಳ ಅಡಗಿಸಿಟ್ಟುಕೊಂಡಿದೆ, ಅದೇ ಕೆರೆ ದಂಡೇ ಮೇಲೆ ಕುಳಿತು ಓದಿದ ಅದೆಷ್ಟೋ ಪುಸ್ತಕಗಳು, ಮನದೊಳಗೆ ರಚನೆಯಾದ ಅದೆಷ್ಟೋ ಬರಹ ರೂಪಕ್ಕಿಳಿಯದ, ಕೇವಲ ನನ್ನ ಅಜ್ಜಿಗೆ ಮಾತ್ರ ಹೇಳಿಕೊಂಡ ಅದೆಷ್ಟೋ ಕಥೆ ಕಾದಂಬರಿಗಳು ಇದೆಲ್ಲ ಆ ದಂಡೆಯಿಲ್ಲದ ಕೆರೆಗಷ್ಟೇ ಗೊತ್ತು.
ಕೇವಲ ಮಳೆಗಾಲದಲ್ಲಷ್ಟೇ ನೀರು ತುಂಬಿಕೊಳ್ಳುವ ಆ ಪುಟಾಣಿ ಕೆರೆ ನಮ್ಮ ಮನೆಯಲ್ಲಿ ವ್ಯವಸಾಯ ಮಾಡ್ತಾ ಇದ್ದ ದಿನಗಳಲ್ಲಿ ಕೋಣಗಳಿಗೆ ಸ್ನಾನ ಮಾಡೋ ಸ್ವಿಮ್ಮಿಂಗ್ ಪೂಲ್ ಅದಕ್ಕೆಂದೇ ಕಟ್ಟಿಸಿದ್ದು ಇರಬಹುದೇನೋ ಗೊತ್ತಿಲ್ಲ. ಆ ಕೆರೆಯ ಅಕ್ಕ ಪಕ್ಕವೇ ನನ್ನ ಪುನರ್ಪುಳಿ ಸ್ನೇಹಿತರು ಇರೋದು. ನೀರಲ್ಲೇ ಮುಳುಗರುವ ಅದೆಷ್ಟೋ ಗಿಡ ಮರಗಳು ಆ ಕೆರೆಯ ಆಭರಣಗಳಂತೆ ನನಗೆ ಅನಿಸೋದು. ಇನ್ನು ಅಲ್ಲಿಗೆ ಹರಿದು ಬರುವ ಇನ್ನೊಂದು ತೋಡು ಕಾಡಿನ ನಡುವೆ ಸೀಳಿಕೊಂಡು ಬಳುಕುತ್ತ ಬರ್ತಾ ಇದ್ರೆ ಪ್ರಕೃತಿ ಮಾತೆಯ ಮಡಿಲಲ್ಲಿ ಪ್ರತೀ ಪರಿಸರ ಪ್ರೇಮಿಯೂ ಕಳೆದು ಹೋಗೋದು ಗ್ಯಾರಂಟೀ.

ಇನ್ನು ಮೊದಲೆಲ್ಲ ಬೆಳಿಗ್ಗೆ ಎದ್ದ ತಕ್ಷಣ ಓಡ್ತಾ ಇದ್ದದ್ದೇ ತೋಟಕ್ಕೆ ತಾಗಿಕೊಂಡಿರುವ ಹೊಳೆಯಲ್ಲಿ ಕೆಂಪು ನೀರು ಬಂದಿದ್ಯ, ತೋಡಲ್ಲಿ ನೀರು ಜಾಸ್ತಿ ಆಗಿದ್ಯಾ ಅಂತ, ಒಮ್ಮೆ ತುಂಬು ಮಳೆಗಾಲದಲ್ಲಿ ತೆಂಗಿನಕಾಯಿ ಬಿದ್ದಿದ್ಯಾ ಅಂತ ಹೊಳೆ ಬದಿಯ ತೋಟಕ್ಕೆ ತೋಡು ದಾಟಿ ಹೋಗಿ ವಾಪಸ್ ಅಜ್ಜಿ ಜೊತೆ ಬರುವಾಗ ಕಾಲು ಜಾರಿ ತೋಡಿನ ಒಳಗೆ ಬಿದ್ದು ಬಿಟ್ಟಿದ್ದೆ. ಒಮ್ಮೆ ಪೂರ್ಣ ಮುಳುಗಿ ಮೇಲೆ ಬಂದವಳನ್ನ ಕಾಪಾಡಿದ್ದೇ ಒಂದು ಚಿಕ್ಕ ಗಿಡ. ಪುಣ್ಯಕ್ಕೆ ಅಲ್ಲಿ ಗುಂಡಿಯಾದ್ದರಿಂದ ಸೆಳೆತ ಅಷ್ಟಿರಲಿಲ್ಲ, ಸ್ವಲ್ಪ ಆಚೆ ನೀರಿನ ಸೆಳೆತದ ಕಡೆಗೆ ಜಾರಿದ್ದರೂ ಹೊಳೆಯ ಪಾಲಾಗಿ ಬಿಡ್ತಾ ಇದ್ದೆ, ಆ ದಿನ ಅಲ್ಲಿ ಇದ್ದ ನನ್ನ ಅಕ್ಕ (ಕಸಿನ್) ಓಡಿ ಬಂದು ಕೈ ಕೊಟ್ಟಿಲ್ಲ ಅಂದ್ರೆ ಕಥೆನೇ ಬೇರೆ ಆಗಿಬಿಡ್ತಾ ಇತ್ತು. ಇನ್ನು ವರ್ಷಕ್ಕೆ ಕಡಿಮೆ ಅಂದರು ಒಂದು 3 ಸಲ ನೆರೆ ಬರ್ತಾ ಇತ್ತು, ಹೊಳೆ ತುಂಬಿ ತೋಟಕ್ಕೆ ನುಗ್ಗಿ ಮೇಲೆ ಬಂತು ಅಂದ್ರೆ ಅದನ್ನ ನೋಡೋಕೆ ಹೋಗಿ ನಿಂತು ಕೊಳ್ಳೋದು ಮಳೆಗಾಲದ ಒಂದು ಸುಂದರ ಕುತೂಹಲ. ನೀರು ಮೇಲೆ ಬಂದಷ್ಟೇ ವೇಗದಲ್ಲಿ ಕೆಳಗಿಳಿದು ಹೋಗ್ತಾ ಇತ್ತು. ಅದಾದ ಮೇಲೆ ತೋಟಕ್ಕೆ ಹೋದರೆ ಕೆಸರು ನೀರಲ್ಲಿ ಪಲ್ಟಿ ಹೊಡೆಯೋದು ಗ್ಯಾರಂಟೀ.

ಇರಲಿ… ಕಾಯೋದ್ರಲ್ಲೂ ಒಂದು ಸುಖವಿದೆಯಂತೆ. ಹಾಗೆ ನೋಡಿದರೆ ನಮ್ಮ ಸರಕಾರ, ಜಿಲ್ಲಾಡಳಿತ ವೈದ್ಯಕೀಯ ಸಿಬ್ಬಂದಿಗಳು ಕೊರೋನಾ ವಾರಿಯರ್ಸ್ ಮಾಡ್ತಾ ಇರೋ ತ್ಯಾಗದ ಮುಂದೆ ನಮ್ಮ ನಿಮ್ಮ ಸಣ್ಣ ಆಸೆ ಕನಸು ಏನು ಅಲ್ಲ.ಅವರ ಶ್ರಮ ವ್ಯರ್ಥವಾಗದ ಹಾಗೆ ನೋಡಿಕೊಳ್ಳೋಣ ಈ ಸಲವಾದ್ರೂ ಬದಲಾಗೋಣ. ನಾಳೆಯಿಂದ ಮತ್ತೆ ಲಾಕ್ ಡೌನ್. ಇದನ್ನ ಮಾಡೋದ್ರ ಉದ್ದೇಶ ಸ್ವಲ್ಪವಾದರೂ ಕೊರೋನಾ ಹರಡೋ ಪ್ರಮಾಣ ಕಮ್ಮಿ ಆಗ್ಲಿ ಅಂತ ಅದನ್ನ ಬಿಟ್ಟು,ಹೊರಗೆ ಹೋಗೋಕೆ ಅವಕಾಶ ಇದೆ ಅಂತ ಅಗತ್ಯವಿಲ್ಲದೆ ಇದ್ದರೂ ಹೋಗಿ ಬರೋದು, ಅಂತರ ಕಾಯ್ದುಕೊಳ್ಳದೆ ಇರೋದು ಮಾಸ್ಕ್ ಹಾಕದೆ ಇರೋದು ಇದೆಲ್ಲ ಮಾಡ್ತಾ ಇದ್ರೆ ನಮ್ಮನ್ನೆಲ್ಲ ಕೊರೋನಾದಿಂದ ಕಾಪಾಡೋದಕ್ಕೆ ಯಾರಿಗೂ ಆಗಲ್ಲ. ಇವತ್ತು ಎಷ್ಟೋ ಜನರಿಗೆ ಇನ್ನೂ ಪರಿಸ್ಥಿತಿಯ ಗಂಭೀರತೆ ಅರ್ಥ ಆಗ್ತಾ ಇಲ್ಲ. ತಮ್ಮ ಕಾಲ ಬುಡಕ್ಕೆ ಬರೋ ತನಕ ಉಡಾಫೆಯಿಂದ ವರ್ತಿಸೋದು ಖಂಡಿತಾ ತಪ್ಪು. ಎಲ್ಲರೂ ಜೋಪಾನವಾಗಿ ಮನೇಲೆ ಇದ್ದು ಸಿಕ್ಕ ಅವಕಾಶವನ್ನು ಬಳಸ್ಕೊಂಡು ಹೊಸತೇನಾದ್ರೂ ಯೋಚಿಸಿ ಮಾಡಿ, ಹಾಗೆ ಪ್ರೀತಿ ಪಾತ್ರರ ಜೊತೆ ಸಮಯ ಕಳೀರಿ, ಒಳ್ಳೆ ಪುಸ್ತಕ ಓದೋದು, ಗಾರ್ಡನಿಂಗ್, ಯೋಗ ಎಲ್ಲದಕ್ಕಿಂತ ಮಾನಸಿಕವಾಗಿ ಇನ್ನಷ್ಟು ಗಟ್ಟಿಯಾಗೋದು ಯಾಕೆ ಗೊತ್ತಾ ಇನ್ನು ಎಲ್ಲರಿಗೂ ಬೇಕಾದದ್ದು ಅದೊಂದೇ. ಆ ವಿಷಯದಲ್ಲಿ ಗಟ್ಟಿ ಇದ್ರೆ ಜೀವನವನ್ನು ಎದುರಿಸೋ ತಾಕತ್ತು ಇರುತ್ತೆ. ಇಲ್ಲಾಂದ್ರೆ ಈ ಲೈಫ್ ಇಷ್ಟೇನೆ ಅನ್ನಿಸಿಬಿಡುತ್ತೆ. ಹಾಗಾಗಿ ತಯಾರಾಗೋಕೆ ಒಂದಿಷ್ಟು ಅವಕಾಶ ಮತ್ತೆ ಸಿಕ್ಕಿದೆ ಅದನ್ನ ಸರಿಯಾಗಿ ಬಳಸಿಕೊಳ್ಳೋಣ ಏನಂತೀರಾ?
ನಾಳೆ ಬೆಳಿಗ್ಗೆ ಏಳು ಘಂಟೆಗೆ ರೆಡ್ ಎಫ್’ಎಂ ಅಲ್ಲಿ ಮತ್ತೆ ಸಿಗೋಣ.
Get In Touch With Us info@kalpa.news Whatsapp: 9481252093






Discussion about this post