ಭಾರತೀಯ ಸಂಪ್ರದಾಯದಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಹೆಚ್ಚಿನ ಮಹತ್ವವಿದೆ. ದೀಪಗಳ ಹಬ್ಬ ದೀಪಾವಳಿಯನ್ನು ನಾವೆಲ್ಲರೂ ಸಂಭ್ರಮದಿಂದಲೇ ಆಚರಿಸುತ್ತೇವೆ. ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ.
ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲವೆಡೆ ಮುಂದಿನ ಎರಡು ದಿನಗಳನ್ನು ಸೇರಿಸಿ ಐದು ದಿನಗಳ ಕಾಲ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಹಬ್ಬದಲ್ಲಿ ದೀಪಗಳೇ ಕೇಂದ್ರಬಿಂದು. ಎಲ್ಲಾ ಹಬ್ಬಗಳು ಹೇಗೆ ಮಹತ್ವವನ್ನು ಪಡೆದುಕೊಂಡಿವೆಯೋ ಹಾಗೇ ದೀಪಾವಳಿ ಕೂಡ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ದೀಪಾವಳಿಯನ್ನು ಏಕೆ ಆಚರಿಸಲಾಗುತ್ತದೆ? ಇದರ ಮಹತ್ವವೇನು? ಎಂದು ಯಾರನ್ನಾದರೂ ಕೇಳಿದರೆ ಅವರುಗಳೆಲ್ಲಾ ತಮಗೆ ತೋಚಿದ ಉತ್ತರವನ್ನೇ ನೀಡುತ್ತಾರೆ. ಆದರೆ ದೀಪಾವಳಿ ಹಬ್ಬವು ತನ್ನದೇ ಆದ ಆಚರಣೆಯ ಮಹತ್ವವನ್ನು ಹೊಂದಿದೆ.
ದೀಪಾವಳಿ ಎಂಬುದು ಸಂಸ್ಕೃತ ಪದ. ಅದರರ್ಥ ಸಾಲು ಅಥವಾ ದೀಪಗಳ ದಾರ. ಈ ಪದವು ಮಣ್ಣಿನ ದೀಪ ಮತ್ತು ವಾಲಿ ಅಥವಾ ನಿರಂತರ ಸಾಲು ಅಥವಾ ಯಾವುದೋ ಸರಣಿಯ ಸಂಯೋಗವಾಗಿದೆ. ದೀಪಾವಳಿ ಹಬ್ಬ ಹಿಂದೂಗಳ ಹಬ್ಬ ಮಾತ್ರವಾಗಿರದೇ ಈ ಹಬ್ಬವನ್ನು ಜೈನ್, ಸಿಖ್ ಹಾಗೂ ಬೌದ್ಧರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.
ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ವಿಶೇಷತೆ ಇರವಂತೆಯೇ ಆಚರಣೆಯಲ್ಲಿ ಬಗೆಬಗೆಯ ಸಂಪ್ರದಾಯಗಳು ಇವೆ. ಮತ್ತೆ ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಹಬ್ಬವನ್ನು ಆಚರಿಸುತ್ತಾರೆ. ಆದರೆ ಧಾರ್ಮಿಕ ಹಾಗೂ ಪೌರಾಣಿಕ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬ ರಾಮಾಯಣದ ಹಲವು ಸನ್ನಿವೇಶಗಳಿಗೆ ಹೊಂದಿಕೊಂಡಿದೆ.
ಎಣ್ಣೆ ಸ್ನಾನ ಮಾಡುವ ಸಂಪ್ರದಾಯವೂ ಈ ಹಬ್ಬದ ಸಂಭ್ರಮದ ಭಾಗವೇ ಆಗಿದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಭಾಗ್ಯ ವೃದ್ದಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.
ನರಕ ಚತುರ್ದಶಿಯ ಮಾರನೆಯ ದಿನ ದೀಪಾವಳಿ ಅಮಾವಾಸ್ಯೆಯಾಗಿದ್ದು, ಆ ದಿನ ಲಕ್ಷ್ಮೀಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮೀಯನ್ನು ಆರಾಧಿಸುವ ಹಬ್ಬ. ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. ಅದರಲ್ಲೂ ವ್ಯಾಪಾರಿಗಳಿಗೆ ದೀಪಾವಳಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.
ಬಲಿಪಾಡ್ಯಮಿ ಸಂಭ್ರಮ
ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಆ ದಿನ ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಅಂದು ಬಲೀಂದ್ರಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ, ಭಕ್ತ ದಾನಶೂರ ದೈತ್ಯರಾಜ ಬಲಿಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ ಮತ್ತು ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಚ್ಚೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ.
ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಯುತ್ತದೆ.
ಗೋವರ್ಧನಗಿರಿ ಎತ್ತಿದ ದಿನ ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ. ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮಾಡಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹುಟ್ಟುಹಬ್ಬವೆಂದು ಆಚರಿಸುತ್ತಾರೆ.
ಅಯೋಧ್ಯೆಗೆ ಮರಳಿದ ಶ್ರೀರಾಮ ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮ ವಿಜಯದಶಮಿಯಂದು ರಾವಣನನ್ನು ಕೊಂದು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಜನರು ಸಾಲುದೀಪಗಳನ್ನು ಹಚ್ಚಿ ಸ್ವಾಗತಿಸಿ ದೀಪಾವಳಿಯನ್ನು ಆಚರಿಸಿದರಂತೆ. ಜೈನ ಪುರಾಣದ ಪ್ರಕಾರ ಭಗವಾನ್ ಮಹಾವೀರ ನಿರ್ವಾಣ ಹೊಂದಿದ್ದು ದೀಪಾವಳಿಯ ದಿನದಂದೇ. ಸಿಖ್ ಸಂಪ್ರದಾಯದಂತೆ ಗುರುಹರಗೋವಿಂದ್’ಜೀ ಮತ್ತು ಇತರ 25 ಹಿಂದೂ ಮಹಾರಾಜರುಗಳು ಮೊಘಲರಿಂದ ಬಂಧಮುಕ್ತಿ ಹೊಂದಿದ ದಿನ ಕೂಡ ಇದೇ ದೀಪಾವಳಿಯಂದು.
ದೀಪಾವಳಿ ಎಂದಾಕ್ಷಣ ಮೊದಲು ನೆನಪಾಗುವುದೇ ಮನೆಯ ಅಲಂಕಾರ, ಭಾರತೀಯರು ಯಾವುದೇ ಹಬ್ಬ ಇರಲಿ, ಮನೆಯ ಅಲಂಕಾರಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಹೀಗೆ ಮನೆಯ ಅಂದ ಚಂದವನ್ನು ಹೆಚ್ಚಿಸಲು, ಈ ಬಾರಿಯ ದೀಪಾವಳಿಗೆ ಇನ್ನಷ್ಟು ಮೆರಗು ನೀಡಲು ವಿವಿಧ ಬಗೆಯ ತೋರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಮನೆ ಅಲಂಕಾರ ಚೆನ್ನಾಗಿದ್ದರೆ ಹಬ್ಬಕ್ಕೆ ಇನ್ನಷ್ಟು ಸಂಭ್ರಮ-ಸಡಗರ ರಂಗು ನೀಡುತ್ತದೆ. ಈಗಾಗಲೇ ದೀಪಾವಳಿ ಹಿನ್ನಲೆಯಲ್ಲಿ ನಗರ ಪ್ರದೇಶಗಳ ವಿವಿಧ ಮಾರುಕಟ್ಟೆಗಳು ಸೇರಿದಂತೆ ಆನ್‌ಲೈನ್ ಮಾರ್ಕೆಟ್‌ನಲ್ಲೂ ಈ ವಸ್ತುಗಳು ಲಭ್ಯ. ತೋರಣಗಳಲ್ಲಿ ಸಾಂಪ್ರದಾಯಿಕ ಪರ್ಲ್, ಪ್ರೋರಲ್, ಉಲನ್, ಟೆಸಲ್, ಚಂಡು ಹೂವು, ಫೋಮ್, ಕ್ರಿಸ್ಟಲ್, ಮೆಟಲ್, ಲೀಫ್, ಡಿಸೈನರ್, ಬಂಜಾರಾ ವಾಲ್, ಇಂಡಿಯನ್ ಎಂಬ್ರಾಯಡರಿ, ಗ್ಲಾಸ್‌ವರ್ಕ್ ಮತ್ತು ಹ್ಯಾಂಗಿಂಗ್ ಸೇರಿದಂತೆ ವಿವಿಧ ಬಗೆಯ ತೋರಣಗಳನ್ನು ಕಾಣಬಹುದಾಗಿದೆ.
ದೀಪಗಳು, ದೀಪ ಇರಿಸುವ ಅಲಂಕಾರಿಕ ತಟ್ಟೆಗಳು, ಅರಿಶಿಣ ಕುಂಕುಮದ ಅಲಂಕಾರಿಕ ತಟ್ಟೆಗಳು, ಬಗೆಬಗೆಯ ಆಕಾಶ ಬುಟ್ಟಿಗಳ ಮಾರಾಟ ಸಹ ಜೋರಾಗಿದೆ. ಇನ್ನು ಈ ಎಲ್ಲಾ ವಸ್ತುಗಳು ಈ ಬಾರಿಯ ಆಕರ್ಷಣೆಗಳಾಗಿದ್ದು, ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಜೊತೆಗೆ ಈ ವಸ್ತುಗಳ ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿವೆ.
ದೀಪಾವಳಿಯನ್ನು ಬೆಳಕಿನ ಹಬ್ಬವೆಂದು ಕರೆಯಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ದೀಪಗಳನ್ನು ಹಚ್ಚುವ ಬದಲು ಎಲ್ಲರೂ ಬೆಳಕಿನ ಹಬ್ಬದ ಹೆಸರಿನಲ್ಲಿ ಪಟಾಕಿ ಸಿಡಿಸಿ ವಾಯುಮಾಲಿನ್ಯ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ ನಗರ ಪ್ರದೇಶಗಳ ಜನ ಉಸಿರಾಟದ ತೊಂದರೆಗೆ ಸಿಲುಕುವಂತಾಗಿದೆ. ಈ ರೀತಿಯ ಮಾಲಿನ್ಯ ನಿಯಂತ್ರಣಕ್ಕಾಗಿ ಪಟಾಕಿ ತಯಾರಕರೇ ಮುಂದೆ ಬಂದಿದ್ದು, ಈ ಬಾರಿ ಮಾರುಕಟ್ಟೆಗೆ ಹಸಿರು ಪಟಾಕಿ ಪ್ರವೇಶವಾಗುತ್ತಿದೆ.
ಕಿವಿಗಡಚಿಕ್ಕುವ ಅಸಹನೀಯ ಸದ್ದಿನ, ಅಘಾತಕಾರಿ ಸ್ಫೋಟ ಮತ್ತು ಹೊಗೆಯ ಚೆಲ್ಲಾಟವಾಗಿದೆ. ಯಾವುದೇ ಬಗೆಯ ಪಟಾಕಿ ಸಿಡಿಸಿದ ಹಲವು ವಾರಗಳ ನಂತರವೂ ವಾತಾವರಣದಲ್ಲಿ ಮೆಗ್ನೀಶಿಯಂ, ಗಂಧಕದ ನೈಟ್ರೇಟ್, ಸಾರಜನಕದ ಡೈಆಕ್ಸೈಡ್ ಮುಂತಾದ ನಂಜಿನ ವಸ್ತುಗಳು ಕಡಿಮೆಯಾಗುವುದಿಲ್ಲ, ಉಸಿರಾಟ ತೊಂದರೆ, ಕಣ್ಣುರಿ ಮತ್ತು ಗಂಟಲು ನೋವು ಬಾಧಿಸುತ್ತದೆ. ಎಲ್ಲರೂ ದೀಪಗಳನ್ನು ಬೆಳಗಿಸುವ ಮೂಲಕ ಪರಿಸರ ಸ್ನೇಹಿಯಾಗಿ ಆಚರಿಸಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುವುದನ್ನು ಅರಿಯಬೇಕಿದೆ. ಪಟಾಕಿ ಬಿಟ್ಟು ಹಣತೆ ಹಚ್ಚೋಣ. ಒಂದಾಗಿ ಸಂಭ್ರಮಿಸೋಣ ಎನ್ನುವುದೇ ಆಶಯ.
ಲೇಖನ: ಸಂಧ್ಯಾ ಸಿಹಿಮೊಗೆ
Get In Touch With Us info@kalpa.news Whatsapp: 9481252093, 94487 22200
Discussion about this post