ಚಳ್ಳಕೆರೆ: ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ನೀಡಬೇಕು ಎಂದು ಅಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ನೆಹರು ವೃತ್ತದಲ್ಲಿ ಮಾನವ ಸರಪಲಿ ನಿರ್ಮಿಸಿ, ನಂತರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಳ್ಳಿಗಳಿಂದ ತಾಲೂಕು-ಪಟ್ಟಣಗಳಿಗೆ ಶಿಕ್ಷಣ ಪಡೆಯಲು ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್’ಪಾಸ್ ವಿತರಿಸುವುದರಿಂದ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಕಳೆದ ವರ್ಷವು ಹಣವಿಲ್ಲವೆಂಬ ನೆಪವೊಡ್ಡಿದ ರಾಜ್ಯ ಸರ್ಕಾರ ಈ ವರ್ಷವೂ ಸಹ ವಿದ್ಯಾರ್ಥಿಗಳ ಬೇಡಿಕೆಯನ್ನು ಮೂಲೆಗುಂಪು ಮಾಡಿದೆ. ಕೇವಲ ಅಧಿಕಾರ ಉಳಿಸಿಕೊಳ್ಳುವ ಯೋಜಯಲ್ಲಿರುವ ರಾಜ್ಯ ಸರ್ಕಾರಕ್ಕೆ ವಿದ್ಯಾಥಿಗಳ ಕೂಗು ಕೇಳಿಸಿಕೊಂಡು ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್’ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ವೈಭವ್ ಬಾದ್ಮಿ, ತಾಲೂಕು ಸಂಚಾಲಕ ಭಾನುಪ್ರಸಾದ್, ನಗರ ಕಾರ್ಯಕಾರಣಿ, ಸದಸ್ಯರಾದ ಲವ ಕುಮಾರ್, ತೇಜು, ವೀರೇಶ ಚಳ್ಳಕೆರೆ, ಭಾಗ್ಯಶ್ರೀ ಐಟಿಐ ಕಾಲೇಜು, ಗಿರಿಯಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)

















