ಚಳ್ಳಕೆರೆ: ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಬಯಲುಸೀಮೆಯ ಜನರು ಕರುಣಾಮಯಿಗಳು ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ಸುಮಾರು 2 ಜಿಲ್ಲೆಗಳ 8 ತಾಲೂಕುಗಳಲ್ಲಿ ಭಾರೀ ಮಳೆಯಿಂದ ಜನಜೀವನ ತತ್ತರಸಿಹೋಗಿದೆ. ಇಂತಹ ಸಂಕಷ್ಟದಲ್ಲಿರುವ ಜನರಿಗಾಗಿ ನಮ್ಮ ಭಾಗದ ಬಯಲುಸೀಮೆಯ ಜನರು ಉದಾರ ಮನೋಭಾವದಿಂದ ಸುಮಾರು ಒಂದು ಕೋಟಿ ರೂ. ಮೌಲ್ಯದ ಸಾಮಗ್ರಿಗಳು, ನಗದು ರೂಪದ ದೇಣಿಗೆಯಲ್ಲಿ ನೀಡಿದ್ದಾರೆ ಎಂದರು.
ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ದೇಣಿಗೆ ಹಾಗೂ ಸಹಾಯ ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ಅದನ್ನು ಸಂಕಷ್ಟಕ್ಕೀಡಾದ ವ್ಯಕ್ತಿಗಳಿಗೆ ತಲುಪಿಸಲು ತಾವೇ ಸ್ವತಃ ಅವರಿದ್ದಲ್ಲಿಗೆ ಹೋಗಿ ಅವರ ಸಂಕಷ್ಟಕ್ಕೆ ನೆರವಾಗುವದು ಬಯಲುಸೀಮೆಯ ಜನರು ಕರುಣಾಮಾಯಿಗಳು ಎಂಬುದನ್ನು ತೋರಿಸಿದೆ ಎಂದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 13 ದಿನಗಳ ಕಾಲ ಸ್ವಯಂ ಪ್ರೇರಣೆಯಿಂದ ನಗರದ ಬಿದಿ ವ್ಯಾಪಾರಿಗಳು, ಅಂಗಡಿ ಮುಗ್ಗಟ್ಟುಗಳ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಗಳು, ಸಮಾಜ ಸೇವಕರು, ರಾಜಕೀಯ ಪಕ್ಷಗಳ ಮುಖಂಡರುಗಳು ನಿರಿಕ್ಷೇಗೂ ಮೀರಿ ಹೆಚ್ಚು ದಾನ ಮಾಡಿದ್ದಾರೆ. ಅಲ್ಲಿನ ಜನತೆಯ ಸಂಕಷ್ಟಕ್ಕೆ ತುಂಬು ಹೃದಯದಿಂದ ಸಹಕರಿಸಿದ್ದಾರೆ ಎಂದರು ಪ್ರಶಂಸಿಸಿದರು.
ಇಂತಹ ಪವಿತ್ರ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಶಾಸಕರು, ಇನ್ನೂ ಸಹ ಹಲವಾರು ಜನರು, ಸಂಘ ಸಂಸ್ಥೆಗಳು ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳನ್ನು ಕಚೇರಿಗೆ ನೀಡುತ್ತಿದ್ದಾರೆ ಎಂದರು.
ನಗರಸಭಾ ಸದಸ್ಯ ವೈ. ಪ್ರಕಾಶ್ ಮಾತನಾಡಿ, ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿಯಂತಹ ಸಂದರ್ಭದಲ್ಲಿ ನಮ್ಮ ಶಾಸಕರ ಮುಂದಾಳತ್ವದಲ್ಲಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಯೋಚಿಸಲಾಯಿತು. ಇದಕ್ಕೆ ಅನೇಕ ವಸ್ತು ಹಾಗೂ ಹಣವನ್ನು ದಾನವನ್ನಾಗಿ ಪಡೆದು ಅಗತ್ಯ ವಸ್ತುಗಳಾದ ಚಾಪೆ, ಬೆಡ್ ಶೀಟ್, ಸ್ವೆಟ್ಟರ್, ಸೊಳ್ಳೆ ಪರದೆ, ಅಕ್ಕಿ, ಗ್ಯಾಸ್ ಸ್ಟವ್, ಕುಡಿಯುವ ನೀರು, ಬಟ್ಟೆ, ಸೀರೆ, ಮಕ್ಕಳ ಬಟ್ಟೆ ವಸ್ತುಗಳನ್ನು ಮನೆ ಮನೆಗೂ ಹೋಗಿ ತಲುಪಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಟಿ. ಪ್ರಭುದೇವ್, ರಮೇಶ್ ಗೌಡ, ಮಲ್ಲಿಕಾರ್ಜುನ, ಕೆ. ವೀರಭದ್ರಪ್ಪ, ಆರ್. ಪ್ರಸನ್ನ ಕುಮಾರ್, ವೀರೇಶ್, ಶೇಖರಪ್ಪ, ಪರಸಪ್ಪ ಇತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post