ಚಳ್ಳಕೆರೆ: ಮುಂಗಾರು ಮಳೆ ಮುಗುಯುತ್ತಾ ಬಂದರು ಭುವಿಗೆ ಬಾರದ ವರುಣದೇವ, ರೈತರಲ್ಲಿ ಮೂಡಿದ ಇನ್ನಿಲ್ಲದ ಆತಂಕ. ಮತ್ತೆ ಈ ವರ್ಷವು ಬರದ ಛಾಯೆ. ಬರಗಾಲದ ನಡುವೆಯೂ ಮಾಡಿದ ಶ್ರಮಕ್ಕೆ ಬಂತು ಬಂಪರ್ ಕಲ್ಲಂಗಡಿ ಬೆಳೆ.
ಹೌದು… ಚಳ್ಳಕೆರೆ ತಾಲೂಕಿನ ರೈತರೊಬ್ಬರು ಬಯಲುಸೀಮೆಯಲ್ಲಿ ಕಷ್ಟಪಟ್ಟು, ನಂಬಿಕೆಯಿಟ್ಟು ಬೆಳೆದ ಕಲ್ಲಂಗಡಿ ಉತ್ತಮ ಫಲ ನೀಡಿದ್ದು, ಈ ಭಾಗದ ರೈತರಿಗೆ ಮಾದರಿಯಾಗಿದೆ.
ಈ ರೀತಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ರೈತ ಹುಲಿಕುಂಟೆ ರಾಜಣ್ಣ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ:
ಪತ್ರಿ ವರ್ಷವು ಎಲ್ಲರು ರೈತರು ಬೆಳದಂತೆ ಈರುಳ್ಳಿ, ಶೇಂಗಾ ಹಾಗೂ ಟೊಮೇಟೊ ಬೆಳೆ ಸಾಲ ಮಾಡಿ ನಷ್ಟ ಅನುಭವಿಸಿ ತೋಟಗಾರಿಕೆ ಬೆಳೆ ಬೆಳೆದ ನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ರಾಜ್ಯದಲ್ಲಿ ದಿನೇ ದಿನೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದೇ ಬೆಳೆ ಬೆಳೆಯುವ ಬದಲು ಕಾಲ ಕಾಲಕ್ಕೆ ಅನುಗುಣವಾಗಿ ತೋಟಗಾರಿಕೆ ಇಲಾಖೆ ಮಾಹಿತಿ ಪಡೆದು ವಿವಿಧ ರೀತಿಯ ಬೆಳೆ ಬೆಳೆದರೆ ಅಲ್ಪ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಬಹುದು ಎನ್ನುತ್ತಾರೆ.
ಬಿಸಿಲಿಗೆ ಹೆಸರುವಾಸಿಯಾದ ಬಯಲುನಾಡು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರೈತ ಸುಮಾರು 20 ವರ್ಷಗಳಿಂದ ಹಲವಾರು ರೀತಿಯ ಬೆಳೆ ಬೆಳೆದು ಕೈ ಸುಟ್ಟುಕೊಂಡಿದ್ದರು. ಕೃಷಿಯ ಬದುಕು ಸಾಲದ ಬದುಕು ಎಂದು ನಿರಾಸೆಯಾದ ಇವರಿಗೆ ಸ್ನೇಹಿತರೊಬ್ಬರು ನೀಡಿದ ಸಲಹೆಯಂತೆ ಸೂರ್ಯ ತಳಿ ಕರಬೂಜವನ್ನು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ನಾಟಿ ಮಾಡಿದರು.
ಅಂದು ನಂಬಿಕೆಯಿಟ್ಟು ಬೆಳೆಸಿದ ಫಲ ಪ್ರಸ್ತುತ ಸುಮಾರು 3 ಲಕ್ಷ ಲಾಭವನ್ನು ತಂದುಕೊಟ್ಟಿದೆ. ನಂತರ ಅದೇ ಭೂಮಿಗೆ 2 ಲಕ್ಷ ಹಣ ತೊಡಗಿಸಿ ಮತ್ತದೇ ಬೆಳೆ ಕರುಬೂಜ ಬೆಳೆಯನ್ನು ಬೆಳೆದು 5 ರಿಂದ 6 ಲಕ್ಷ ಲಾಭ ಪಡೆದು ಮೊದಲು ಬೆಳೆ ಬೆಳೆಯೋದಕ್ಕೆ ಮಾಡಿದ್ದ ಸಾಲ ಎಲ್ಲಾ ಕೊಚ್ಚಿಕೊಂಡು ಹೋಗಿದೆ ಎನ್ನುತ್ತಾರೆ ರೈತ.
ಕಳೆದ ಹಲವಾರು ವರ್ಷಗಳಿಂದ ವಿವಿಧ ಬೆಳೆ ಬೆಳೆದು ಕೈ ಸುಟ್ಟುಕೊಂಡಿದ್ದ ನನ್ನ ಸ್ನೇಹಿತ ವೀರಣ್ಣನಿಗೆ ಕರಬೂಜ್, ಕಲ್ಲಂಗಡಿ ಬೆಳೆಯಿಂದ ಸುಮಾರು ಲಾಭಸಿಕ್ಕಿದೆ. ಕಳೆದ ವರ್ಷ ಸಾಲಗಾರನಾಗಿದ್ದ ತೋಟಗಾರಿಕ ಬೆಳೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ.
-ಜಯಣ್ಣ ಹುಲಿಕುಂಟೆ, ರೈತ
ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಕಳೆದ ವರ್ಷ ಬಿದ್ದ ಮಳೆ ಜೀವ ನೀಡಿದಂತಾಗಿದೆ. ಒಂದು ಕೊಳವೆ ಬೋರಿನಲ್ಲಿ ಒಂದೂವರೆಯಿಂದ ಎರಡು ಇಂಚು ನೀರು ಬರುತ್ತಿದ್ದು, ತೋಗಾರಿಕೆ ಇಲಾಖೆ ಸಹಾಯದಿಂದ ಹನಿ ನೀರಾವರಿ ಪದ್ದತಿ ಅಳವಡಿಸಿ, ಬದು ನಿರ್ಮಾಣ ಮಾಡಿ, ಪಾಲಿತನ್ ಪೇಪರ್ ಬಳಸಿ, ಸುಮಾರು ದಿನಗಳ ಕಾಲ ನೀರಿನಲ್ಲಿ ಹದ ಮಾಡಲಾಗುತ್ತದೆ.
ನಂತರ ಪೇಪರ್ ಅಲ್ಲಲ್ಲಿ ಹೋಲ್ ನಿರ್ಮಿಸಿ ಬೀಜ ನಾಟಿ ಮಾಡಲಾಗುತ್ತದೆ. ನಾಟಿ ಮಾಡಿ ನಾಲ್ಕೈದು ದಿನಗಳಲ್ಲಿ ಗಿಡ ಮೊಳಕೆಯಾಗಿ ಎಲೆ ಬಿಡಲಾರಂಭಿಸುತ್ತದೆ. ಅಲ್ಲಿಂದ ಹಲವಾರು ಬಾರಿ ಔಷಧಿಯನ್ನು ಸಹ ಸಿಂಪಡನೆ ಮಾಡಬೇಕು. ಹುಳುಗಳಿಂದ ತಪ್ಪಿಸಿಕೊಳ್ಳಲು ಆಕರ್ಷಕ ಅಂಟಿನ ಪೇಪರ್ ಹಾಕಿದ್ದಾರೆ. ಇದರಿಂದ ಹಣ್ಣುಗಳು ಸಹ ಸುರಕ್ಷಿತವಾಗಿ, ಸಮೃದ್ಧಿಯಾಗಿ ಬಂದಿವೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ಕಳೆದ ಎಪ್ರಿಲ್ ಕೊನೆಯ ವಾರದಲ್ಲಿ ನಾಟಿ ಮಾಡಿದ್ದು, ರಸಗೊಬ್ಬರ ಬಳಸದೇ ಕೋಳಿ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಸಿ ಉತ್ತಮ ಕಲ್ಲಂಗಡಿ ಬೆಳೆದಿದ್ದಾರೆ. ಬೀಜ ನಾಟಿ ಮಾಡಿದ 55 ರಿಂದ 60 ದಿನದಲ್ಲಿ ಬೆಳೆ ಕಟಾವುಗೆ ಬರುತ್ತದೆ. ಈಗಾಗಲೇ ಸುಮಾರು 6 ಟನ್ ಹಣ್ಣು ಮಾರುಕಟ್ಟೆಗೆ ಕಳುಹಿಸಲಾಗಿದೆ. ಕೆಜಿಗೆ 8 ರಿಂದ 12 ರೂ.ವರೆಗೂ ಸಿಕ್ಕಿದ್ದು, ಸುಮಾರು 3 ಲಕ್ಷ ರೂ. ಲಾಭ ದೊರೆತಿದೆ. ಇನ್ನು ಇರುವ ಬೆಳೆಯಲ್ಲಿ ಸುಮಾರು 3 ಲಕ್ಷ ಹಣ ಬರುವ ನಿರೀಕ್ಷೆ ಎನ್ನುತ್ತಾರೆ ಈ ರೈತ.
ಇನ್ನು, ತಾಲೂಕಿನಲ್ಲಿ 120 ಎಕರೆ ಜಮೀನಿನಲ್ಲಿ, ಕಡಿಮೆ ನೀರಿನಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲಾಗಿದೆ. ಮಣ್ಣಿನ ಹವಾಗುಣಕ್ಕೆ ತಕ್ಕಂತೆ ನಾಮದಾರಿ, ಕಿರಣ್ ಇನ್ನು ಹಲವು ತಳಿಗಳನ್ನು ಬೆಳೆಯಬಹುದಾಗಿದೆ. ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಪದ್ದತಿ ಹಾಗೂ ಮಲ್ಚಿಂಗ್ ಪೇಪರ್ ಪಡೆಯಲು ಸಹಾಯಧನ ನೀಡುತ್ತಿದೆ. ಇದರ ಸಹಾಯ ಸಲಹೆ ಪಡೆದು ರೈತರು ಉತ್ತಮ ಬೆಳೆ ಬೆಳೆದು ಜೊತೆಗೆ ಬಿಸಿಲು ಹೆಚ್ಚು ಇರುವುದರಿಂದ ಈ ಸಮಯದಲ್ಲಿ ಕಲ್ಲಂಗಡಿಗೆ ಹೆಚ್ಚು ಬೇಡಿಕೆ ಮುಸ್ಲಿಂ ಬಾಂಧವರ ರಂಜಾನ್ ಹಬ್ಬ ಇರುವುದರಿಂದ ಕಲ್ಲಂಗಡಿ ಹಣ್ಣನ್ನು ಹೆಚ್ಚು ಬಳಸುತ್ತಾರೆ ಎನ್ನುತ್ತಾರೆ ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ.
(ವಿಶೇಷ ವರದಿ: ಎಸ್. ಸುರೇಶ ಬೆಳಗೆರೆ)
Discussion about this post