ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ವಾಲ್ಮೀಕಿ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಲಕ್ಷ್ಮೀಪುರ ಶಿವಾಲಯ, ಬೆಳಗೆರೆ ಈಶ್ವರ ದೇವಸ್ಥಾನ, ದೊಡ್ಡೆರಿ ಕನ್ನೇಶ್ವರ ಮಠ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ದೇಶ ಕೊರೋನಾ ಮುಕ್ತವಾಗಿ ಜನತೆ ಸುಭಿಕ್ಷವಾಗಿರಲಿ ಎಂದು ಹಳೆಟೌನ್‌ನ ಶ್ರೀರಾಮಮಂದಿರದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ದೇವರಿಗೆ ವಿಶೇಷ ಅಲಂಕಾರ ಹಾಗೂ ವೇದ ಪಂಡಿತರಿಂದ ರುದ್ರ ಪಠಣ ಮಾಡಲಾಯಿತು. ಮಹಿಳಾ ಭಜನಾ ಮಂಡಳಿಯಿಂದ ಅಹೋ ರಾತ್ರಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ದೊಡ್ಡೆರಿ ರಸ್ತೆಯ ಸಾಯಿಬಾಬಾ ಮಂದಿರದಲ್ಲಿ ಸಿರಡಿ ಸಾಯಿಬಾಬಾಗೆ ಸಾಯಿಸೇವಾ ಸಮಿತಿಯಿಂದ ಹಲವಾರು ಹೋಮ ಹವನ 100 ಎಡೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಜ್ಯೋತಿಷಿ ಪ್ರವೀಣ ಶ್ರಮ ಮಾತನಾಡಿ ಕಳೆದ ವರ್ಷ ಶಿವರಾತ್ರಿ ಹಬ್ಬ ಪ್ರಾರಂಭದಲ್ಲೇ ಕೊರೋನಾ ಆರಂಭವಾಗಿ ದೇಶಾದ್ಯಂತ ಆತಂಕವನ್ನು ಸೃಷ್ಟಿಸಿತ್ತು. ಈ ಶಿವರಾತ್ರಿಗೆ ಕೊರೋನಾ ಸಂಪೂರ್ಣ ಕೊನೆಯಾಗಲಿ, ದೇವರು ಎಲ್ಲರಿಗೂ ಅರೋಗ್ಯ ಕೊಡಲಿ ಎಂದು ರುದ್ರ ಹೋಮ, ಬಿಲ್ವ ಪೂಜೆ, ಹಾಗೂ ವಿಶೇಷ ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶಿವರಾತ್ರಿಯ ಮಹತ್ವ:
ಮಹಾಶಿವರಾತ್ರಿಯು ಹಿಂದೂಗಳ ಪವಿತ್ರ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿದ್ದು, ಜೀವನದಲ್ಲಿನ ಎದುರಾಗುವ ಸಮಸ್ಯೆಗಳು ಮತ್ತು ಕತ್ತಲೆಯ ಬದುಕಿನಿಂದ ಹೊರಬರಲು ಉಪವಾಸ, ಶಿವನ ಧ್ಯಾನ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಈ ಶುಭ ಸಂದರ್ಭದಲ್ಲಿ ಈಶ್ವರ ದೇವರು ಮತ್ತು ಮಹಾಶಕ್ತಿ ದೇವಿಯ ಶಕ್ತಿಗಳು ಒಂದಾಗುವುದು. ಮತ್ತು ಬ್ರಹ್ಮಾಂಡವು ಆಧ್ಯಾತ್ಮಿಕ ಶಕ್ತಿಯನ್ನು ಬೇಗನೆ ಸೆಳೆಯುತ್ತದೆ ಎಂದು ನಂಬಲಾಗಿದೆ. ಮಹಾಶಿವರಾತ್ರಿ ವೇಳೆ ಉಪವಾಸ-ಧ್ಯಾನ, ಸಾಮಾಜಿಕ ಸೌಹಾರ್ದತೆ ಮೂಲಕ ಶಿವ ಮಂದಿರಗಳಲ್ಲಿ ಪೂಜೆ ಮಾಡಲಾಗುವುದು. ಶಿವರಾತ್ರಿಯ ಜಾಗರಣೆ ಈ ಹಬ್ಬದ ವಿಶೇಷವಾಗಿದೆ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post