ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರದ ಒಳ ಚರಂಡಿ ವ್ಯವಸ್ಥೆಯೂ ಸಹ ಸರಿಯಿಲ್ಲ. ಸ್ವಚ್ಚತೆ ಬಗ್ಗೆ ನಗರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಇನ್ನೂ ಹೆಚ್ಚಿನ ಗಮನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಟಿ. ಪ್ರಭುದೇವ್ ಸಲಹೆ ನೀಡಿದರು.
ನಗರಸಭಾ ಕಾರ್ಯಾಲಯದ ಸಭಾಂಗಣದಲ್ಲಿ 2021-22ನೇ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿವರ್ಷವೂ ನಗರಸಭೆ ಆಡಳಿತ ಸಾರ್ವಜನಿಕರಿಂದ ಅನೇಕ ಸಲಹೆಗಳನ್ನು ಪಡೆಯುವುದು ಸಂತಸದ ವಿಷಯವಾದರೂ ಅವುಗಳ ಅನುಷ್ಠಾನ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲವೆಂದರು.
ಹಿರಿಯ ಸದಸ್ಯ ಎಸ್.ಜಯಣ್ಣ, ಬಿ.ಟಿ. ರಮೇಶ್‌ಗೌಡ ಚಳ್ಳಕೆರೆ ನಗರದ ಹೊರಭಾಗದಲ್ಲಿ ಮುಕ್ತಿಧಾಮವಿದ್ದರೂ ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲ, ಮುಕ್ತಿವಾಹನ, ವಿದ್ಯುತ್ ಚಿತಾಗಾರದ ವ್ಯವಸ್ಥೆ ಮಾಡುವಂತೆ ಈ ಹಿಂದೆ ಮನವಿ ಮಾಡಿದರು ಅದು ಕಾರ್ಯಗತವಾಗಿಲ್ಲ. ನಗರದಲ್ಲಿರುವ ಎಲ್ಲಾ ಒಳ ಚರಂಡಿಗಳು ಅವೈಜ್ಞಾನಿಕತೆಯಿಂದ ಕೂಡಿವೆ ಎಂದರು. ಸದಸ್ಯ ವಿರೂಪಾಕ್ಷಿ ಮಾತನಾಡಿ, ಸರ್ಕಾರ ಅನುದಾನವನ್ನು ಹಿಂದುಳಿದ ವಾರ್ಡ್‌ಗಳ ಅಭಿವೃದ್ಧಿ ಹೆಚ್ಚು ಮೀಸಲಿಡುವಂತೆ ಮನವಿ ಮಾಡಿದರು.
ನಗರಸಭೆ ಅಭಿವೃದ್ಧಿ ಕುರಿತಂತೆ ಆರ್. ಪ್ರಸನ್ನಕುಮಾರ್, ಟಿ. ಕೃಷ್ಣಮೂರ್ತಿ, ಬೋರಣ್ಣ, ಆರ್. ಜಗದೀಶ್ ಮಾತನಾಡಿದರು. ನಗರಸಭಾ ಸದಸ್ಯರಾದ ಹೊಯ್ಸಳ ಗೋವಿಂದ, ವಿಶುಕುಮಾರ್, ವೆಂಕಟೇಶ್, ಸುಮಕ್ಕ, ಮಂಜುಳಾ, ಸಾವಿತ್ರಮ್ಮ, ತಿಪ್ಪಮ್ಮ, ನಿರ್ಮಲ, ಕವಿತಾ ಬೋರಣ್ಣ, ಸುಮ ಭರಮಣ್ಣ ಮುಂತಾದವರು ಭಾಗವಹಿಸಿದ್ದರು.ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಕೃಷ್ಣಮೂರ್ತಿ ಮಾತನಾಡಿ, ಕಳೆದ ಸಭೆಯ ಮಾಹಿತಿ ಬಗ್ಗೆ ಹೆಚ್ಚು ವಿವರ ನನ್ನಲ್ಲಿ ಇಲ್ಲ. ಆದರೆ, ಇಂದು ಮಂಡಿಸಿದ ಎಲ್ಲಾ ವಿಚಾರಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಎಲ್ಲಾ ಸದಸ್ಯರು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವ ಭರವಸೆ ನೀಡಿದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post