ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡು ವಾಹನ ಓಡಿಸುವ ಮೂಲಕ ಅಪಘಾತ ತಡೆಗೆ ಸಹಕಾರ ನೀಡಬೇಕು ಎಂದು ಚಳ್ಳಕೆರೆ ಪೊಲೀಸ್ ಇನ್ಸ್’ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಕರೆ ನೀಡಿದರು.
ನಗರದ ಹೊರವಲಯದ ಚಿತ್ರದುರ್ಗ ಮುಖ್ಯ ರಸ್ತೆಯಲ್ಲಿ ಸಾರಿಗೆ ಇಲಾಖೆ ಮತ್ತು ಪೋಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 32 ನೆಯ ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ವಾಹನ ಚಾಲಕ ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡು ವಾಹನ ಓಡಿಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವವರು ಯಾರೂ ಕಾಯ್ದೆಯ ಹೊಸ ಸ್ವರೂಪದ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ದಂಡ ಎಷ್ಟು ಹೆಚ್ಚಾದರೂ ಅವರಿಗೆ ಚಿಂತೆಯಿಲ್ಲ. ಆದರೆ, ಕೆಲವರಿಗೆ ವಾಹನಗಳನ್ನು ಮಿತಿಮೀರಿದ ವೇಗದಲ್ಲಿ ಹಾಗೂ ಬೇಕಾಬಿಟ್ಟಿ ಓಡಿಸುವುದು ಒಂದು ಬಗೆಯ ಖಯಾಲಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದು, ದ್ವಿಚಕ್ರ ವಾಹನದ ಮೇಲೆ 34 ಮಂದಿ ಸವಾರಿ ಮಾಡುವುದು ಇಂತಹವು ನಿತ್ಯ ಕಾಣಸಿಗುವ ನೋಟಗಳು. ಹಿಂದೆ ಬರುವ ವಾಹನಗಳ ಮೇಲೆ ನಿಗಾ ಇಡಲು ತಮ್ಮ ವಾಹನದಲ್ಲಿ ಕನ್ನಡಿ ಇರಬೇಕು ಎನ್ನುವ ಸಾಮಾನ್ಯ ಜ್ಞಾನ ಇರುವುದಿಲ್ಲ. ಸಂಜ್ಞೆಗಳನ್ನು ತೋರದೆ ಬೇಕೆಂದಾಗ, ಬೇಕೆಂದಲ್ಲಿ ವಾಹನವನ್ನು ತಿರುಗಿಸಬಾರದು. ಮುಂದಿರುವ ವಾಹನದಿಂದ ಸುರಕ್ಷಿತ ಅಂತರದಲ್ಲಿ ತಮ್ಮ ವಾಹನವನ್ನು ನಿಲ್ಲಿಸಬೇಕು. ಇಲಾಖೆ ಹಲವು ಕಾಯ್ದೆಯನ್ನು ರೂಪಿಸಿರುವುದು ಅಪಘಾತಗಳನ್ನು ತಡೆಗಟ್ಟುವ ಸಲುವಾಗಿಯೇ ವಿನಾ ಜನರನ್ನು ಶಿಕ್ಷಿಸುವ ಉದ್ದೇಶದಿಂದಲ್ಲ. ಆದರೆ, ನಿಯಮ ಇರುವುದೇ ಉಲ್ಲಂಘಿಸುವುದಕ್ಕಾಗಿ ಎನ್ನುವಂತಹ ಮನೋಭಾವದ ಜನರಿಗೆ ಹೊಸ ನಿಯಮ ಕಳವಳ ಉಂಟುಮಾಡಿದೆ ಎಂದರು.

ನಮ್ಮ ಹಾಗೂ ನಮ್ಮಂತೆಯೇ ರಸ್ತೆಯ ಮೇಲೆ ಪ್ರಯಾಣಿಸುವ ಇತರರ ಸುರಕ್ಷತೆಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಂಬುದನ್ನು ಎಲ್ಲರೂ ಅರಿತರೆ ಹೊಸ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ಪೊಲೀಸರೂ ಅಷ್ಟೇ ಹೆಚ್ಚಿನ ದಂಡ ಶೇಖರಣೆಯನ್ನೇ ಆದ್ಯತೆಯನ್ನಾಗಿ ಪರಿಗಣಿಸದೆ ಸುಗಮ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ರೂಪಿಸುವ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ದಂಢದ ಭಯದಿಂದಲೇ ಅಪಘಾತಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗದು. ಬಹುಪಾಲು ಅಪಘಾತಗಳಿಗೆ ಪ್ರಮುಖ ಕಾರಣ ಚಾಲಕರಾದರೂ ರಸ್ತೆ ನಿರ್ವಹಣೆಯಲ್ಲಿನ ಲೋಪಗಳ ಪಾತ್ರವೂ ಇರುವುದನ್ನು ಅಲ್ಲಗಳೆಯಲಾಗದು. ರಸ್ತೆ ವಿನ್ಯಾಸ ಮತ್ತು ನಿರ್ವಹಣೆಯಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸವನ್ನೂ ಸರ್ಕಾರ ಆದ್ಯತೆಯಿಂದ ಮಾಡಬೇಕು. ಮಾಡುತ್ತದೆ ಹೆಲ್ಮೆಟ್, ಸೀಟ್ ಬೆಲ್ಟ್‌ನಂತಹ ಸುರಕ್ಷಾ ಸಾಧನಗಳ ಬಳಕೆಯ ಮಹತ್ವವನ್ನು ಜನರಿಗೆ ಮನದಟ್ಟು ಮಾಡಿಸಬೇಕು. ದಂಡ ಹೆಚ್ಚಿಸುವಲ್ಲಿ ತೋರಿದ ಉತ್ಸಾಹವನ್ನು ಜಾಗೃತಿ ಮೂಡಿಸುವಲ್ಲಿಯೂ ತೋರಿಸಬೇಕು ಎಂದರು.
ಸಾರಿಗೆ ಇಲಾಖೆ ಅಧಿಕಾರಿ ಕರುಣಾಕರ ಮಾತನಾಡಿ, ಚಾಲಕ ಅಥವಾ ಬೈಕ್ ಸವಾರರ ನಿರ್ಲಕ್ಷದಿಂದ ಅಪಘಾತಗಳು ಸಂಭವಿಸುತ್ತವೆ. ಮುಖ್ಯವಾಗಿ ಪ್ರತಿಯೋಬ್ಬರು ಸಂಚಾರಿ ನಿಯಮಗಳ ಬಗ್ಗೆ ಅರಿವಿರಬೇಕು. ಸಂಚಾರ ಪಾಲನೆ ಮಾಡಬೇಕಾಗುತ್ತದೆ. ಅಪಘಾತದಿಂದ ಜೀವಕ್ಕೆ ಹಾನಿಯಾಗುವುದರ ಜೊತೆಗೆ ದಂಡ ಕಟ್ಟಬೇಕಾಗುತ್ತದೆ. ವಾಹನದ ಹಿಂಭಾಗ ಮುಂಭಾಗ ಸೂಚನ ಫಲಕ ಹಾಕಿಸಬೇಕು. ಕಡ್ಡಾಯವಾಗಿ ವಿಮೆ ಮಾಡಿಸಿರಬೇಕು, ರಸ್ತೆ ನಿಯಮ ಪಾಲಿಸಿ ಅಪಘಾತದಿಂದ ಜೀವ ರಕ್ಷಿಸಿಕೊಳ್ಳಿ ಎಂದರು.
ಈ ಸಮಯದದಲ್ಲಿ ವಾಹನ ಮಾಲಿಕ ಮತ್ತು ಚಾಲಕರು, ನಗರದ ನಾಗರಿಕರು ಪೊಲೀಸ್ ಸಿಬ್ಬಂದಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















