ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಶ್ರೀ ಮಧ್ವಾಚಾರ್ಯರು ಕನ್ನಡ ನಾಡಿನ ಹೆಮ್ಮೆಯ ಆಚಾರ್ಯರು ಹಾಗೂ ಭಾರತದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರು. ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, 37ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸುವ ಮೂಲಕ ತಮ್ಮ ಆಧ್ಯಾತ್ಮಿಕ ಚಿಂತನೆಗಳನ್ನು ಜಗತ್ತಿಗೆ ನೀಡಿದ ಮಹಾಪುರುಷರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) ಅಧ್ಯಕ್ಷ ಹಾಗೂ ಉಪನ್ಯಾಸಕ ಸುರೇಶ್ ಎನ್. ಋಗ್ವೇದಿ ಹೇಳಿದರು. ಚಾಮರಾಜನಗರ (Chamarajanagar) ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಶ್ರೀ ಮಧ್ವಾಚಾರ್ಯರ ಜಯಂತಿ ಹಾಗೂ ಕೊಡುಗೆಗಳು’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನ ಪ್ರತಿಷ್ಠಾಪನೆ ಮಾಡಿ ಅಷ್ಟಮಠಗಳನ್ನು ಸ್ಥಾಪಿಸುವ ಮೂಲಕ ಮಹತ್ವದ ಆಧ್ಯಾತ್ಮಿಕ ಪರಂಪರೆಗೆ ಅಡಿಪಾಯ ಹಾಕಿದರು. ದ್ವೈತ ಸಿದ್ಧಾಂತದ ಮೂಲಕ ಭಾರತೀಯ ತತ್ವಶಾಸ್ತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದರು ಎಂದು ತಿಳಿಸಿದರು.
37ಕ್ಕೂ ಹೆಚ್ಚು ಗ್ರಂಥಗಳ ರಚನೆ
ಮಧ್ವಾಚಾರ್ಯರು ದೇಶದ ಪವಿತ್ರ ಸ್ಥಳಗಳಾದ ಕಂಚಿ, ತಂಜಾವೂರು, ಶ್ರೀರಂಗ, ಕುಂಭಕೋಣಂ, ಮಧುರೈ, ರಾಮೇಶ್ವರಂ ಹಾಗೂ ಕನ್ಯಾಕುಮಾರಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಆಧ್ಯಾತ್ಮಿಕ ಚಿಂತನೆಗಳನ್ನು ಪಸರಿಸಿದರು ಎಂದು ಋಗ್ವೇದಿ ಹೇಳಿದರು.
ಅವರು 37ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು, ಗೀತಾಭಾಷ್ಯ, ಬ್ರಹ್ಮಸೂತ್ರ ಭಾಷ್ಯ, ಅನುಭಾಷ್ಯ ಹಾಗೂ ದ್ವಾದಶ ಸ್ತೋತ್ರ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ನೀಡಿದ್ದಾರೆ. ಪ್ರತಿ ವರ್ಷ ಅಕ್ಟೋಬರ್ 21ರಂದು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಆದೇಶ ನೀಡಿರುವ ಕರ್ನಾಟಕ ಸರ್ಕಾರಕ್ಕೆ ಅವರು ಅಭಿನಂದನೆ ಸಲ್ಲಿಸಿದರು.
ಆಚಾರ್ಯತ್ರಯರ ಕೊಡುಗೆ ಅಪಾರ
ಕಾರ್ಯಕ್ರಮ ಉದ್ಘಾಟಿಸಿದ ಡಾ. ಗುರುಕಿರಣ್ ಅವರು ಶ್ರೀ ಮಧ್ವಾಚಾರ್ಯರ ಜೀವನ ಚರಿತ್ರೆ ಹಾಗೂ ಆಧ್ಯಾತ್ಮಿಕ ಕೊಡುಗೆಗಳನ್ನು ವಿವರಿಸಿದರು.
ಮಧ್ವಾಚಾರ್ಯರ ಬಾಲ್ಯದ ಹೆಸರು ವಾಸುದೇವ. ಬಳಿಕ ಅವರು ಪೂರ್ಣಪ್ರಜ್ಞ ಹಾಗೂ ಆನಂದತೀರ್ಥ ಎಂಬ ಹೆಸರುಗಳಿಂದಲೂ ಪ್ರಸಿದ್ಧರಾದರು. ವೇದ, ಪುರಾಣ ಹಾಗೂ ಇತಿಹಾಸದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಭಾರತೀಯ ಆಧ್ಯಾತ್ಮಿಕ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಆಚಾರ್ಯತ್ರಯರಾದ ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರ ಕೊಡುಗೆ ಅಪಾರವಾಗಿದೆ. ಕರ್ನಾಟಕದ ಶೃಂಗೇರಿ, ಮೇಲುಕೋಟೆ ಹಾಗೂ ಉಡುಪಿ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಾಗಿ ಬೆಳೆಯುವಲ್ಲಿ ಈ ಪರಂಪರೆ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ದಾಸ ಸಾಹಿತ್ಯದ ಕೊಡುಗೆ ಸ್ಮರಣೆ
ಬರಹಗಾರ ಎಸ್. ಲಕ್ಷ್ಮೀನರಸಿಂಹ ಮಾತನಾಡಿ, ದಾಸ ಸಾಹಿತ್ಯ ಬೆಳೆದು ಬಂದ ಹಾದಿ ಹಾಗೂ ಕನ್ನಡ ಸಾಹಿತ್ಯಕ್ಕೆ ಅದು ನೀಡಿರುವ ಕೊಡುಗೆಗಳನ್ನು ವಿವರಿಸಿದರು.
ಕನಕದಾಸರು, ಪುರಂದರದಾಸರು ಸೇರಿದಂತೆ ಅನೇಕ ದಾಸಶ್ರೇಷ್ಠರ ಪರಂಪರೆ ಕನ್ನಡ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಕ್ಷೇತ್ರದ ಪ್ರಭೆಯನ್ನು ಮತ್ತಷ್ಟು ಬೆಳಗಿಸಿದೆ ಎಂದು ಹೇಳಿದರು.
Chamarajanagar: ವ್ಯಕ್ತಿತ್ವ ವಿಕಾಸಕ್ಕೆ ಉತ್ತಮ ತತ್ವಗಳು ಅಗತ್ಯ
ಖ್ಯಾತ ಕಲಾವಿದ ಸುರೇಶ್ ನಾಗ್ ಹರದನಹಳ್ಳಿ ಭಕ್ತಿಗೀತೆ ಗಾಯನ ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು, ಮಧ್ವಾಚಾರ್ಯರ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮ ರೂಪಿಸಿ ಅವರ ಚಿಂತನೆಗಳ ಬಗ್ಗೆ ಮಹತ್ವಪೂರ್ಣ ಗೋಷ್ಠಿಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಉತ್ತಮ ತತ್ವ ಹಾಗೂ ವಿಚಾರಗಳ ಅಗತ್ಯವಿದೆ. ಉತ್ತಮ ವಿಚಾರಗಳನ್ನು ಎಲ್ಲರಿಂದಲೂ ತಿಳಿದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಚಾಮರಾಜನಗರದ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.
Also Read>> ಬೆಂಗಳೂರು ರೈಲ್ವೆ ವಿಭಾಗದಲ್ಲಿ ವಿಚಕ್ಷಣಾ ಜಾಗೃತಿ ಸಪ್ತಾಹ 2026ಕ್ಕೆ ಚಾಲನೆ
ಮಧ್ವ ಜಯಂತಿ ಸಂದೇಶ ವಾಚನ
ಅಖಿಲ ಕರ್ನಾಟಕ ಮಧ್ವ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಮೋಹನ್ ಅವರ ಮಧ್ವ ಜಯಂತಿ ಸಂದೇಶವನ್ನು ಸಭೆಯಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯ ಪದ್ಮ ಪುರುಷೋತ್ತಮ್, ಪ್ರಫುಲ್ಲ, ತಮಿಳು ಸಂಘದ ಜಗದೀಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್. ಶಿವಲಿಂಗಮೂರ್ತಿ, ರವಿಚಂದ್ರ ಪ್ರಸಾದ್, ಸರಸ್ವತಿ, ಮಲ್ಲಣ್ಣ, ಮಂಜುನಾಥ್, ನಾಗೇಶ್, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









