ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ರಾಷ್ಟ್ರ ಹಾಗೂ ಧರ್ಮದ ನಿಷ್ಠೆ ಹಾಗೂ ಭಕ್ತಿಗೆ ವೀರಮದಕರಿ ನಾಯಕರು ಮಾದರಿಯಾಗಿದ್ದು, ಇತಿಹಾಸದಲ್ಲಿ ನಾಯಕರು ಅಮರರು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಚಿತ್ರದುರ್ಗದ ವೀರ ಮದಕರಿ ನಾಯಕರ ಜನ್ಮದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲೇ ಚಿತ್ರದುರ್ಗದ ಕೋಟೆ ವಿಶೇಷ ಇತಿಹಾಸವನ್ನು ಹೊಂದಿರುವ ಮಹಾ ಕೋಟೆ . ನಿಸರ್ಗದ ಮಡಿಲಿನಲ್ಲಿ ಸುಂದರವಾಗಿ, ಶಿಸ್ತು ಬದ್ಧವಾಗಿ, ರಕ್ಷಣಾತ್ಮಕವಾಗಿ ರೂಪಿಸಿರುವ ಏಳು ಸುತ್ತಿನ ಕೋಟೆಯು ದೇಶದ ರಕ್ಷಣಾ ವ್ಯವಸ್ಥೆಗೆ ಮಾದರಿಯಾಗಿದೆ.
ಶ್ರೀರಂಗಪಟ್ಟಣದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಿರುದ್ಧ ಹೋರಾಟ ನಡೆಸಿದ ಕೆಚ್ಚೆದೆಯ ವೀರ ಮದಕರಿ ನಾಯಕರು ಪ್ರಾಣವನ್ನು ಲೆಕ್ಕಿಸದೆ ಧರ್ಮ ನಿಷ್ಠೆಯನ್ನು ರಾಷ್ಟ್ರ ನಿಷ್ಠೆಯನ್ನು ಪ್ರದರ್ಶಿಸಿ ವೀರಮರಣವನ್ನು ಅಪ್ಪಿದ ಮದಕರಿ ನಾಯಕರನ್ನು ನಾವೆಲ್ಲರೂ ಸದಾ ಕಾಲ ಸ್ಮರಿಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ರಾಷ್ಟ್ರಭಕ್ತನು ಚಿತ್ರದುರ್ಗಕ್ಕೆ ಭೇಟಿ ನೀಡಿ ಇತಿಹಾಸವನ್ನು ತಿಳಿಯುವಂತಹ ಕಾರ್ಯ ಮಾಡಬೇಕು. ಮದಕರಿನಾಯಕರಂತಹ ರಾಜರುಗಳನ್ನು ಸದಾ ಕಾಲ ಸ್ಮರಿಸಿಕೊಳ್ಳುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ನೆರವೇರಿಸಿಕೊಂಡು ಬರುತ್ತದೆ ಎಂದು ತಿಳಿಸಿದರು.
ಮುಖಂಡರು ಹಾಗೂ ಪ್ರಸಿದ್ಧ ಜನಪದ ಗಾಯಕರು ಆದ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವೀರ ಮದಕರಿ ನಾಯಕರ ಇತಿಹಾಸ ಕುರಿತು ಚಿಂತನ ಕಾರ್ಯಕ್ರಮ ರೂಪಿಸಿರುವ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳು ಅರ್ಪಿಸಿ, ವೀರಮದಕರಿ ನಾಯಕರು ಸ್ವಾಭಿಮಾನ, ದೇಶಾಭಿಮಾನ ಹಾಗೂ ಧೈರ್ಯಕ್ಕೆ ಮತ್ತೊಂದು ಹೆಸರು. ಬಂಧನದಲ್ಲಿಟ್ಟು ಕ್ರೂರವಾಗಿ ನಡೆಸಿಕೊಂಡ ಹೈದರಾಲಿ ಸಂಸ್ಥಾನಕ್ಕೆ ಹೆದರದೆ ಧರ್ಮ ತ್ಯಜಿಸದೆ, ವೀರ ಸ್ವರ್ಗ ಹೊಂದಿದ ಮದಕರಿ ನಾಯಕರು ನಮ್ಮೆ ಹೆಮ್ಮೆ ಎಂದರು.
ಬರಹಗಾರ ಲಕ್ಷ್ಮೀ ನರಸಿಂಹ ಮಾತನಾಡಿ, ತ.ರಾ. ಸುಬ್ಬರಾಯರ ದುರ್ಗಾಸ್ತಮಾನ ಕಾದಂಬರಿ ಹಾಗೂ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ಚಿತ್ರದುರ್ಗದ ಇತಿಹಾಸವನ್ನು ಜಗತ್ತಿಗೆ ಮಾಧ್ಯಮದ ಮೂಲಕ ತೋರಿಸಿದವರು. ತರಾಸುರವರ ದುರ್ಗಾಸ್ತಮಾನ ಕೃತಿ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ಮದಕರಿ ನಾಯಕರ ಜೀವನ ಮತ್ತು ಹೋರಾಟ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮೆಚ್ಚುವಂತಹುದು ಎಂದರು.
ದೇಶಭಕ್ತಿ ಗೀತೆಯನ್ನು ಹಾಗೂ ಕನ್ನಡದ ಸಂಸ್ಕೃತಿ ಪರಂಪರೆ ಸಾರುವ ಗೀತೆಯನ್ನು ಸುರೇಶ್ ನಾಗ್ ಹರದನಹಳ್ಳಿ, ಮೇಗಲ ಹುಂಡಿ ರಾಜು, ಸಜ್ಜೀವನ್ ಮೂರ್ತಿ ಹೇಳಿ ಮೆಚ್ಚುಗೆ ಗಳಿಸಿದರು.
ಕನ್ನಡ ಚಳುವಳಿಗಾರ ರಾಜಗೋಪಾಲ್, ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಸರಸ್ವತಿ, ಪದ್ಮ ಪುರುಷೋತ್ತಮ್, ಗೋವಿಂದರಾಜು, ಮಾಲಿನಿ, ಮೂರ್ತಿ, ರಾಜು, ಕಾರ್ ಕುಮಾರ್, ನಾಗೇಶ್ ಮಕ್ಕಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post