ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ನಮಗೆ ದೂಳು ಉಣಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಗಣಿ ದಣಿಗಳಿಂದ ನಮ್ಮ ಬದುಕು ಮುರಾಬಟ್ಟೆಯಾಗಿದೆ. ಅವರ ಅವಧಿಯನ್ನು ಪರಿಶೀಲಿಸಿ ಹೊರಗೆ ಹಾಕಿ ಎಂದು ಚಂದ್ರಗುತ್ತಿ ಬಸ್ತಿಕೊಪ್ಪ ಗ್ರಾಮಸ್ಥರು ಉಪವಿಭಾಗಾಧಿಕಾರಿ, ಅರಣ್ಯಾಧಿಕಾರಿಗಳ ಎದುರು ತಮ್ಮ ಸಂಕಷ್ಟವನ್ನು ತೋಡಿ ಕೊಂಡರು.
ಸಾಗರದ ಎಸಿ ಕಛೇರಿ ಹಾಗೂ ಡಿಎಫ್ಒ ಕಛೇರಿಗೆ ಭೇಟಿ ನೀಡಿ ಗಣಿ ಸ್ಥಗಿತಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದರು.
ಗಣಿ ಕಾನೂನು ಕಟ್ಟಳೆ ಉಲ್ಲಂಘಿಸಿ ಗಣಿ ಕೆಲಸ ನಡೆಯುತ್ತಿದ್ದು, ಗ್ರಾಮಸ್ಥರು ಗಣಿಯ ಅರ್ಭಟ ಸಹಿಸಿಕೊಳ್ಳುವ ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ದೀಪ, ನೀರು ಕೊನೆಗೆ ಶುದ್ಧ ಗಾಳಿಯಿಂದಲೂ ವಂಚಿತರಾಗಿದ್ದೇವೆ. ನಿರಂತರ ಗಣಿ ನಿಯಮ ಮೀರಿ ಸ್ಫೋಟಕ ಬಳಕೆ, ಅನಿಯಮಿತ ಭಾರೀ ವಾಹನಗಳ ಓಡಾಟ, ಶಬ್ಧಮಾಲಿನ್ಯ, ವಾಯುಮಾಲಿನ್ಯ ಎಲ್ಲವನ್ನು ಸಹಿಸಿಕೊಂಡು ಬಂದುದರ ಫಲವಾಗಿ ಸಾಂಕ್ರಾಮಿಕ ಉಸಿರಾಟದ ಕಾಯಿಲೆ ನಮಗೆ ಬಳುವಳಿಯಾಗಿ ಸಿಕ್ಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೇ ಇವರು ಅಧಿಕೃತವೋ ಅನಧಿಕೃತವೊ ಪರಿಶೀಲಿಸಿ, ಪುನಃ ಗಣಿ ಅನುಮತಿ ನೀಡಬೇಡಿ, ಅಭಿವೃದ್ಧಿ ಹೆಸರಲ್ಲಿ ಜನಸಾಮಾನ್ಯರ ಬದುಕಿಗೆ ಮಾರಕವಾಗಬೇಡಿ ಎಂದು ಕೋರಿದರು.
ದಾಖಲೆ, ಸ್ಥಳ ಪರಿಶೀಲಿಸಿ ಕ್ರಮಕ್ಕೆ ಮುಂದಾಗುವುದಾಗಿ ಅಧಿಕಾರಿಗಳು ಉತ್ತರಿಸಿದರು.
ಗ್ರಾಮದ ಮಂಜುನಾಥ ಎಸ್. ನಾಯ್ಕ್, ಕಾರ್ತಿಕ್ ಇ. ನಾಯ್ಕ್, ಉಮೇಶ ಕೆ. ನಾಯ್ಕ್, ನಾಗರಾಜ ಕೆ. ನಾಯ್ಕ್ ಮೊದಲಾದವರು, ವೃಕ್ಷಲಕ್ಷ ಆಂದೋಲನದ ಅನಂತಹೆಗಡೆ ಅಶಿಸರ, ಕೆ.ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ಗಂಗಾಧರ ಹೊಳೆಮರೂರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















