ಕಲ್ಪ ಮೀಡಿಯಾ ಹೌಸ್ | ಚನ್ನಗಿರಿ |
ತಾಲೂಕಿನ ಸೂಳೆಕೆರೆ ಹಾಗೂ ಸಂತೆ ಬೆನ್ನೂರು ಪ್ರದೇಶದಲ್ಲಿ ಪುಂಡಾಟ ನಡೆಸಿ ಯುವತಿಯೊಬ್ಬಳನ್ನು ತುಳಿದು ಸಾಯಿಸಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಈ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಒಂಟಿ ಸಲಗ ಪುಂಡಾಟ ನಡೆಸಿ, ಯುವತಿಯೊಬ್ಬಳನ್ನು ತುಳಿದು ಸಾಯಿಸಿತ್ತು. ಈ ಆನೆಯ ಸೆರೆಗೆ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್ ಹಾಗೂ ಅರಣ್ಯ ಇಲಾಖೆ ತಂಡ ಸತತವಾಗಿ ಶ್ರಮಿಸಿತ್ತು.
ಇಂದು ಅವಳಿ ತಾಲೂಕಿನ ಜೀನಹಳ್ಳಿ-ಕೆಂಚಿಕೊಪ್ಪ ಬಳಿ ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ.
ಮೂರು ದಿನಗಳಿಂದ ಸೂಳೆಕೆರೆಯ ಸುತ್ತಮುತ್ತ ಕಾಡಾನೆಯನ್ನು ಸೆರೆಹಿಡಿಯಲು ಶಿವಮೊಗ್ಗ-ಭದ್ರಾವತಿ- ಚನ್ನಗಿರಿ-ಹೊನ್ನಾಳಿಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆನೆಯ ಲದ್ದಿಯನ್ನು ಪತ್ತೆಮಾಡಿ ಅದರ ಸುಳಿವನ್ನು ಪತ್ತೆ ಹಚ್ಚಲಾಗಿತ್ತು. ಇದೇ ವೇಳೆ ಅರವಳಿಕೆ ನೀಡುವ ವೇಳೆ ಆನೆಯು ಡಾ.ವಿನಯ್ ಅವರ ಮೇಲೆ ದಾಳಿ ನಡೆಸಿತ್ತು.
Also read: ಚುನಾವಣಾ ಚೆಕ್ ಪೋಸ್ಟ್: ಶಿವಮೊಗ್ಗ, ಶಿಕಾರಿಪುರ, ಭದ್ರಾವತಿಯಲ್ಲಿ ಭಾರೀ ಪ್ರಮಾಣದ ನಗದು ವಶ
ವೈದ್ಯರ ಮೇಲೆ ದಾಳಿ ಮಾಡಿದ್ದು ಹೇಗೆ?
ಇಂದು ಮುಂಜಾನೆ ಒಂಟಿ ಸಲಗ ಸೂಳೆಕೆರೆ ಬಳಿ ಕಾಡಿನಲ್ಲಿ ಪತ್ತೆಯಾಗಿತ್ತು. ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಸಹ ವೈದ್ಯರೊಬ್ಬರು ಆನೆಗೆ ಅರವಳಿಕೆ ಚುಚ್ಚುಮದ್ದನ್ನು ಡಾರ್ಟ್ ಮಾಡಿದ್ದರು. ಆನೆಯು ಸಹ ಅರವಳಿಕೆ ಚುಚ್ಚುಮದ್ದಿನ ಪರಿಣಾಮವಾಗಿ ನೆಲಕ್ಕುರುಳಿತ್ತು. ಇದನ್ನು ಗಮನಿಸಿ ಸಿಬ್ಬಂದಿ ಆನೆಯ ಬಳಿಗೆ ಹೋದ ವೇಳೆ ನೆಲಕ್ಕುರುಳಿದ್ದ ಆನೆ ಏಕಾಏಕಿ ಎದ್ದು ಡಾ.ವಿನಯ್ ಅವರ ಮೇಲೆ ದಾಳಿಗೆ ಮುಂದಾಗಿದೆ.
ಇದರಿಂದ ಎಚ್ಚೆತ್ತ ಡಾ.ವಿನಯ್ ಅವರು ಓಡುವ ವೇಳೆ ಆಯತಪ್ಪಿ ಬಿದ್ದಿದ್ದು, ಇವರ ಮೇಲೆ ದಾಳಿ ನಡೆಸಿದೆ. ಇದರಿಂದ ಎಚ್ಚೆತ್ತ ಸಿಬ್ಬಂದಿ ಕೂಗಿದ್ದು ಇದರಿಂದ ಆನೆ ಅವರನ್ನು ಬಿಟ್ಟು ಓಡಿದೆ.
ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಡಾ.ವಿನಯ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post