ಅದು ಮಲೆನಾಡಿನಿಂದ ಬಯಲುಸೀಮೆಗೆ ಸಂಪರ್ಕಿಸುವ ಪ್ರದೇಶ. ಅಡಿಕೆಯ ನಾಡು ಚನ್ನಗಿರಿ. ಇಂತಹ ಸ್ಥಳದಲ್ಲೇ ಕಲಿಯುಗ ಕಾಮಧೇನು ರಾಯರು ನೆಲೆಸಿದ್ದು ಪಂಚಮ ಮಂತ್ರಾಲಯ ಎಂದೇ ಖ್ಯಾತವಾಗಿದೆ. ಇಂತಹ ಕ್ಷೇತ್ರದ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಬನ್ನಿ.
ಚನ್ನಗಿರಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನ ಸ್ಥಾಪನೆಯ ಸಂಗತಿ ಅತ್ಯಂತ ಗಹನವಾಗಿದೆ. ಆಸ್ತಿಕರಿಗೆ ಮಹಿಮಾ ಪ್ರದಾಯಕ, ಪವಾಡ ಸದೃಶ ಭಾಸವಾಗುತ್ತದೆ.
ಚನ್ನಗಿರಿಯ ಶಾನುಭೋಗರಾದ ದೊಡ್ಡ ನರಸಪ್ಪ ಮತ್ತು ವೇದಮೂರ್ತಿಗಳಾದ ಸ್ವಾಮಿರಾಯಾಚಾರ್ಯರ ಗೆಳೆತನ ಮತ್ತು ಅಧ್ಯಾತ್ಮಿಕ ಮನಸ್ಸುಗಳ ಸಮ್ಮಿಲದ ದ್ಯೋತಕವಾಗಿದೆ. ಈರ್ವರಿಗೂ ಒಂದೇ ರಾತ್ರಿ ಸ್ವಪ್ನದಲ್ಲಿ ರಾಯರು ಚನ್ನಗಿರಿಯಲ್ಲಿ ಬೃಂದಾವನ ರೂಪದಲ್ಲಿ ಪೂಜೆ ಸ್ವೀಕರಿದಂತೆ ಅನುಭವವಾಯಿತು. ಮಾರನೆಯ ದಿನ ಈರ್ವರೂ ತಮ್ಮ ಅನುಭವವನ್ನು ಪರಸ್ಪರ ಹೇಳಿಕೊಂಡರು.
ಸ್ವಪ್ನದ ಸಾಮ್ಯತೆ ಅವರಿಗೆ ಚನ್ನಗಿರಿಯಲ್ಲಿ ಬೃಂದಾವನ ಸ್ಥಾಪನೆಗೆ ನಾಂದಿಯಾಯಿತು. ಅದರ ಫಲವಾಗಿ ಶಿಲೆಯಲ್ಲಿ ಬೃಂದಾವನ ಕೆತ್ತಲು ಶಿಲ್ಪಿಯನ್ನು ಕಂಡರು. ಸಮೀಪದ ಅಜ್ಜಿಹಳ್ಳಿಯ ಶಿಲ್ಪಿ ನಂಜಾಚಾರಿ ಮೊದಲಿಗೆ ತುಸು ಅಸಡ್ಡೆ ತೋರಿಸಿದನಂತೆ. ಅದರ ಫಲವಾಗಿ ಆತನ ಕಣ್ಣೆರಡೂ ಕಾಣಿಸದೇ ಕುರುಡನಾದ. ಶ್ರೀರಾಯರನ್ನು ಮೊರೆಹೋಗು ಎಂದು ಆಪ್ತರು ಸೂಚಿಸಿದರು. ಶ್ರೀರಾಯರನ್ನು ಬೇಡಿಕೊಂಡ. ಚನ್ನಗಿರಿಯಲ್ಲಿ ಬೃಂದಾವನ ಕೆತ್ತಿ ಕೊಡುವೆ ಎಂದು ಸಂಕಲ್ಪವೇನೋ ಮಾಡಿದ. ಆದರೆ ದೃಷ್ಟಿಯೇ ಇಲ್ಲದೆ ಶಿಲೆಯ ಕೆಲಸ ಮಾಡುವುದು ಹೇಗೆ? ಕೊನೆಗೆ ಶ್ರೀರಾಯರ ಮೊರೆ ಹೋದ.
ರಾಯರೇ ಅವನಿಗೆ ಅಭಯ ನೀಡಿ ಕೆತ್ತುವ ಸ್ಥಳ ಮಾತ್ರ ಕಾಣಿಸುತ್ತದೆ. ತಾವು ಅವನಿಗೆ ಹೇಗೆ ಉಳಿಯಾಡಿಸಬೇಕೆಂದು ಮಾರ್ಗದರ್ಶನ ನೀಡುವುದಾಗಿ ಸ್ವಪ್ನದಲ್ಲಿ ಹೇಳಿದರು. ಅದರಂತೆ ಬೃಂದಾವನದ ನಿರ್ಮಾಣ ಕಾರ್ಯ ಶುರುವಾಯಿತು.
ಕ್ರಮೇಣ ಶಿಲ್ಪಿ ನಂಜಾಚಾರಿ ಕೆತ್ತನೆ ಮುಗಿಸಿದ ನಂತರ ಅ್ವನಿಗೆ ಗುರುಗಳು ದೃಷ್ಟಿಭಾಗ್ಯ ನೀಡುತ್ತಾರೆ. ಸುಂದರವಾದ ಬೃಂದಾವನ ್ಕಂಡು ಅವನ ಶಿಲ್ಪಿತನ ಬೆರಗಾಗುವಂತೆ ಮಾಡುತ್ತದೆ.
ಚನ್ನಗಿರಿಯ ಭಕ್ತರೆಲ್ಲರೂ ಮಂತ್ರಾಲಯಕ್ಕೆ ಮೃತ್ತಿಕೆ ತರಲು ಪ್ರಯಾಣ ಮಾಡುತ್ತಾರೆ. ಮಂತ್ರಾಲಯದಲ್ಲಿ ಶ್ರೀವರದೇಂದ್ರ ತೀರ್ಥರು ಪೀಠಾಧಿಪತಿಗಳು. ಶ್ರೀರಾಯರ ಸ್ವಪ್ನ ವೃತ್ತಾಂತವನ್ನು ತಮ್ಮ ತಪೋ ಮಹಿಮೆಯಿಂದ ಅರಿಯುತ್ತಾರೆ.
ಎಲ್ಲಕ್ಕಿಂತ ಪ್ರಥಮ ಪ್ರಾಶಸ್ತ್ಯ ನೀಡಿ ಭಕ್ತ ವೃಂದವನ್ನು ಆದರಿಂದ ಬರಮಾಡಿಕೊಳ್ಳುತ್ತಾರೆ. ಶ್ರೀರಾಯರ ಬೃಂದಾವನದ ಮೃತ್ತಿಕೆಯನ್ನು ಆಶೀರ್ವಾದಪೂರ್ವಕವಾಗಿ ನೀಡುತ್ತಾರೆ.
ಭಕ್ತವೃಂದ ಶ್ರೀವರದೇಂದ್ರರಿಗೆ ಆಮಂತ್ರಣ ನೀಡಿ ಚನ್ನಗಿರಿಗೆ ಆಗಮಿಸಿ ಶ್ರೀರಾಯರ ಮೃತ್ತಿಕಾ ಬೃಂದಾವನ ಪ್ರತಿಸ್ಠಾಪನೆ ನೆರವೇರಿಸಲು ಪ್ರಾರ್ಥಿಸುತ್ತಾರೆ. ತಾ.6-2-1783 ರಂದು ಅಂದರೆ ಶುಭಕೃತ್ ಸಂವತ್ಸರದ ಮಾಘಮಾಸದ ಶುದ್ಧ ಪಂಚಮಿಯಂದು ಚನ್ನಗಿರಿಗೆ ಶ್ರೀವರದೇಂದ್ರರು ಆಗಮಿಸಿ ಪ್ರತಿಷ್ಠಾಪನೆ ನೆರವೇರಿಸುತ್ತಾರೆ.
ಹೀಗೆ ಚನ್ನಗಿರಿಯಲ್ಲಿ ಐದನೇ ಮೃತ್ತಿಕಾ ಬೃಂದಾವನ ಸ್ಥಾಪನೆಯಾಗುತ್ತದೆ. ಇಲ್ಲಿನ ಶ್ರೀರಾಯರ ಸೇವೆಗೆ ಎಲ್ಲ ಕಡೆಯಿಂದ ಭಕ್ತಾದಿಗಳು ಬರುತ್ತಾರೆ. ಭಕ್ತರು ಬೇಡಿಕೊಂಡಿದ್ದನ್ನು ಕರುಣಿಸಿದ ಉದಾಹರಣೆಗಳಿವೆ.
ಇಲ್ಲಿನ ಶಿಲ್ಪಿಯ ಕುಶಲತೆಯೆಂದರೆ ಅದು ಶ್ರೀರಾಯರೇ ತಮ್ಮ ಅಪೇಕ್ಷೆಯನುಸಾರ ಬೃಂದಾವನದ ನಾಲ್ಕೂ ಕಡೆ ಕೋದಂಡರಾಮ, ಯೋಗಾನಾರಸಿಂಹ, ಕಾಳಿಂಗಮರ್ದನ ಕೃಷ್ಣ ಮತ್ತು ವೇದವ್ಯಾಸರ ಮೂರ್ತಿಗಳನ್ನು ಕೆತ್ತಿರುವುದು. ಈ ಪ್ರಕಾರದ ಕೆತ್ತನೆ ಚನ್ನಗಿರಿಯ ಬೃಂದಾವನದಲ್ಲಿ ಮಾತ್ರ ನೋಡಲು ಸಾಧ್ಯ. ಶ್ರೀರಾಯರ ಶಿಲ್ಪಕಲಾ ವಿದ್ಯೆಗೆ ಇದು ಕನ್ನಡಿಯಿದ್ದಂತೆ.
ಇದೇ ಇಲ್ಲಿನ ವೈಶಿಷ್ಟ್ಯ!
ಚಿನ್ನದಂಥ ನನ್ನ ಚೆನ್ನ ಚನ್ನಗಿರಿಯ ಶ್ರೀರಾಘವೇಂದ್ರ ಎಂಬ ಕೀರ್ತನೆಯನ್ನು ಸೀತಾರಾಮ ವಿಠ್ಠಲರು ರಚಿಸಿ ಹಾಡಿರುವುದು ಮತ್ತೊಂದು ವಿಶೇಷ ಸಂಗತಿ.
ಪ್ರತೀವರ್ಷ ಮಾಘ ಶುದ್ಧ ಪಂಚಮಿ ಇಲ್ಲಿನ ಶಾನುಭೋಗ ಮನೆತನದವರು ವರ್ಧಂತಿಯನ್ನು ಶ್ರೀಶಾಮಣ್ಣ ಸೇವಾ ಟ್ರಸ್ಟ್ ವತಿಯಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಈ ಮುಂಚೆ ಮುಜರಾಯಿಗೆ ಸೇರಿದ್ದು ಈಗ ಶ್ರೀರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಅಭಿವೃದ್ಧಿ ಚಟುವಟಿಕೆಗಳು ನಿರಂತರ ನಡೆಯುತ್ತಿವೆ.
ಇಂತಹ ಪಂಚಮ ಮಂತ್ರಾಲಯ ಚನ್ನಗಿರಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಯರ ಆರಾಧನಾ ವಿಶೇಷವಾಗಿ ಭಕ್ತರಿಂದ ಅಭಿಷೇಕ ಪೂಜಾದಿಗಳು ನಡೆದವು. ಆಗಸ್ಟ್ 18 ಭಾನುವಾರ ಶ್ರೀರಾಯರ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಶ್ರೀರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷ ಶ್ರೀಕೃಷ್ಣ ಉಪಾಧ್ಯ ಅವರ ನೇತೃತ್ವದಲ್ಲಿ ನಾಲ್ಕುದಿನಗಳ ಆರಾಧನಾ ಮಹೋತ್ಸವ ಅತ್ಯಂತ ವೈಭವದಿಂದ ನಡೆಯಿತು.
ಲೇಖನ: ಡಾ.ಸುಧೀಂದ್ರ
Discussion about this post