ಆದಿತ್ಯಾದಿ ನವಗ್ರಹರಿಗೆ ವೀಕ್ಷಣೆಗಳಿದ್ದಂತೆ, ಕುಂಡಲಿಯಲ್ಲಿ ಭಾವಗಳ ವೀಕ್ಷಣೆಗೂ ಬಹಳ ಮಹತ್ವ ಇದೆ. ಕೇವಲ ಅಲ್ಲಿ ಆ ಗ್ರಹ ಇದ್ದಾನೆ. ಅವ ಇವನನ್ನು ನೋಡುತ್ತಾನೆ ಎಂದು ಹೇಳುವುದಲ್ಲ. ಭಾವ ವೀಕ್ಷಣೆಯೂ ಬಲಿಷ್ಟ. ಒಂದು ಲಗ್ನದಿಂದ ಹನ್ನೆರಡು ಭಾವಗಳವರೆಗೆ ವ್ಯಕ್ತಿಯ ಪೂರ್ಣ ಚಿತ್ರಣಗಳಿರುತ್ತದೆ. ಭಾವ ಎಂದರೆ ನಮ್ಮ ಆಡುಭಾಷೆಯ ಮನೆಗಳು. ಒಂದನೆ ಮನೆ, ಎರಡನೆಯ ಮನೆ.. ಇತ್ಯಾದಿ
ಉದಾಹರಣೆಗೆ ಸಿಂಹ ರಾಶಿಯವರಿಗೆ ಪಂಚಮ ಭಾವ ಧನುಸ್ಸು ರಾಶಿ. ಈ ಧನುಸ್ಸು ರಾಶಿ ವೀಕ್ಷಣೆ ಮಾಡುವುದು(ಸಪ್ತಮ ಪೂರ್ಣ ವೀಕ್ಷಣೆ) ಮಿಥುನ ರಾಶಿಯನ್ನು. ಇದು ಸಿಂಹ ರಾಶಿಗೆ ಏಕಾದಶ ಸ್ಥಾನ. ಈ ಸ್ಥಾನವು ಕೀರ್ತಿ, ಸನ್ಮಾನ, ಅಧಿಕಾರ ಪಧವಿ, ಜ್ಯೇಷ್ಠತೆ ಇತ್ಯಾದಿ ನೀಡುವ ಕ್ಷೇತ್ರ. ಪಂಚಮವು ಸಂತಾನ, ವಿದ್ಯೆ, ಉತ್ಪತ್ತಿ, ಹೃದಯ, ಉಪಾಸನೆಯ ಸೂಚಕವಾಗುತ್ತದೆ. ಪಂಚಮ ಧನು ರಾಶಿಯಾದಾಗ ಇದು ಅಗ್ನಿತತ್ವ ರಾಶಿಯಾಗಿ ಇದೇ ಫಲಗಳನ್ನು ಪ್ರತಾಪ ರೂಪದಿಂದ ನೀಡುತ್ತದೆ. ಈ ಭಾವಗಳ ಫಲ ಉತ್ಪತ್ತಿಯನ್ನು ನೀಡುವವನೇ ಗುರು. ಬೇರೆ ಬೇರೆ ಗ್ರಹರು ಬೇರೆ ಶಕ್ತಿಗಳನ್ನಷ್ಟೇ ಉತ್ಪತ್ತಿ ಮಾಡುತ್ತಾರೆ. ಆದರೆ ಅವೆಲ್ಲ ಶಕ್ತಿಗಳ ಫಲ ನೀಡುವವನು ಗುರು ಮಾತ್ರ.
ಈ ಫಲಗಳು ಬೇರೆ ಬೇರೆ ಗ್ರಹರ ಗೋಚರ, ದಶಾಭುಕ್ತಿಗಳು, ಜಾತಕದ ಯೋಗಾಯೋಗಗಳ ಆಧಾರದಲ್ಲಿ ಇರುತ್ತದೆ. ಉದಾಹರಣೆಗೆ ಪಂಚಮವು ಸುತ ಸ್ಥಾನ ಆಗಿದ್ದರೂ, ಮಕ್ಕಳ ಯೋಗವೇ ಕುಂಡಲಿಯಲ್ಲಿ ಸೂಚಿಸದಿದ್ದಾಗ ಗುರು ಆ ಸ್ಥಾನಕ್ಕೆ ಬಂದಾಗ ಪುತ್ರಯೋಗ ನೀಡಲಾರ. ಯಾವುದೋ ಒಂದು ಮಗುವಿನ ಬಗ್ಗೆ ಪ್ರೀತಿಯನ್ನು ಕೊಡಬಹುದು. ಸಿಂಹರಾಶಿ ಜನಿತ ಮುದುಕ ಮುದುಕಿಯರಿಗೂ ಗುರು ಪಂಚಮಕ್ಕೆ ಬಂದಾಗ ಸಂತಾನ ಆಗುತ್ತದೆ ಎಂದು ಹೇಳುವುದು ಸರಿಯಾಗುತ್ತದೆಯೇ? ಅಲ್ಲಿ ಆ ಸ್ಥಾನವು ಕೇವಲ ಮಕ್ಕಳಾಗುತ್ತದೆ ಎಂಬುದಕ್ಕಲ್ಲ. ಅದೊಂದು ಉತ್ಪತ್ತಿ ಸ್ಥಾನವಷ್ಟೆ. ನಮ್ಮ ಯೋಗಕ್ಕನುಸಾರವಾಗಿ ಉತ್ಪತ್ತಿಯಾಗುತ್ತದೆ.
ಈಗ ಗುರುವಿನ ಧನು ರಾಶಿ ಸಂಚಾರದವ ಫಲ ಹೇಗಿದೆ ನೋಡೋಣ.
29.3.2019 ಬೆಳಗಿನ ಜಾವ ಧನುರಾಶಿ ಪ್ರವೇಶಿಸಿದ ಗುರುವು ಕೆಲವೇ ದಿನಗಳಲ್ಲಿ(ಇನ್ನೂ ಒಂದು ಡಿಗ್ರಿ ಕ್ರಮಿಸುವ ಮೊದಲೇ) ಮತ್ತೆ U TURN ತೆಗೆದುಕೊಂಡು 23.4.2019 ಕ್ಕೆ ಮತ್ತೆ ವೃಶ್ಚಿಕ ರಾಶಿಗೆ ಬರುತ್ತಾನೆ. ಅಲ್ಲಿ ಮತ್ತೆ 4.11.2019 ರ ವರೆಗಿದ್ದು Nov 5 ತಾರೀಕಿಗೆ ಮತ್ತೆ ಧನುರಾಶಿ ಪ್ರವೇಶ. ಸುಮಾರು ಹತ್ತು ಡಿಗ್ರಿ ವೃಶ್ಚಿಕಕ್ಕೆ ಕೇವಲ ನಾಲ್ಕು ತಿಂಗಳಲ್ಲಿ ಹಿಂದೆ ಬರುತ್ತಾನೆ. ಧನು ರಾಶಿಯ 30° ದೂರವನ್ನು ಕೇವಲ 4 ತಿಂಗಳಲ್ಲಿ ಅತ್ಯಂತ ವೇಗವಾಗಿ ಮುಗಿಸಿ 29.3.2020 ಕ್ಕೆ ಮಕರಕ್ಕೆ ಬರುತ್ತಾನೆ.
ಇದೊಂದು ರೀತಿಯ ಘನ ವಾಹನವನ್ನು ಹಿಂದೆ ಮುಂದೆ, U turn ಮಾಡುತ್ತಾ ಸಾಗುವಂತಾಗುತ್ತದೆ. ಇದನ್ನೇ ಅತಿಚಾರ ಫಲ ಎನ್ನುವುದು. ಇಷ್ಟು ದೊಡ್ಡ ಗಾತ್ರದ, ಭಾವೋತ್ಪತ್ತಿ ಕಾರಕ ಗುರುವು, ನೈಸರ್ಗಿಕ ಮೇಷ ಲಗ್ನದ ಭಾಗ್ಯಸ್ಥಾನವಾದ, ತನ್ನ ಮೂಲ ತ್ರಿಕೋಣದಲ್ಲಿ ಅತಿಚಾರದಲ್ಲಿ ಸಂಚರಿಸಿದ ಪರಿಣಾಮಗಳು, ಭೂಮಿ ಮತ್ತು ಭೂಮಿಯ ಸಕಲ ಚರಾಚರಗಳ ಮೇಲೆ ಪರಿಣಾಮ ಯಾವ ರೀತಿಯಲ್ಲಿ ಬೀರಬಹುದು ಯೋಚಿಸಿ. ಗರ್ಭಿಣಿಯರು Premature Baby, ಸಂತಾನ ನಷ್ಟ, ಅತಿಮಾನುಷ ಬುದ್ಧಿಯ ಮಕ್ಕಳ ಜನನವನ್ನು ಸೂಚಿಸುತ್ತದೆ. ಸ್ವರೂಪಗಳು ಅವರವರ ಜಾತಕದ ಆಧಾರದಲ್ಲಿರುತ್ತದೆ.
ಇನ್ನೊಂದೆಡೆ ಈ ವರೆಗೆ ಅಂದರೆ ಗುರುವು ಕ್ರಮಿಸಿದ ಭಾವಗಳಿಗೆ ಒಂದು Final Judgement ನೀಡುವ ಕಾಲ. ಗುರು ಶನಿ ಯೋಗ, ಗುರು ಕೇತು ಯೋಗ, ಶನಿ ಕೇತು ಯೋಗಗಳು ವಿಪರೀತ ಕ್ರಿಯೆ ಮಾಡುತ್ತದೆ. ಕೇತುವಿನಿಂದ ವೇದ ವಿರೋಧಿಯವನರ ಚಿಂತನೆ ಮಾಡುತ್ತಾರೆ. ಅಂದರೆ ಮತಾಂಧರ ಅಹಂಕಾರ ಒಂದೆಡೆ ಏರುವುದೂ, ಇನ್ನೊಂದೆಡೆ ಅವರ ಸಂಹಾರವೂ ಆಗಲಿದೆ ಎಂಬುದರ ಸೂಚನೆ ಅಥವಾ ಪ್ರೇರಣೆಯಾಗುತ್ತದೆ.
ಯಾವ್ಯಾವ ರಾಶಿಗೆ ಏನೇನು ಫಲ?
ಮೇಷ, ಮಿಥುನ, ಸಿಂಹ, ಕುಂಭ ರಾಶಿಗಳವರಿಗೆ ಶುಭ ಫಲವಿದೆ. ವೃಶ್ವಿಕ ರಾಶಿಯವರಿಗೂ ಶುಭ ಫಲವಿದೆ. ವೃಷಭ ರಾಶಿಯವರಿಗೆ ಮರಣ ಭಯ, ತುಲಾ ರಾಶಿಯವರಿಗೆ ಆತಂಕ ಭಯ, ಮಕರ ರಾಶಿಯವರಿಗೆ ವ್ಯಯದ ಫಲವಿದೆ. ಕರ್ಕರಾಶಿಯವರಿಗೆ Negativity ಜಾಸ್ತಿಯಾದೀತು. ಮೀನ ರಾಶಿಯವರಿಗೆ ವರ್ಗಾವಣೆ, ಉದ್ಯೋಗ ಪರಿವರ್ತನೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಇತ್ಯಾದಿ ಫಲಗಳಿವೆ. ಮಿಥುನ, ತುಲಾ ರಾಶಿ ಜನಿತರಿಗೆ ವಿವಾಹ ಯೋಗವಿದೆ(ಅವಿವಾಹಿತರಿಗೆ) ವೃಷಭ, ಕನ್ಯಾ, ಮೀನ ರಾಶಿ ಜನಿತರಿಗೆ ಭೂ ಖರೀದಿ, ವಾಹನ ಖರೀದಿ ಮತ್ತು ಮಾರಾಟ ಮಾಡುವ ಯೋಗ ಭಾಗ್ಯ ಲಭಿಸಲಿದೆ. ಧನುರಾಶಿಯವರಿಗೆ ಸಂತಾನ ಯೋಗ ,ವಿವಾಹ ಯೋಗ, ಆರೋಗ್ಯ ವ್ಯತ್ಯಯಗಳಿವೆ.
ಒಟ್ಟಿನಲ್ಲಿ ಅನನುಕೂಲ ಇರುವವರು ಇದೊಂದು ಅನುಕೂಲತೆಯ ಮುನ್ಸೂಚನೆ, ಎಂದು ಯೋಚಿಸಿ ಜೀವನ ನಡೆಸಿದರೆ ಯಾವ ಗ್ರಹರೂ ಅನಿಷ್ಟ ತರುವವರಲ್ಲ ಎಂಬ ಸತ್ಚಿಂತನೆ ಬರುತ್ತದೆ. ಒಂದು ಫಸಲು ಸಿಗಲು ಕೆಲವಾರು ತಿಂಗಳ ಶ್ರಮ ಇರುವಂತೆಯೇ ಗ್ರಹರ ಭಾವ ಸಂಚಾರವೂ ಆಗಿರುತ್ತದೆ. ಇದನ್ನೇ ಅಚ್ಛೇದಿನ್ ಆಯೇಗಾ ಎಂದು ಬಲ್ಲವರು ಹೇಳಿದ್ದು.
ಪರಿಹಾರ ಇಲ್ಲದ ರೋಗಗಳಿಲ್ಲ. ಆದರೆ ಭಯ ರಹಿತವಾಗಿ ಇದ್ದಾಗ ಪರಿಹಾರವೂ ಪರಿಪೂರ್ಣವಾಗುತ್ತದೆ. ಭಯದಿಂದ ವೈದ್ಯರ ಬಳಿಹೋದಾಗ ಭಯವನ್ನೇ ಅವರಲ್ಲಿರುವ ವೈದ್ಯಕೀಯ ಯಂತ್ರಗಳು ಸ್ಕ್ಯಾನ್ ಮಾಡುತ್ತವೆ ಎಂಬುದು ಸತ್ಯ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post