ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಚಿಕ್ಕಬಳ್ಳಾಪುರ ಜಿಲ್ಲೆ ಗುಂಡಿಬಂಡೆ ತಾಲ್ಲೂಕಿನ ಹಿರೆನಾಗವಲ್ಲಿಯಲ್ಲಿ ಜೆಲಿಟಿನ್ ಕಡ್ಡಿ ಸ್ಪೋಟಗೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಆಘಾತ ವ್ಯಕ್ತಪಡಿಸಿದ್ದಾರೆ.
ಇದು ಅತ್ಯಂತ ದುರದೃಷ್ಟಕರ ಘಟನೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಂತ್ರಸ್ತರ ಕುಟುಂಬಗಳಿಗೆ ಮತ್ತು ಗಾಯಗೊಂಡ ವ್ಯಕ್ತಿಗಳಿಗೆ ಸರ್ಕಾರದ ವತಿಯಿಂದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಶಿವಮೊಗ್ಗ ಸ್ಪೋಟದ ನಂತರ ಅದೇ ರೀತಿಯ ಮತ್ತೊಂದು ದುರಂತ ಸಂಭವಿಸಿರುವುದು ತನಗೆ ತೀವ್ರ ಆಘಾತವಾಗಿದೆ. ಜಿಲೆಟಿನ್ ಕಡ್ಡಿ ಸ್ಪೋಟದಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿರುವುದು ತುಂಬಾ ನೋವು ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.
ಘಟನೆಗೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರ ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಶಿವಮೊಗ್ಗ ಸ್ಪೋಟಕ್ಕೆ ಮೊದಲೇ ಸ್ಪೋಟಕಗಳನ್ನು ಸಂಗ್ರಹಿಸಿಡಲಾಗಿತ್ತೇ ಎಂಬ ಬಗ್ಗೆ ನಾನು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ಯಾರು ಎಷ್ಟೇ ಪ್ರಭಾವ ಬೀರಿದರೂ ಆರೋಪಿಗಳ ರಕ್ಷಣೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವು ಅಧಿಕೃತ ಕೆಲಸಗಳಿಂದಾಗಿ ನಾನು ದೆಹಲಿಯಲ್ಲಿದ್ದೇನೆ. ಇಂದು ಸಂಜೆ ಬೆಂಗಳೂರಿಗೆ ಬಂದಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಸಚಿವರಾದ ಬಸವರಾಜ್ ಬೊಮ್ಮಾಯಿ, ಡಾ. ಸುಧಾಕರ್, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮತ್ತು ನಮ್ಮ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಭವಿಷ್ಯದಲ್ಲಿ ಇಂಥ ದುರಂತಗಳು ಮರುಕಳಿಸದಂತೆ ಎಚ್ಚರ ವಹಿಸಲು ನುರಿತ ಕೆಲಸಗಾರರಿಗೆ ತರಬೇತಿ ನೀಡುವುದು ಮತ್ತು ಗಣಿಗಾರಿಕೆ ಶಾಲೆಯ ರಚನೆಯ ಮಹತ್ವದ ಬಗ್ಗೆ ಇದೇ ಸಂದರ್ಭದಲ್ಲಿ ನಿರಾಣಿ ಪುನರುಚ್ಚರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post