ಕಲ್ಪ ಮೀಡಿಯಾ ಹೌಸ್
ಚಿಕ್ಕಮಗಳೂರು: ಇಂದು ಶೃಂಗೇರಿ ಶಾರದಾ ಪೀಠದ 36ನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ 71ನೆಯ ವರ್ಷದ ವರ್ಧಂತಿ ಮಹೋತ್ಸವ (ಸಪ್ತತಿಪೂರ್ತಿ). ಇಂದಿನಿಂದ ನಮಃ ಶಂಕರಾಯ ಜಪ ಯಜ್ಞ ಪ್ರಾರಂಭವಾಗಿ ನಿರಂತರವಾಗಿ ಮೇ 18ರಂದು ಕೊನೆಗೊಳ್ಳುವುದು.
ಶ್ರೀಗಳ ಕುರಿತು:
ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರದು ಒಂದು ವಿಶಿಷ್ಟ ವ್ಯಕ್ತಿತ್ವ, ಲೌಕಿಕ ಜೀವನದಲ್ಲಿ ನಿರಾಸಕ್ತಿ ತೋರಿ ಅಧ್ಯಾತ್ಮದ ಹಾದಿಯನ್ನು ಹಿಡಿದವರು. ಶ್ರೀಮಠದ ಪರಂಪರೆಗೆ ತಕ್ಕಂತೆ ತಮ್ಮ ಜ್ಞಾನದಿಂದ ಇಡೀ ಭಾರತದ ಶಿಷ್ಯಕೋಟಿಗೆ, ಪ್ರಜಾಸಮೂಹಕ್ಕೆ ಚೇತನಾಸ್ರೋತರಾಗಿರುವರು.
ಶ್ರೀಗಳವರ ಒಂದೊಂದು ಮಾತೂ ಸಹ ಬಹಳ ತೂಕವಾದದ್ದು, ಅಪಾರ ಅರ್ಥಗರ್ಭಿತವಾದದ್ದು. ಅವರ ಮುಖದಿಂದ ಗಂಗಾಪ್ರವಾಹದಂತೆ ಹರಿದು ಬರುವ ಜ್ಞಾನವಾಹಿನಿಗೆ ಮರುಳಾಗದವರೇ ಇಲ್ಲ. ಅವರಿಂದ ಅನುಗ್ರಹ ಪಡೆದ ಅಸಂಖ್ಯಾತ ಭಕ್ತರಿಗೆ ಶ್ರೀಗಳವರು ಪ್ರಾತಃ ಸ್ಮರಣೀಯರು.
ವಿಜಯಯಾತ್ರೆ ಮಾಡುವ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರು ಅಗ್ರೇಸರರು. ಶೃಂಗೇರಿ ಶಾರದಾ ಪೀಠದ ಇತಿಹಾಸದಲ್ಲಿ ಅಕ್ಷರಶಃ ನಿಜವಾದ ಸುವರ್ಣಯುಗವನ್ನು ನಿರ್ಮಿಸಿದ್ದು ಜಗದ್ಗರು ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರು. ಶ್ರೀಗಳ ಸಪ್ತತಿಪೂರ್ತಿ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಶಿಷ್ಯ ಜನರಾದ ನಾವು ಅವರ ಮಾರ್ಗದರ್ಶನ ಹಾಗೂ ಅವರ ಉಪದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಅಪಾರ ಅನುಗ್ರಹಕ್ಕೆ ಪಾತ್ರರಾಗೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post