ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಕ್ಷಾ ಬಂಧನ ಹಬ್ಬವು ನಮ್ಮ ಭಾರತದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಸಹೋದರ-ಸಹೋದರಿಯರ ನಡುವಿನ ಗೌರವ, ವಿಶ್ವಾಸ ಮತ್ತು ಪ್ರೀತಿಗೆ ಸಮರ್ಪಣೆಯಾದ ಸುದಿನವೇ ರಕ್ಷಾ ಬಂಧನ.
ರಕ್ಷಾ ಬಂಧನವನ್ನು ಬಿಡಿಸಿ ಬರೆದಾಗ ರಕ್ಷಾ (ರಕ್ಷಣೆ) ಮತ್ತು ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದರ ಮೂಲಕ ಇಬ್ಬರ ನಡುವಿನ ಬಾಂಧವ್ಯ ದುಪ್ಪಟ್ಟು ಮಾಡುವರು. ಸಹೋದರನ ಮಣಿಕಟ್ಟಿಗೆ ಕಟ್ಟುವ ದಾರವು ಕೇವಲ ಒಂದು ರೇಷ್ಮೆ ದಾರವಲ್ಲದೇ, ಅದು ಇಬ್ಬರ ನಡುವಿನ ಶಾಶ್ವತ ಸಂಬಂಧ ಹಾಗೂ ನಿರಂತರ ಪ್ರೀತಿಯ ಸಂಕೇತ, ಮತ್ತು ಸಹೋದರನಿಗೆ ಒಂದು ರೀತಿಯ ಶ್ರೀ ರಕ್ಷೆ (ರಕ್ಷಣೆ) ಇದ್ದಂತೆ. ಸಹೋದರನು ತನ್ನ ಸಹೋದರಿಯರಿಗೆ, ಜೀವನ ಪರ್ಯಂತ ರಕ್ಷಿಸುವುದಾಗಿ ಭರವಸೆ ನೀಡುವುದು ಮತ್ತು ಸಹೋದರಿಯರು, ಸಹೋದರನ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥಿಸುವುದು ಸರ್ವೇ ಸಾಮಾನ್ಯ.
ಆದರೆ ಇಂದಿನ ಪ್ರಸ್ತುತ ಸಂದರ್ಭದಲ್ಲಿ, ಕೊರೋನಾ ಮಹಾಮಾರಿ ಆರ್ಭಟ ಇಡೀ ಪ್ರಪಂಚಕ್ಕೆ ತಕ್ಕ ಪಾಠ ಕಲಿಸಿದೆ.. ಜೊತೆಗೆ ಕೊರೋನಾ ಪೀಡಿತರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ, ದಿನದಿಂದ ದಿನಕ್ಕೆ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಯಾರಿಂದಲೂ ಸಹ ಸಾಧ್ಯವಾಗುತ್ತಿಲ್ಲ.. ಪ್ರಕೃತಿಯಲ್ಲಿ ಆಗುತ್ತಿರುವಂತಹ ದುಃಸ್ಥಿತಿಗೆ ಒಂದು ರೀತಿ ಪ್ರಕೃತಿ ಮಾತೆಯೇ ಕಾರಣಳಾಗಿದ್ದಾಳೆ.. ಆದ್ದರಿಂದ ಪ್ರಕೃತಿ ದೇವಿ ಸ್ವತಃ ತಾನೇ ಶಾಂತಳಾಗಬೇಕಿದೆ..
ಹಾಗಾಗಿ ರಕ್ಷಾ ಬಂಧನ ಹಬ್ಬದ ಸಲುವಾಗಿ, ನಮ್ಮ ಮನೆಯ ಹಿತ್ತಲ್ನಿಲ್ಲಿ ಇದ್ದಂತಹ ಅಡಿಕೆ ಸಸಿಗೆ, ಪವಿತ್ರವಾದ ಶ್ರೀ ರಕ್ಷೆಯನ್ನು (ಅರಿಶಿಣ ದಾರ) ನಮ್ಮ ಮನೆಯ ಮಕ್ಕಳು ಕಟ್ಟುವುದರ ಜೊತೆಗೆ, ಮಂಗಳಾರತಿ ಬೆಳಗಿದರು. ಇದರ ಹಿಂದಿನ ಉದ್ದೇಶ ಏನೆಂದರೆ, ಮಕ್ಕಳು ಮಾಡುವ ಯಾವುದೇ ಕೆಲಸದಲ್ಲಿ ಸ್ವಾರ್ಥ ಮನೋಭಾವ ಇರುವುದಿಲ್ಲ, ಮಕ್ಕಳ ಮನಸ್ಸು ಮುಗ್ಧತೆಯಿಂದ ಕೂಡಿರುತ್ತದೆ.. ಮಕ್ಕಳು ಶ್ರೀರಕ್ಷೆಯನ್ನು ಕಟ್ಟುವುದರ ಮೂಲಕ, ಇಡೀ ಪ್ರಪಂಚಕ್ಕೆ ಶ್ರೀ ರಕ್ಷೆಯನ್ನು (ರಕ್ಷಣೆ) ದಯಪಾಲಿಸು ಎಂದು ಪ್ರಕೃತಿ ದೇವಿಗೆ ಮನವಿ ಮಾಡಿದ್ದಾರೆ. ಕೇವಲ ರಕ್ಷಾ ಬಂಧನದ ದಿನದಂದು ಮಾತ್ರ ಈ ಕಾರ್ಯ ಮಾಡಬೇಕು ಎಂದೆನಿಲ್ಲ. ಪ್ರತಿದಿನವೂ ಕೂಡ ಇಂತಹ ಕಾರ್ಯಗಳಲ್ಲಿ, ಸಮಾಜದ ಪ್ರಜೆಗಳಾದ ನಾವು ನೀವೆಲ್ಲರೂ ಕೈಗೊಂಡಾಗ, ಪ್ರಕೃತಿ ದೇವಿ ಸ್ವಲ್ಪವಾದರೂ ನಮ್ಮ ಮೇಲೆ ದಯೆ ತೋರುವಳು ಎಂಬುದು ನನ್ನ ನಂಬಿಕೆ..
ನಮ್ಮ ಮಾತು ಮತ್ತೊಬ್ಬರಿಗೆ ಸ್ಪೂರ್ತಿ ಆಗಬೇಕು..
ನಮ್ಮ ಕೆಲಸ ಮತ್ತೊಬ್ಬರಿಗೆ ಮಾದರಿ ಆಗಬೇಕು..
ಪೂರ್ಣಿಮಾ (ಪಲ್ಲವಿ. ಜೆ)
ಭದ್ರಾವತಿ
Get In Touch With Us info@kalpa.news Whatsapp: 9481252093
Discussion about this post