ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದಕ್ಕೆ ಪ್ರಮುಖ ಕಾರಣ ಅಲ್ಲಿ ಕಂಡು ಬರುವ ಅವ್ಯವಸ್ಥೆ ಮತ್ತು ಅಸಮರ್ಪಕ ನಿರ್ವಹಣೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಕಾಯ್ದು ಕೊಳ್ಳುವುದಿಲ್ಲ, ಉತ್ತಮ ಅಧ್ಯಾಪಕರಿರುವುದಿಲ್ಲ, ಆಧುನಿಕ ಸೌಲಭ್ಯಗಳಿರುವುದಿಲ್ಲ, ಬಣ್ಣವಿರದ ಗೋಡೆ, ಸೋರುವ ಮಹಡಿ, ನಿರ್ವಹಣೆಯಿಲ್ಲದ ಶೌಚಾಲಯ ಹೀಗೆ ಅನಾನುಕೂಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಜನರ ಮನಸ್ಥಿತಿ ಬದಲಿಸಲು ದಿಟ್ಟ ಹೆಜ್ಜೆಯಿಟ್ಟಿದ್ದಾರೆ ಸಂಸದ ಎ. ನಾರಾಯಣಸ್ವಾಮಿ.
ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಲಿಟಿ ಫಂಡ್ಸ್ ಅಡಿಯಲ್ಲಿ ಹೆಸರಾಂತ ಕಂಪೆನಿ ಬೋಷ್ ಪ್ರಾಯೋಜಕತ್ವದಲ್ಲಿ ಸರ್ಕಾರಿ ಶಾಲೆಯನ್ನು ಅಂತರಾಷ್ಟ್ರೀಯ ಗುಣಮಟ್ಟದ ಶಾಲೆಗಳಿಗೆ ಸರಿಸಮನಾಗಿ ನಿರ್ಮಿಸಿ ಮಾದರಿ ಶಿಕ್ಷಣ ನೀಡಲು ಮುಂದಾಗಿದ್ದಾರೆ.
ಸಂಸದರ ಮನವಿಯನ್ನು ಗೌರವಿಸಿ ಬೋಷ್ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ನಿಧಿ ಯೊಜನೆಯಡಿ 1.5 ರಿಂದ 2 ಕೋಟಿ ರೂ. ವೆಚ್ಚದಲ್ಲಿ ಜವಗೊಂಡನಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ನಿರ್ಮಿಸಿ ಕೊಟ್ಟಿದ್ದಾರೆ.
ಬೋಷ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಅತ್ಯದ್ಭುತ ನಿರ್ವಹಣೆ, ಗಾಳಿ ಬೆಳಕಿನ ವ್ಯವಸ್ಥೆಯುಳ್ಳ 8 ವಿಶಾಲ ಶಾಲಾ ಕೊಠಡಿಗಳು, 1 ಉಪನ್ಯಾಸಕರ ಕೊಠಡಿ, 1 ಗ್ರಂಥಾಲಯ, 2 ಶೌಚಾಲಯದ ಜೊತೆಗೆ ಅತ್ಯಾಧುನಿಕ ಶಿಕ್ಷಣ ಪರಿಕರಗಳನ್ನೊಳಗೊಂಡ ಅತ್ಯುತ್ತಮ ಗುಣಮಟ್ಟದ ಶಾಲೆ ಇದಾಗಿದೆ. ಇಲ್ಲಿನ ಗೋಡೆಗಳ ಮೇಲಿ ಭಿನ್ನ ಬರಹ, ಸಾಮಾಜಿಕ ಸಂದೇಶ, ಗಣ್ಯರ ನುಡಿ ಹಾಗೂ ಚಿತ್ರಗಳು ಅತ್ಯಾಕರ್ಷಕವಾಗಿದೆ. ನಮ್ಮ ನಾಡಿನ ನಡೆ, ನುಡಿ, ಕಲೆ, ಸಂಸ್ಕೃತಿ, ಸಾಧಕರ ಅನಾವರಣವನ್ನು ಗೋಡೆಯ ಮೇಲೆ ಚಿತ್ರಕಲೆಯ ಮೂಲಕ ಪ್ರದರ್ಶಿಸಲಾಗಿದೆ.
ಜ್ಞಾನಪೀಠ ಪುರಸ್ಕೃತ ಸಾಹಿತಿಗಳು, ವಿಜ್ಞಾನಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರ ಭಾವಚಿತ್ರಗಳಿದ್ದು, ಇದು ಕ್ರಿಯಾಶೀಲವಾಗಿರುವುದರ ಜೊತೆಗೆ ಮಕ್ಕಳ ಓದಿನ ಆಸಕ್ತಿಯನ್ನು ಸಹ ಹೆಚ್ಚಿಸುವಂತಿದೆ. ಮಾನವನ ಅವಿಷ್ಕಾರ, ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಬಾಹ್ಯಾಕಾಶ ಸಾಧನೆ ಕುರಿತು ಅರಿವು ಮೂಡಿಸುವ ಚಿತ್ರಗಳು ಶಾಲೆಯ ಮುಂಭಾಗದ ಗೋಡೆಯ ಮೇಲೆ ಚಿತ್ರಿಸಲಾಗಿದೆ. ಇದು ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.
ಇನ್ನು ಕೊಠಡಿಯ ಒಳಭಾಗದ ಗೋಡೆಗಳಲ್ಲಿ ಪಂಚತಂತ್ರದ ಕಥೆಗಳು, ನೀತಿ ಕತೆ, ನಮ್ಮ ನಾಡಿನ ಸಂಗೀತ ನೃತ್ಯ ಪ್ರಾಕಾರಗಳು, ಹಬ್ಬಗಳು, ವಿಭಿನ್ನ ಆಚರಣೆಗಳ ಬಗ್ಗೆ ತಿಳಿಸುವ ಚಿತ್ರಗಳಿದೆ. ಇಲ್ಲಿನ ಪ್ರತಿ ಗೋಡೆಯು ವಿದ್ಯಾರ್ಥಿಗಳಿಗೆ ಸಹ ಹೊಸ ವಿಷಯ ಕಲಿಸುತ್ತದೆ.
ಒಬ್ಬ ವ್ಯಕ್ತಿಯ ಭವಿಷ್ಯದ ಬುನಾದಿಯೇ ಆತನಿಗೆ ಸಿಗುವ ಪ್ರಾಥಮಿಕ ಶಿಕ್ಷಣವಾಗಿದೆ ಎಂಬುದನ್ನು ನಂಬಿರುವ ಸಂಸದರಾದ ಎ.ನಾರಾಯಣಸ್ವಾಮಿಯವರು ಬೋಷ್ ಸಂಸ್ಥೆಗೆ ಮನವಿ ಮಾಡಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆಗೆ ನಾವೀನ್ಯತೆಯ ರೂಪ ಕೊಟ್ಟಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post