ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನೆಪ ಮಾತ್ರಕ್ಕೆ ಗ್ರಾಮ ವಾಸ್ತವ್ಯವಾಗಬಾರದು. ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸವಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಇಂದು ತಾಲೂಕು ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಅಧಿಕಾರಿಗಳಿಗೆ ಪತ್ರಿ ತಿಂಗಳು ಒಂದು ದಿನದ ಮಟ್ಟಿಗೆ ಗ್ರಾಮ ವಾಸ್ತವ್ಯವನ್ನು ಮಾಡುವಂತೆ ಆದೇಶಿಸಿದೆ. ಅದರಂತೆ ವಾಸ್ತವ್ಯಕ್ಕೆ ಮಾತ್ರ ಸೀಮಿತವಾಗದೆ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದರು.
ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಗ್ರಾಮಸ್ಥರ ಜಮೀನು ಪೂಡಿ, ರಸ್ತೆ ಸಂಪರ್ಕ, ಪಿಂಚಣಿ, ವಿಕಲಚೇತನ ಪಿಂಚಣಿ, ಪೌತಿಖಾತೆ, ವಂಶವೃಕ್ಷ, ಕುಡಿಯುವ ನೀರು, ಸ್ಮಶಾನ ಜಾಗ, ನಿವೇಶನ, ಸ್ವಚ್ಚತಾ ವ್ಯವಸ್ಥೆ ಹಾಗೂ ಇತರೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು.
ಸರ್ಕಾರ ಇಲ್ಲಿಯವರೆಗೂ ಬಗುರುಹುಂ ಸಮಿತಿ ರಚನೆ ಮಾಡಿಲ್ಲ. ಕಾರಣ ಏನೆಂದು ತಿಳಿದಿಲ್ಲ. ಇದರ ವಿಚಾರವಾಗಿ ಸರ್ಕಾರಕ್ಕೆ ತಹಶಿಲ್ದಾರರು ಮಾಹಿತಿಯನ್ನು ನೀಡಬೇಕು. ಶಾಲಾ ಕಟ್ಟಡ ಬೀಳುವ ಪರಿಸ್ಥಿತಿ ಇದ್ದು, ಕೂಡಲೆ ಇದನ್ನು ತೆರವುಗೊಳಿಸಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ತಹಶಿಲ್ದಾರ ಎಂ. ಮಲ್ಲಿಕಾರ್ಜುನ ಮಾತನಾಡಿ, ಸ್ಥಳದಲ್ಲೆ ಇತ್ಯರ್ಥಗೊಳಿಸಬಹುದಾದ ಸಮಸ್ಯೆಗಳನ್ನು ಇಲ್ಲಿಯೇ ಬಗೆ ಹರಿಸಲಾಗುವುದು, ಉಳಿದ ಅರ್ಜಿಗಳಿಗೆ ಕಾಲಮಿತಿ ಪಡೆದುಕೊಳ್ಳಲಾಗುತ್ತದೆ. 34 ಫಲಾನುಭವಿಗಳಿಗೆ ಪಿಂಚಣಿ ವ್ಯವಸ್ಥೆ ಮಾಡಲಾಗುವುದು, 70 ಪೌತಿ ಖಾತೆಗಳಲ್ಲಿ ಈಗಾಗಲೆ 15 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಜೊತೆಗೆ ಈ ಗ್ರಾಮವನ್ನು ಪೂಡಿ ಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ಪ್ರಕಾಶಮೂರ್ತಿ, ಸೋಮುಗುದ್ದು ಗ್ರಾಮಪಂಚಾಯಿತ ಅಧ್ಯಕ್ಷೆ ಗೌರಮ್ಮ, ಗ್ರಾಮಪಂಚಾಯಿತಿ ಸದಸ್ಯರು, ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















