ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ದೀನ ದಲಿತರ ಧ್ವನಿ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ, ಎಂ. ಜಯಣ್ಣ ವಿಧಿವಶರಾಗಿರುವುದ ದುಃಖದ ಸಂಗತಿ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಜಯಣ್ಣ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ಮಾಲಿಕೆ ಅರ್ಪಿಸಿ ಕುಟುಂಬಸ್ಥರಿಗೆ ಸ್ವಾಂತಾನ ಹೇಳಿ ಅವರು ಮಾತನಾಡಿದರು.
ಎಂ. ಜಯಣ್ಣನವರು ನಿರಂತರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜಿಲ್ಲೆ ಅಭಿವೃದ್ದಿಗೆ ಶ್ರಮಿಸಿದಂತಹ ವ್ಯಕ್ತಿ. ಇವರು ಚಿತ್ರದುರ್ಗ ಜಿಲ್ಲೆಗೆ ನೀರಾವರಿ, ಅಪ್ಪರ್ ಭದ್ರಾ ಹಾಗೂ ರೈಲ್ವೆ ಮೊದಲಾದ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಒಲವನ್ನು ತೋರಿದಂತಹ ವ್ಯಕ್ತಿಯಾಗಿದ್ದರು. ನೊಂದವರ ಧ್ವನಿಯಾಗಿದ್ದು ದೀನ ದಲಿತರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು. ರಾಜ್ಯದಾದ್ಯಾಂತ ಪ್ರೊ.ಬಿ. ಕೃಷ್ಣಪ್ಪರ ಜೊತೆಗೂಡಿ ದಲಿತ ಸಂಘರ್ಷ ಸಮಿತಿಯನ್ನು ತಳಮಟ್ಟದಿಂದ ಸಂಘಟಿಸಿದಂತಹ ಧೀಮಂತ, ಮೂಢನಂಬಿಕೆ, ಕಂದಾಚಾರ, ಮೌಢ್ಯಾಚರಣೆ, ಬೆತ್ತಲೆಸೇವೆ, ಶೋಷಿತರ ಮೇಲೆ ದೌರ್ಜನ್ಯ, ಅಸ್ಪಶ್ಯತೆ ವಿರುದ್ದ ಹೋರಾಟ ನಡೆಸಿ ಅದರ ನಿರ್ಮೂಲನೆಗೆ ಪಣತೊಟ್ಟಂತಹ ವ್ಯಕ್ತಿ ಎಂದರು.
ಬರದ ನಾಡಿಗೆ ಭದ್ರಾ ಮೇಲ್ದಂಡೆಯಿಂದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸುವ ಉದ್ದೇಶದಿಂದ 18 ವರ್ಷದಿಂದ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದುಕೊಂಡೆ ಜಿಲ್ಲೆಗೆ ನೀರು ತಂದು ಬಯಲುಸೀಮೆ ಭಗೀರಥ ಎಂದು ಹೆಸರಾದರು. ಇವರ ಸಾಧನೆಯನ್ನು ಗುರುತಿಸಿ ಇವರಿಗೆ 2016ನೆಯ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಾ.ಬಾಬು ಜಗಜೀವನರಾಂ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆದರೆ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ದೈವಧೀನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post