ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಸಾಮಾನ್ಯವಾಗಿ ಎಸ್’ಎಸ್’ಎಲ್’ಸಿ, ಪಿಯುಸಿ, ಇತರೆ ಪರೀಕ್ಷೆಗಳಲ್ಲಿ ನಕಲು ಮಾಡಲು ಹೋಗಿ ಡಿಬಾರ್ ಆಗುತ್ತಾರೆ ಎಂಬುದನ್ನು ನೋಡಿದ್ದೀವಿ ಕೇಳಿದ್ದೀವಿ. ಆದರೆ, ಪೊಲೀಸ್ ಆಗಲು ಇಚ್ಛಿಸಿದವರು ನಕಲು ಮಾಡಲು ಹೋಗಿ ಈಗ ಕಂಬಿ ಹಿಂದೆ ನಿಂತಿರುವ ಘಟನೆ ನಡೆದಿದೆ.
ಹೌದು… ಪರೀಕ್ಷೆಗಳ ನಕಲಿ ಅಭ್ಯರ್ಥಿಗಳೇ ಪರೀಕ್ಷೆ ಬರೆದು ಪೊಲೀಸ್ ಆಗಬೇಕಾದವರೆ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಭಾನುವಾರ ರಾಜ್ಯದಾದ್ಯಂತ ನಡೆದ ಕೆಎಸ್‌ಆರ್‌ಪಿ ನೇಮಕಾತಿ ಪರೀಕ್ಷೆಯಲ್ಲಿ ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ಇಬ್ಬರು ನಕಲಿ ಅಭ್ಯರ್ಥಿಗಳು ಪತ್ತೆಯಾಗಿದ್ದಾರೆ.
ಪರೀಕ್ಷೆಗೆ ಬಂದ ನಕಲಿ ಅಭ್ಯರ್ಥಿಯನ್ನು ಗೋಕಾಕ್ ಮೂಲದ ಸಿದ್ಧಾರೂಢ(26) ಎಂದು ಗುರುತಿಸಲಾಗಿದೆ. ಪರೀಕ್ಷಾರ್ಥಿ ಬದಲಿಗೆ ಮತ್ತೊಬ್ಬ ಪರೀಕ್ಷೆ ಬರೆಯುತ್ತಿದ್ದಾನೆ ಎಂದು ವಿಷಯ ತಿಳಿದ ಎಸ್‌ಪಿ ಜಿ. ರಾಧಿಕಾ ಪರೀಕ್ಷಾ ಕೇಂದ್ರದಲ್ಲಿ ಪರಿಶೀಲನೆ ನಡೆಸಿದಾಗ ಸಿದ್ಧಾರೂಢ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧನವಾದ ಪೊಲೀಸ್
ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೇರೆ ಅಭ್ಯರ್ಥಿ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಪೊಲೀಸ್ ಪೇದೆಯೊಬ್ಬ ಸಿಕ್ಕಿಬಿದ್ದಿದ್ದಾನೆ. ಬೆಳಗಾವಿ ಜಿಲ್ಲೆಯ ಪೇದೆ ಮಣಿಕಂಠ ಬಂಧಿತ ಪೇದೆ. ರಾಯಭಾಗ ಮೂಲದ ಅಭ್ಯರ್ಥಿ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಎಂದು ತಿಳಿದು ಬಂದಿದೆ.
ಇನ್ನು, ಆರೋಪಿಯು ಸ್ವಯಂ ಪ್ರೇರಿತನಾಗಿ ಸ್ನೇಹಿತನಿಗೆ ನೆರವಾಗಲು ಬಂದಿದ್ದನು ಎಂದು ತಿಳಿದುಬಂದಿದೆ. ಈತನಿಗೆ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಪ್ರೇರೇಪಿಸುವ 1) ಭೀಮ್ ಶ್ರೀ ಹುಲ್ಲೋಳ್, 2). ಲಕ್ಷ್ಮಣ್ ತರಣ್ಣನವರ್ 3). ಸಂತೋಷ್ ಸಾಗರ್ ಇವರ ಮೇಲೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಎಸ್ಪಿ ಜಿ. ರಾಧಿಕಾ ಮಾಹಿತಿ ನೀಡಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post