ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಬಟ್ಟೆ ಅಂಗಡಿಗಳನ್ನು ಇಂದಿನಿಂದ ತೆರೆಯಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದು, ಇದಕ್ಕೆ ಕೆಲವೊಂದು ಷರತ್ತುಗಳನ್ನೂ ಸಹ ವಿಧಿಸಿದ್ದಾರೆ.
ಶಿವಮೊಗ್ಗ ಜವಳಿ ವರ್ತಕರ ಸಂಘದ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳು ಬಟ್ಟೆ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಲಾಕ್ ಡೌನ್ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಿದ್ದು, ಷರತ್ತುಬದ್ದ ಅವಕಾಶವನ್ನು ನೀಡಿದ್ದಾರೆ.
ಈ ಕುರಿತಂತೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಜವಳಿ ವರ್ತರ ಸಂಘದ ಪ್ರಮುಖರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.
ಉಲ್ಲಂಘನೆಗೆ ದಂಡ
ಈ ಕುರಿತಂತೆ ಮಾಹಿತಿ ನೀಡಿರುವ ಸಂಘದ ಪ್ರಮುಖರು, ಜಿಲ್ಲಾಡಳಿತ ನೀಡಿರುವ ಈ ಸದವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಗಾಂಧಿ ಬಜಾರ್ ಬಟ್ಟೆ ವ್ಯಾಪಾರಸ್ಥರ ಮೇಲಿದೆ. ಮಫ್ತಿಯಲ್ಲಿ ಇರುವ ಅಧಿಕಾರಿಗಳು ಬಟ್ಟೆ ವ್ಯಾಪಾರಸ್ಥರು ನಿಯಮಗಳನ್ನು ತಪ್ಪಿದಲ್ಲಿ, ನಮ್ಮ ಚಟುವಟಿಕೆಗಳನ್ನು ನೇರವಾಗಿ ಜಿಲ್ಲಾ ಪೋಲಿಸ್ ಅಧಿಕಾರಿಗಳಿಗೆ ಫೋಟೋಗಳನ್ನು ತೆಗೆದು ಕಳಿಸುತ್ತಾರೆ. ಪರಿಣಾಮವಾಗಿ ದಂಡ, ಲೈಸೆನ್ಸ್ ರದ್ದತಿ, ಸೀಜಿಂಗ್ ಹೀಗೆ ಯಾವುದೇ ಕ್ರಮಗಳನ್ನು ಸಹ ಸರ್ಕಾರ ಕೈಗೊಳ್ಳಬಹುದಾಗಿದೆ.ಆದ್ದರಿಂದ ಸದಸ್ಯರು ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಲು ವಿಶೇಷವಾಗಿ ಗಾಂಧಿ ಬಜಾರ್ ವರ್ತಕರನ್ನು ಕೋರಿದ್ದಾರೆ.
ಸದಸ್ಯರು ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಜವಳಿ ವರ್ತಕರ ಸಂಘದ ವತಿಯಿಂದ ಯಾವುದೇ ರೀತಿಯಲ್ಲಿ ಸಹಕಾರ ಅಪೇಕ್ಷಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೀಗಿವೆ ಷರತ್ತುಗಳು:
1) ಗಾಂಧಿ ಬಜಾರ್ ಹೊರತುಪಡಿಸಿ ನಗರದ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ಅಂದರೆ ನೆಹರು ರಸ್ತೆ, ಬಿಎಚ್ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ವಿನೋಬಾ ನಗರಗಳಲ್ಲದೇ ಇತರೆ ಪ್ರಮುಖವಾದ ಏರಿಯಾಗಳಲ್ಲಿ ಬಟ್ಟೆ ಅಂಗಡಿಗಳನ್ನು ತೆರೆಯಲು ಕೆಲವು ನಿಬಂಧನೆಗಳಿಗೆ ಒಳಪಟ್ಟು ಅವಕಾಶವಿದೆ.
2) ಗಾಂಧಿ ಬಜಾರ್’ನ ಬಟ್ಟೆ ವ್ಯಾಪಾರಸ್ಥರು ದಿನ ಬಿಟ್ಟು ದಿನ ಅಂದರೆ, ಒಂದು ದಿನ ಎಡಬದಿಯ, ಮತ್ತೊಂದು ದಿನ ಬಲಬದಿಯ, ಅಂಗಡಿಗಳನ್ನು ತೆರೆಯಬಹುದು
3) ನಾಳೆ ಅಂದರೆ 02-05-2020ರ ಶನಿವಾರದಿಂದ ಅನ್ವಯವಾಗುವಂತೆ ಗಾಂಧಿ ಬಜಾರ್’ನ ಎಡಭಾಗದವರು ಮಾತ್ರವೇ ಅಂಗಡಿಗಳನ್ನು ತೆಗೆಯಬೇಕು.
ಉದಾಹರಣೆಗೆ ಗಾಂಧಿ ಬಜಾರ್‌ನ ಎಡಭಾಗದ ಚಿರಾಗ್ ಅಂಗಡಿಯಿಂದ ರಸ್ತೆಯ ಕೆಳತುದಿಯ ಕೃಷ್ಣ ಕ್ಲಾಥ ಸೆಂಟರ್’ವರೆಗೆ ಅಲ್ಲದೇ 1 ನೇ, 2 ನೇ, 3 ನೇ ಹೀಗೆ ಎಡಭಾಗ ಬಲಭಾಗದಲ್ಲಿ ಬರುವ ಎಲ್ಲಾ ಕ್ರಾಸ್’ಗಳಲ್ಲಿ ಎಡಭಾಗದ ಅಂಗಡಿಗಳವರೂ ಮಾತ್ರವೇ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಅಂಗಡಿಗಳನ್ನು ತೆರೆಯಬಹುದು.
4) 3-5-2020 ರ ಭಾನುವಾರದಂದು ಗಾಂಧಿ ಬಜಾರ್’ನ ಬಲಭಾಗದಲ್ಲಿರುವ ಎಲ್ಲಾ ಬಟ್ಟೆ ವ್ಯಾಪಾರಸ್ಥರು ಮಾತ್ರವೇ ಅಂಗಡಿಗಳನ್ನು ತೆರೆಯಬಹುದು. ಉದಾಹರಣೆಗೆ, ಗಾಂಧಿ ಬಜಾರ್ ನ ಪ್ರವೇಶದ್ವಾರದ ಬಲಭಾಗದಲ್ಲಿ ಇರುವ ಮಣಿತಾಳಿ ಅಂಗಡಿಯ ಬದಿಯಿಂದ ಪ್ರಾರಂಭಗೊಂಡು ಗಾಂಧಿ ಬಜಾರ್’ನ ಕೆಳತುದಿಯವರೆಗೂ ಅಲ್ಲದೇ ಗಾಂಧಿ ಬಜಾರ್’ನ ಎಲ್ಲಾ ಕ್ರಾಸ್’ಗಳಲ್ಲಿರುವ ಬಲಭಾಗದ ಅಂಗಡಿಗಳನ್ನು ಮಾತ್ರವೇ ತೆರೆಯಬೇಕು.
5) ಈ ಮೇಲ್ಕಂಡ ರೀತಿಯಲ್ಲಿ ಎಡ ಮತ್ತು ಬಲ ಭಾಗದ ಜವಳಿ ವ್ಯಾಪಾರಸ್ಥರು ಪರಸ್ಪರರ ಸಹಕಾರದಿಂದ ಸಂಯಮದಿಂದ ವರ್ತಿಸಿ ಸರ್ಕಾರದೊಂದಿಗೆ ಕೈಜೋಡಿಸಿ ನಮ್ಮ ಸಂಘದ ಒಗ್ಗಟ್ಟನ್ನು ಪ್ರದರ್ಶಿಸಬೇಕು.
6) ನಿಮ್ಮಭಾಗದ ಅಂಗಡಿಗಳು ರಜೆ ಇದ್ದಾಗ ಈ ದಿನ ರಜೆ- ನಾಳೆ ತೆರೆದಿರುತ್ತದೆ ಎಂದು ನಿಮ್ಮ ಅಂಗಡಿಗಳ ಮುಂದೆ ಫಲಕವನ್ನು ಹಾಕಬಹುದು.
7) ಗಾಂಧಿ ಬಜಾರ್ ಗೆ ಮಾತ್ರವೇ ಅನ್ವಯಿಸುವ ಮೇಲ್ಕಂಡ ನಿಬಂಧನೆಗಳು ನಗರದ ಇತರೆ ಸ್ಥಳಗಳ ವ್ಯಾಪಾರಸ್ಥರಿಗೆ ಅನ್ವಯಿಸುವುದಿಲ್ಲ. ಹಾಗಾಗಿ ಯಾವುದೇ ಗೊಂದಲವನ್ನು ಮಾಡಿಕೊಳ್ಳಬಾರದು.
Get in Touch With Us info@kalpa.news Whatsapp: 9481252093






Discussion about this post