ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದರು.
ಕೈಮಗ್ಗ ನೇಕಾರರಿಗೆ ಮೊದಲನೇ ಹಂತದಲ್ಲಿ 19,744 ಕೈಮಗ್ಗ ನೇಕಾರರಿಗೆ ನೇರ ನಗದು ವರ್ಗಾವಣೆ ಮಾಡುವ ಮುಖಾಂತರ ಪ್ರತಿ ನೇಕಾರರಿಗೆ 2,000 ರೂ.ಗಳನ್ನು ವಾರ್ಷಿಕ ಆರ್ಥಿಕ ನೆರವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಗೆ ಮಾಡಲಾಗುತ್ತಿದೆ.
ನಾಲ್ಕನೇ ರಾಷ್ಟ್ರೀಯ ಕೈಮಗ್ಗ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 54,789 ಕೈಮಗ್ಗ ನೇಕಾರರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿನ ರೇಷ್ಮೆ, ಹತ್ತಿ ಹಾಗೂ ಉಣ್ಣೆ ವಲಯದ ಕೈಮಗ್ಗ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಕೈಮಗ್ಗ ನೇಕಾರರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ನೇಕಾರ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿ ವರ್ಷ 10.96 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಕೈಮಗ್ಗ ಗಣತಿಯಲ್ಲಿ ನೇಕಾರರ ಮಾಹಿತಿಗಳ ಬಿಟ್ಟು ಹೋಗಿದ್ದರೆ ಅಂತಹವರಿಗೂ ಸಹ ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈವರೆಗೆ 40,634 ಕೈಮಗ್ಗ ನೇಕಾರರು ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 37,314 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. ಇನ್ನುಳಿದ ಅರ್ಹ ಫಲಾನುಭವಿಗಳಿಗೂ ಮುಂದಿನ ದಿನಗಳಲ್ಲಿ ಆರ್ಥಿಕ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.
ಇದರೊಂದಿಗೆ ವಿದ್ಯುತ್ ಮಗ್ಗ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 1.25 ಲಕ್ಷ ಕೂಲಿ ಕೆಲಸಗಾರರಿಗೆ 2 ಸಾವಿರ ರೂ. ಒಂದು ಬಾರಿಯ ಪರಿಹಾರ ಧನವನ್ನು ವಿತರಿಸಲಾಗುತ್ತಿದ್ದು, ಈ ವರೆಗೆ ಅನುಮೋದಿಸಲಾದ, 8897 ಅರ್ಜಿದಾರರಿಗೆ ಡಿಬಿಟಿ ಮೂಲಕ ಪರಿಹಾರ ವಿತರಣೆಗೆ ಚಾಲನೆ ನೀಡಲಾಯಿತು.
ಜವಳಿ ಸಚಿವ ಶ್ರೀಮಂತ ಬಾಳಾಸಾಹೇಬ್ ಪಾಟೀಲ ಅವರು ಮಾತನಾಡಿ, ನೇಕಾರ ಸಮ್ಮಾನ್ ಯೋಜನೆಯಿಂದ ಸಂಕಷ್ಟಕ್ಕೊಳಗಾಗಿರುವ ನೇಕಾರರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಂಎಸ್‌ಎಂಇ, ಕೈಮಗ್ಗ ಮತ್ತು ಜವಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093
Discussion about this post