ವಪಿ(ಗುಜರಾತ್): 2019ರ ಲೋಕಸಭಾ ಚುನಾವಣೆಗೆ ಮೂರನೆಯ ಹಂತದ ಮತದಾನ ಮುಕ್ತಾಯವಾಗಿದ್ದು, ದೇಶದಾದ್ಯಂತ ಮತದಾನ ಪ್ರಮಾಣ ಹೆಚ್ಚಾಗಿರುವಂತೆಯೇ, ಅನಿವಾಸಿ ಭಾರತೀಯರು ಸ್ವದೇಶಕ್ಕೆ ಆಗಮಿಸಿ ಮತ ಚಲಾಯಿಸಿದ ಬಹಳಷ್ಟು ಉದಾಹರಣೆಗಳು ಈ ಬಾರಿ ದಾಖಲಾಗಿವೆ. ಇಂತಹ ಸಾಲಿಗೆ ಗುಜರಾತ್’ನಲ್ಲಿ ಮತ ಹೊಂದಿರುವ ಶಿವಮೊಗ್ಗ ಮೂಲದ ಯುವತಿಯೂ ಸೇರಿದ್ದಾರೆ.
ಶಿವಮೊಗ್ಗದ ಹೊಸಮನೆ ಮೂಲದ ಎ. ನರಸಿಂಹ ರಾವ್ ಹಾಗೂ ಕುಟುಂಬಸ್ಥರು ಕೆಲಸ ನಿಮಿತ್ತ ಕಳೆದ 30 ವರ್ಷಗಳಿಂದ ಗುಜರಾತ್’ನ ವಪಿಯಲ್ಲಿ ನೆಲೆಸಿದ್ದಾರೆ. ಇವರ ಪುತ್ರಿ ನಿಖಿತಾ ರಾವ್ ಅವರು ಕತಾರ್ ಏರ್’ವೇಸ್’ನಲ್ಲಿ ಏರ್ ಹೋಸ್ಟಸ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಸಂವಿಧಾನ ತಮಗೆ ನೀಡಿರುವ ಹಕ್ಕನ್ನು ಚಲಾಯಿಸಲೇ ಬೇಕು ಎಂಬ ಕಾರಣದಿಂದ ವಪಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ.
ವಪಿಯ ಚನೋದ್ ಕಾಲೋನಿಯಲ್ಲಿ ನೆಲೆಸಿರುವ ಇವರು ಬೂತ್ ನಂಬರ್ 22ರಲ್ಲಿ ಮತ ಚಲಾಯಿಸಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೊತೆ ದೂರವಾಣಿಯಲ್ಲಿ ಮಾತನಾಡಿದ ನಿಖಿತಾ ರಾವ್, ಭಾರತದ ಸಂವಿಧಾನ ಹಾಗೂ ವ್ಯವಸ್ಥೆ ನಮಗೆ ಮತ ಚಲಾಯಿಸುವ ಪವಿತ್ರ ಹಕ್ಕನ್ನು ನೀಡಿದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವ ದೊಡ್ಡ ಹಬ್ಬ. ಇಂತಹ ಹಬ್ಬದಲ್ಲಿ ಪಾಲ್ಗೊಳ್ಳದೇ ಇದ್ದರೆ ನಾಗರಿಕ ಸಮಾಜಕ್ಕೆ ಅಪಮಾನ ಮಾಡಿದಂತಾಗುತ್ತದೆ ಎಂದರು.
ಅಲ್ಲದೇ, ನಾವು ಕೆಲಸದ ನಿಮಿತ್ತ ಯಾವುದೇ ದೇಶದಲ್ಲಿ, ರಾಜ್ಯದಲ್ಲಿ ಅಥವಾ ಊರಲ್ಲಿ ನೆಲೆಸಿರಲಿ. ಚುನಾವಣೆಯ ದಿನ ಆಗಮಿಸಿ ನಮ್ಮ ಮತ ಚಲಾವಣೆ ಮಾಡಬೇಕಾದ್ದು ನಮ್ಮ ಆದ್ಯ ಕರ್ತವ್ಯ. ನಮ್ಮ ಹಕ್ಕು ಕುರಿತಾಗಿ ಮಾತನಾಡುವ ಮುನ್ನ ನಮ್ಮ ಕರ್ತವ್ಯವನ್ನೂ ಸಹ ನಾವು ಪಾಲಿಸಬೇಕು ಎಂಬ ಸಂದೇಶವನ್ನು ಈಕೆ ಸಾರಿದ್ದಾರೆ.
ನಿಖಿತಾ ರಾವ್ ಅವರ ಈ ಕಾರ್ಯಕ್ಕೆ ವಪಿಯಲ್ಲಿನ ಅವರ ನೆರೆಹೊರೆಯವರು ಹಾಗೂ ಕನ್ನಡ ಸಂಘ ಪ್ರಶಂಸೆ ವ್ಯಕ್ತಪಡಿಸಿದೆ.
ಕಳೆದ 30 ವರ್ಷಗಳಿಂದ ಗುಜರಾತ್’ನ ವಪಿಯಲ್ಲಿ ನೆಲೆಸಿರುವ ನರಸಿಂಹ ರಾವ್ ಕುಟುಂಬ ಅಲ್ಲಿನ ಕನ್ನಡ ಸಂಘಗಳ ಮುಖ್ಯಸ್ಥರಾಗಿ, ಸಕ್ರಿಯವಾಗಿ ಮುನ್ನಡೆಸುತ್ತಿದ್ದಾರೆ.
Discussion about this post