ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ನಾನಾ ದಲಿತ ಸಂಘಟನೆಗಳಿಂದ ದೂರುಗಳು ಬರಲಾರಂಭಿಸಿವೆ ಕೊರತೆ ಇರುವ ಹಣವನ್ನು ನಗರಸಭೆಯಿಂದ ಪಡೆದು ಕಾಮಗಾರಿ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚಿಸಿದರು.
ಅವರು ಮಂಗಳವಾರ ನಗರಸಭೆಯ ವಿಶ್ವೇಶ್ವರಾಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾನಾ ಇಲಾಖೆಗಳ ಪ್ರಗತಿ ಕಾರ್ಯದ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಇದಕ್ಕೆ ದನಿಗೂಡಿಸಿದ ಶಾಸಕ ಬಿ.ಕೆ. ಸಂಗಮೇಶ್ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಕಾಮಗಾರಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ನಿರ್ಮಿತಿ ಕೇಂದ್ರ ಹಾಗೂ ಕೆಅರ್‌ಐಡಿಲ್ ಇಲಾಖೆಗಳು ಅತಿ ಭ್ರಷ್ಟ ಇಲಾಖೆಗಳಾಗಿವೆ. ಅಧಿಕಾರಿಗಳು ಸಕಾಲದಲ್ಲಿ ದೊರೆಯುವುದಿಲ್ಲ. ಯಾವುದೊಂದು ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರೈಸುವಲ್ಲಿ ವಿಳಂಬ ಧೋರಣೆ ತಾಳುತ್ತವೆ. ಈಗಾಗಲೇ ತಾಲೂಕಿನ ಅನೇಕ ಸಂಘಟನೆಗಳು ಕಾಮಗಾರಿಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿವೆ. ತ್ವರಿತಗತಿಯಲ್ಲಿ ಪೂರೈಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದೂದ್’ಪೀರ್ ಮಾತನಾಡಿ ಇಲಾಖೆಯಿಂದ 2 ಕೋಟಿ ರೂ.ಗಳನ್ನು ನೀಡಲಾಗಿದೆ. ಅಲ್ಪ ಹಣದ ಕೊರತೆಯಿಂದ ವಿಳಂಬವಾಗಿದೆ ಸದ್ಯದಲ್ಲಿ ನಗರಸಭೆ ನೀಡುವ 50 ಲಕ್ಷ ರೂ.ಗಳನ್ನು ಕಾಮಗಾರಿಗೆ ವಿನಿಯೋಗಿಸಿಕೊಳ್ಳಲಾಗುವುದು ಎಂದರು.
ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಖಾಲಿ ಇರುವ ಸರಕಾರಿ ಭೂಮಿಗಳನ್ನು ಪರಿಶೀಲಿಸಿ ಯಾವ ಪ್ರದೇಶಗಳಲ್ಲಿ ಸ್ಮಶಾನಗಳು ಇಲ್ಲವೋ ಆ ಪ್ರದೇಶಗಳಿಗೆ ಸ್ಮಶಾನಕ್ಕೆ ಜಾಗವನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದಾಗ ತಹಸೀಲ್ದಾರ್ ಸೋಮಶೇಖರ್ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರೆ, ಅಂತರಗಂಗೆ ಗ್ರಾಮದ ಬಗರ್ ಹುಕುಂ ಸಮಿತಿ ಸದಸ್ಯ ನಾಗೇಶ ಮಾತನಾಡಿ, ಅಂತರಗಂಗೆ ಗ್ರಾಮದ ಬಗರ್ ಹುಕುಂ ಸಮಿತಿ ಸದಸ್ಯ ನಾಗೇಶ್ ಮಾತನಾಡಿ, ಅಂತರಗಂಗೆ ವ್ಯಾಪ್ತಿಯ ಬಸವೇಶ್ವರ ನಗರ, ಕೇಶವಾಪುರ ಸೇರಿದಂತೆ ತಾಲೂಕಿನ ಕೆಲವೆಡೆ ಹಲವು ದಶಕಗಳಿಂದ ವಾಸ ಮಾಡುತಾ ಬಂದಿರುವ ಅನೇಕ ಕುಟುಂಬಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹಕ್ಕುಪತ್ರ ಪಡೆಯಲು ವಿಳಂಭವಾಗುತ್ತಿವೆ. ಹಕ್ಕುಪತ್ರ ಕಂದಾಯ ಇಲಾಖೆ ಅಡ್ಡಿ ಮಾಡುತ್ತಿದ್ದು ಮತ್ತೆ ಕೆಲವಡೆ ಸಾಗುವಳಿ ಮಾಡುತ್ತಿರುವ ಜನರಿಗೆ ಅರಣ್ಯ ಇಲಾಖೆ ತೆರವುಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಅದೇ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಸುಮಾರು 50 ಮನೆಗಳ ಎಸ್’ಟಿ ಸಮುದಾಯದ ಜನರಿಗೆ 94 ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲಾಗಿರುವ ಮೇರೆಗೆ ಅಲ್ಲೆ ವಾಸವಿರುವ ಸುಮಾರು 1200 ಇತರೆ ಜನಾಂಗದವರನ್ನು ಅರಣ್ಯ ಇಲಾಖೆಯು ತೆರವುಗೊಳಿಸದೆ ಪರಿಗಣನೆಗೆ ತೆಗೆದುಕೊಳ್ಳುವಂತೆ ಸಭೆಗೆ ತಿಳಿಸಿದರು.
ಎಸಿಎಫ್ ಸುಬ್ರಮಣ್ಯ ಸಮಜಾಯಿಸಿ ನೀಡಿ ಕಂದಾಯ ಇಲಾಖೆ ಸೇರಿದ್ದಾರೆ ಯಾವುದೇ ಸಮಸ್ಯೆಗಳಿಲ್ಲ. ಡಿನೋಟಿಫಿಕೇಷನ್ ಆದಲ್ಲಿ ಹಾಗೂ ಸೂಕ್ತ ದಾಖಲೆ ಒದಗಿಸಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು. ನಗರಸಭಾ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಮಾತನಾಡಿ, ನಗರಸಭೆಗೆ ಸಮೀಪವಾಗಿರುವ ಗ್ರಾಮಾಂತರ ಭಾಗಗಳಾದ ಬಸವನಗುಡಿ, ಕೊರಲಕೊಪ್ಪ ಸೇರಿದಂತೆ ಸುತ್ತಲ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಮತದಾರರ ಚೀಟಿ, ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಮತ್ತಿತರೆ ದಾಖಲೆಗಳನ್ನು ಪರಿಶೀಲಿಸಿ ಹಕ್ಕುಪತ್ರಗಳನ್ನು ನೀಡುವಂತೆ ಹೇಳಿದರು.
ನಗರಸಭೆ ವತಿಯಿಂದ ಜನರಿಗೆ ಆಶ್ರಯ ಮತ್ತಿತರ ಯೋಜನೆಯಡಿಯಲ್ಲಿ ಮನೆಗಳನ್ನು ಕಟ್ಟ್ಕಿಕೊಡಲು ಮತ್ತು ಆಟೋ ಕಾಂಪ್ಲೆಕ್ಸ್ ನಿರ್ಮಿಸಲು ಜಾಗದ ಅವಶ್ಯಕತೆಯಿರುವುದರಿಂದ ವಿಐಎಸ್’ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಬಳಸಿಕೊಳ್ಳದೆ ಖಾಲಿಬಿಟ್ಟಿರುವ ಜಾಗವನ್ನು ವಶಪಡಿಸಿಕೊಳ್ಳ ಬೇಕಾದ ಅವಶ್ಯಕತೆಯಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಸೂಚನೆ ನೀಡಿ ಸದರಿ ಎರಡೂ ಕಾರ್ಖಾನೆಗಳ ಅಧಿಕಾರಿಗಳಿಗೆ ಜಾಗದ ಕುರಿತ ದಾಖಲಾತಿಗಳೊಂದಿಗೆ ತಮ್ಮನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಿ ಎಂದು ಸೂಚಿಸಿ, ನಿಗಧಿತ ಉದ್ಧೇಶಗಳಿಗೆ ಬಳಸಿಕೊಳ್ಳದೆ ಖಾಲಿಬಿಟ್ಟಿರುವ ಸರಕಾರಿ ಭೂಮಿಗಳನ್ನು ವಶಪಡಿಸಿಕೊಳ್ಳಲು ಅವಕಾಶವಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ರಾಜೀವ್ ಗಾಂಧಿ ಯೋಜನೆಯಡಿ ನಾಲ್ಕು ಸಾವಿರ 3ಜಿ ಗುಂಪು ಮನೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸುಮಾರು ಐದು ಸಾವಿರದ ಇನ್ನೂರು ಅರ್ಜಿಗಳು ಕಛೇರಿಗೆ ದಾಖಲಾಗಿವೆ. ಮುಂದಿನ ದಿನಗಳಲ್ಲಿ ತಿಮ್ಲಾಪುರ ಹಾಗೂ ಮತ್ತಿತರೆ ಭಾಗಗಳಲ್ಲಿ 2500 ಮನೆ ನಿರ್ಮಿಸಲು ಜಾಗದ ಪರಿಶೀಲನೆ ನಡೆಸಿ ಶಾಸಕರ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಫಿಜಿಶಿಯನ್ ಹಾಗೂ ಸರ್ಜನ್ ವೈದ್ಯರನ್ನು ನೇಮಕ ಮಾಡಿದ್ದಲ್ಲಿ ಸಮಸ್ಯೆ ಬಗೆ ಹರಿಸಬಹುದಾಗಿದೆ. ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿದ್ದು ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳನ್ನು ಸಕಾಲದಲ್ಲಿ ನೀಡುವಂತಗಬೇಕೆಂದು ಶಾಸಕರು ಸಭೆಗೆ ತಿಳಿಸಿದಾಗ ಕಾರ್ಮಿಕ ನಿರೀಕ್ಷಕ ಭೀಮೇಶ್ ಸಮಜಾಯಿಸಿ ನೀಡಿ ನೀರಾವರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸಕಾಲದಲ್ಲಿ ಸಂಬಳ ನೀಡದಿರುವುದರ ಬಗ್ಗೆ ಪ್ರಸ್ತಾಪಿಸಿದಾಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿವಕುಮಾರ್ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದರು.
ಲೋಕೋಪಯೋಗಿ, ನೀರಾವರಿ, ಶಿಕ್ಷಣ, ಒಳಚರಂಡಿ, ಆಹಾರ ಮತ್ತು ಪಡಿತರ, ಉಪನೋಂದಣಾಧಿಕಾರಿ, ಮೆಸ್ಕಾಂ, ಸಿಡಿಪಿಒ, ಕಂದಾಯ, ಯುಜಿಡಿ ಸೇರಿದಂತೆ ನಾನಾ ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಹಾಜರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post