ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ತಾಲೂಕು ಆಡಳಿತದ ಕೆಲಸಗಳು ಸಮಾಧಾನಕರವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೊರೋನಾ ವೈರಸ್ ತಡೆಗಟ್ಟುವ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಘೋಷಣೆ ಮಾಡಿರುವುದು ಸರಿಯಾದ ಕ್ರಮವಾಗಿದ್ದು, ಇದನ್ನು ನಾವು ಬೆಂಬಲಿಸುತ್ತೇವೆ. ಆದರೆ, ಸ್ಥಳೀಯ ಮಟ್ಟದಲ್ಲಿ ನೋಡಿದಾಗ ಇದರ ನಿರ್ವಹಣೆ ಸಮಾಧಾನಕರವಾಗಿಲ್ಲ ಎಂದರು.
ನನಗೆ ವೈಯಕ್ತಿಕವಾಗಿ ಹಲವು ಕರೆಗಳು ಬರುತ್ತಿದ್ದು, ಕೊರೋನಾ ವೈರಸ್ ಎನ್ನುತ್ತಾರೆ, ಮಾಸ್ಕ್ ಹಾಕಿ ಎನ್ನುತ್ತಾರೆ. ಆದರೆ, ಅದರ ಕುರಿತು ನಮಗೆ ಏನೂ ತಿಳಿದಿಲ್ಲ. ನಾವು ಏನು ಮಾಡುವುದು ಎಂದು ಗ್ರಾಮೀಣ ಭಾಗದ ಜನ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಹಾಗೂ ನಮ್ಮ ಪಕ್ಷದ ವತಿಯಿಂದ ತಾಲೂಕಿನಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಾಸ್ಕ್ ವಿತರಿಸಿದ್ದು ಮಾತ್ರವಲ್ಲ, ವೈರಸ್ ಕುರಿತು ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ವಿದೇಶದಿಂದ ಕೆಲವು ಮಂದಿ ಸೊರಬಕ್ಕೆ ಬಂದಿದ್ದಾರೆ. ಆದರೆ, ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಇವರನ್ನೆಲ್ಲಾ ಸರಿಯಾದ ರೀತಿಯಲ್ಲಿ ತಪಾಸಣೆಗೆ ಒಳಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ ಗಾಮೆಂಟ್ಸ್ ನೌಕರರನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಮಾಸ್ಕ್ ತಯಾರಿಸಬೇಕು. ಇದರಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಸಲು ಪೂರೈಕೆ ಕೊರತೆ ಕಡಿಮೆ ಮಾಡುವ ಜೊತೆಯಲ್ಲಿ ಗಾರ್ಮೆಂಟ್ಸ್ ನೌಕರರಿಗೂ ಸಹ ಕೆಲಸ ನೀಡಿದಂತಾಗುತ್ತದೆ ಎಂದರು.
ನಮ್ಮ ತಾಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಒಬ್ಬೊಬ್ಬ ವೈದ್ಯಾಧಿಕಾರಿಯನ್ನು ನೇಮಕ ಮಾಡುವ ಮೂಲಕ ಗ್ರಾಮ ಮಟ್ಟದಲ್ಲೇ ಜಾಗೃತಿ ಮೂಡಿಸುವುದು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಲಾಗುತ್ತದೆ ಎಂದು ಮನವಿ ಮಾಡಿದರು.
Get in Touch With Us info@kalpa.news Whatsapp: 9481252093
Discussion about this post