ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಕಾಂಗ್ರೆಸ್ ಮುಕ್ತಗೊಳಿಸಬೇಕೆಂದು ಹೇಳಿದ್ದರು. ಕಾಂಗ್ರೆಸ್ ಪಕ್ಷವು ಜೆಡಿಎಸ್’ಗೆ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಬಿಟ್ಟು ಕೊಟ್ಟಿರುವುದರಿಂದ ಮಾಜಿ ಪ್ರಧಾನಿ ದೇವೇಗೌಡರೇ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತಗೊಳಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕಟಿಕಯಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿರುವ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷಕ್ಕೆ ಎಲ್ಲವನ್ನು ಧಾರೆ ಎರೆದು ಕಾರ್ಯಕರ್ತರಿಗೆ ಅವಮಾನ ಮತ್ತು ಮುಖಭಂಗ ಮಾಡಿದೆ ಎಂದರು.
ಅಭಿವೃದ್ದಿ ವಿಚಾರಗಳು ಬಂದಾಗ ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಬಳಿ ಸೊರಬ, ಬೈಂದೂರು, ಶಿಕಾರಿಪುರ, ಸಾಗರ ಮುಂತಾದ ಕ್ಷೇತ್ರಗಳಿಗೆ ನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಅವರು ಸಹ ನಮ್ಮ ಪರ ಒಳ್ಳೆಯ ಮಾತುಗಳನ್ನಾಡಿರುವುದಕ್ಕೆ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದರು.
ರಾಜಕಾರಣ ಬೇರೆ. ಆದರೆ, ಅಭಿವೃದ್ದಿ ವಿಚಾರಗಳಿಗೆ ಎಲ್ಲರೂ ಒಗ್ಗೂಡಬೇಕಿದೆ. ವಿರೋಧಿ ಅಭ್ಯರ್ಥಿ ಮಧು ಬಂಗಾರಪ್ಪ ಕಳೆದ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರಕ್ಕೆ ಇಣುಕಿ ನೋಡದೆ ವಿದೇಶ ಪ್ರವಾಸದಲ್ಲಿದ್ದು ಮತದಾರರಿಗೆ ಅವಮಾನ ಮಾಡಿದ್ದಾರೆ. ಅಂತಹವರು ಮತ್ತೀಗ ಅಭ್ಯರ್ಥಿಯಾಗಿ ಮತಯಾಚನೆಗೆ ಬಂದಿದ್ದಾರೆ. ಅವರಿಗೆ ತಕ್ಕ ಪಾಠಕಲಿಸಬೇಕಿದೆ ಎಂದು ಮತದಾರರಿಗೆ ಮನವಿ ಮಾಡಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post