ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ವೃದ್ಧೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ವಿಚಾರ ತಾಲೂಕಿನಲ್ಲಿ ಆತಂಕ ಸೃಷ್ಠಿಸಿದೆ.
ಈ ಕುರಿತಂತೆ ಮಾತನಾಡಿರುವ ತಹಶೀಲ್ದಾರ್ ಎಂ.ಪಿ. ಕವಿರಾಜ್ ಅವರು, ಮೃತಪಟ್ಟ ವೃದ್ಧೆಯ ಗಂಟಲು ದ್ರವ ಪರೀಕ್ಷೆಯ ವರದಿ ಸೋಮವಾರ ಬಂದಿದ್ದು, ಕೊರೋನಾ ಸೋಂಕು ದೃಢಪಟ್ಟಿದೆ. ಮೃತ ವೃದ್ಧೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಆದರೂ ಸೋಂಕು ಹೇಗೆ ತಗುಲಿದೆ ಎಂಬುದು ತಿಳಿದುಬಂದಿಲ್ಲ. ಈ ಕುರಿತಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.
ತಾಲೂಕಿನ ಖವಾಸಪುರ ಗ್ರಾಮದ 75 ವರ್ಷದ ವೃದ್ದೆಯೊಬ್ಬರು ಉಸಿರಾಟದ ಸಮಸ್ಯೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಶಿಕಾರಿಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ವೃದ್ಧೆಯನ್ನು ಫ್ಲೂ ಕಾರ್ನರ್’ಗೆ ಕಳುಹಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಶನಿವಾರವೇ ಮೃತಪಟ್ಟಿದ್ದಾರೆ. ಆನಂತರ ಅವರ ಗಂಟಲು ದ್ರವ ತೆಗೆದು ಪರೀಕ್ಷೆಗೆ ರವಾನಿಸಲಾಗಿತ್ತು. ಈ ವರದಿ ಪಾಸಿಟಿವ್ ಬಂದಿದ್ದು, ಈ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಲ್ಯಾಬ್ ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ವೃದ್ಧೆಯ ಮನೆಯ ಸುತ್ತ ಮುತ್ತಲೂ 20 ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕುಟುಂಬದವರನ್ನು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್’ಗೆ ಒಳಪಡಿಸಲಾಗಿದೆ.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Get In Touch With Us info@kalpa.news Whatsapp: 9481252093
Discussion about this post