ಹೊಳಲ್ಕೆರೆ: ಅಪಘಾತದಲ್ಲಿ ಸಾವನ್ನಪ್ಪಿದ್ದ ಪತಿಯ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಡಗವಳ್ಳಿಹಟ್ಟಿಯಲ್ಲಿ ಘಟನೆ ನಡೆದಿದೆ.
ಕೊಡಗವಳ್ಳಿಹಟ್ಟಿ ನಿವಾಸಿ ಸುಮಾ(28) ನೇಣಿಗೆ ಶರಣಾದ ಪತ್ನಿ. ಮೇ 4 ರಂದು ಪತಿ ಆನಂದ್ (32) ಅಪಘಾತದಲ್ಲಿ ಮೃತಪಟ್ಟಿದ್ದರು. ಪತಿ ಸಾವಿನಿಂದ ನೊಂದು ಸುಮಾ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಆನಂದ್ ಮತ್ತು ಸುಮಾ ಪರಸ್ಪರ ಪ್ರೀತಿಸಿ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಇಬ್ಬರ ಸಾಂಸಾರಿಕಾ ಜೀವನ ಚೆನ್ನಾಗಿತ್ತು. ಮೃತ ಆನಂದ್ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಮೇ 4 ರಂದು ಕೆಲಸ ಮುಗಿಸಿ ಗ್ರಾಮಕ್ಕೆ ಬೈಕಿನಲ್ಲಿ ಬರುತ್ತಿದ್ದಾಗ ಅಪಘಾತವಾಗಿ ಆನಂದ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಪತಿ ಮೃತಪಟ್ಟಾಗಿನಿಂದ ಸುಮಾ ಖಿನ್ನತೆಗೆ ಒಳಗಾಗಿದ್ದರು. ಇಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಸುಮಾ ನೇಣಿಗೆ ಶರಣಾಗಿದ್ದಾರೆ.
ಈ ಘಟನೆ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
Discussion about this post